ADVERTISEMENT

ಕನ್ನಡ ಚಿತ್ರಮಂದಿರಗಳಲ್ಲಿ ಸಿನಿಮಾ ಸುಗ್ಗಿ: ಈ ವಾರ ಹತ್ತು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 0:30 IST
Last Updated 12 ಸೆಪ್ಟೆಂಬರ್ 2025, 0:30 IST
<div class="paragraphs"><p>ಅಂಜಲಿ ಅನೀಶ್‌, ಪ್ರವೀಣ್‌ ತೇಜ್‌</p></div>

ಅಂಜಲಿ ಅನೀಶ್‌, ಪ್ರವೀಣ್‌ ತೇಜ್‌

   
ಕನ್ನಡ ಚಿತ್ರಮಂದಿರಗಳಲ್ಲಿ ಸಿನಿಮಾ ಸುಗ್ಗಿ ಮತ್ತೆ ಪ್ರಾರಂಭಗೊಂಡಿದೆ. ಈ ವಾರ ಬರೋಬ್ಬರಿ ಹತ್ತು ಚಿತ್ರಗಳು ತೆರೆಗೆ ಬರುತ್ತಿವೆ. 

ಸೆಪ್ಟೆಂಬರ್ 10

‘ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ’ ಎಂಬ ಸಾಮಾಜಿಕ ಸಂದೇಶ ಹೊಂದಿರುವ ಈ ಚಿತ್ರಕ್ಕೆ ಸಾಯಿಪ್ರಕಾಶ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಜಮ್ಮ ಸಾಯಿಪ್ರಕಾಶ್ ಬಂಡವಾಳ ಹೂಡಿದ್ದಾರೆ. ಶಶಿಕುಮಾರ್, ರಮೇಶ್ ಭಟ್, ಗಣೇಶ ರಾವ್ ಕೇಸರಕರ್‌, ಶ್ರೀರಕ್ಷಾ, ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ. ಜೆ.ಜಿ. ಕೃಷ್ಣ ಛಾಯಾಚಿತ್ರಗ್ರಹಣವಿದೆ. 

ADVERTISEMENT

ಜಂಬೂ ಸರ್ಕಸ್

ಎಂ.ಡಿ.ಶ್ರೀಧರ್ ಹಲವು ವರ್ಷಗಳ ಬಳಿಕ ಮತ್ತೆ ನಿರ್ದೇಶನ ಮಾಡಿರುವ ಚಿತ್ರವಿದು. ಹೆಚ್.ಸಿ.ಸುರೇಶ್ ಮಹತಿ ಕಂಬೈನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಶ್ರೀಧರ್‌ ಈ ಹಿಂದೆ ‘ಬುಲ್ ಬುಲ್’, ‘ಒಡೆಯ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ನಟ ಪ್ರವೀಣ್ ತೇಜ್‌ಗೆ ಅಂಜಲಿ ಎಸ್.ಅನೀಶ್‌ ಜೋಡಿಯಾಗಿದ್ದಾರೆ. ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್, ಸ್ವಾತಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಚಿತ್ರದಲ್ಲಿದ್ದಾರೆ.

‘ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು. ಪೂರ್ತಿ ಹಾಸ್ಯಮಯವಾಗಿದೆ. ಕಥೆಯೊಳಗಿನ ಕಾಲೇಜು ಭಾಗವು ಯುವಕರನ್ನೂ ಸೆಳೆಯುತ್ತದೆ. ನಾಯಕ, ನಾಯಕಿ ಅಂತೇನಿಲ್ಲ. ಚಿತ್ರದ ಪ್ರತಿ ಪಾತ್ರಗಳೂ ಮುಖ್ಯವಾಗಿದ್ದು, ಕಥೆಯನ್ನು ಹೇಳುತ್ತ ಹೋಗುತ್ತವೆ. ಮೂರು ಫೈಟ್, ನಾಲ್ಕು ಹಾಡುಗಳಿವೆ. ಹಿಂದಿನಿಂದಲೂ ನನ್ನ ಜತೆಗಿದ್ದ ತಂತ್ರಜ್ಞರೇ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗಿಲ್ಲ. ಹಾಡುಗಳು, ಟ್ರೇಲರ್‌ ಗಮನ ಸೆಳೆದಿವೆ. ಈತನಕ ಬೇರೆ ಬೇರೆ ಕಾರಣಕ್ಕಾಗಿ ಚಿತ್ರ ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನ ಹೇಗೆ ಸ್ವೀಕರಿಸುತ್ತಾರೆಂದು ನೋಡಬೇಕು’ ಎಂದಿದ್ದಾರೆ ಶ್ರೀಧರ್‌.

ವಾಸುಕಿ ವೈಭವ್ ಸಂಗೀತ, ಕೃಷ್ಣಕುಮಾರ್ ಛಾಯಾಚಿತ್ರಗ್ರಹಣ, ಜ್ಞಾನೇಶ್ ಸಂಕಲನ ಚಿತ್ರಕ್ಕಿದೆ.

ರೂಮ್‌ ಬಾಯ್‌ 

ಲಿಖಿತ್ ಸೂರ್ಯ ನಟನೆಯ ಈ ಚಿತ್ರಕ್ಕೆ ರವಿ ನಾಗಡದಿನ್ನಿ ನಿರ್ದೇಶನವಿದೆ. ‘ಇದೊಂದು ವಿಭಿನ್ನ ಕಥಾಹಂದರದ ಸಿನಿಮಾ. ಸೈಕಾಲಾಜಿಕಲ್ ಸಸ್ಪೆನ್ಸ್ ಕಥಾಹಂದರವಿದೆ. ನಾಯಕ ಲಿಖಿತ್‌ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೋಟೆಲ್‌ ಕೋಣೆಯಲ್ಲಿ ನಡೆಯುವ ಕಥೆ ಹೊಂದಿದ್ದು, ಹೋಟೆಲ್‌ನಲ್ಲಿಯೇ ಪೂರ್ತಿಯಾಗಿ ಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.

ರಕ್ಷಾ ಚಿತ್ರದ ನಾಯಕಿ. ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್, ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

ಸಿನಿಮಾಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದ್ದು, ಧನಪಾಲ್ ನಾಯಕ್ ಛಾಯಾಚಿತ್ರಗ್ರಹಣವಿದೆ.

ಮಿಡಲ್‌ ಕ್ಲಾಸ್‌ ರಾಮಾಯಣ

‘ಬಿಗ್‌ಬಾಸ್‌’ ಖ್ಯಾತಿಯ ಮೋಕ್ಷಿತ ಪೈ ನಾಯಕಿಯಾಗಿ ನಟಿಸಿರುವ ಚಿತ್ರವಿದು. ವಿನು ಗೌಡ ನಾಯಕ. ಧನುಶ್ ಗೌಡ ವಿ. ನಿರ್ದೇಶನವಿದೆ.

‘ಇದೊಂದು ಮಿಡಲ್ ಕ್ಲಾಸ್ ರಾಮಾಯಣ ಎಂಬುದು ಶೀರ್ಷಿಕೆಯಿಂದಲೇ ತಿಳಿಯುತ್ತದೆ. ನಾಯಕ ಕಪ್ಪು ಹುಡುಗಿಯನ್ನು ಯಾಕೆ ಇಷ್ಟ ಪಟ್ಟು ಮದುವೆಯಾದ ಎಂಬುದೇ ಕಥೆ’ ಎಂದಿದ್ದಾರೆ ನಿರ್ದೇಶಕರು.

ಅಂಜನಾದ್ರಿ ಪ್ರೊಡಕ್ಷನ್ ಹಾಗೂ ವಾವ್ ಸ್ಟುಡಿಯೋಸ್ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ ಅವರು ನಿರ್ಮಾಣ ಮಾಡಿದ್ದಾರೆ. ಅಲೆಕ್ಸ್ ಸಂಗೀತ, ವಿನೋದ್ ಲೋಕಣ್ಣನವರ್ ಛಾಯಾಚಿತ್ರಗ್ರಹಣವಿದೆ. ಎಸ್.ನಾರಾಯಣ್, ವೀಣಾ ಸುಂದರ್, ‌ಮಜಾ ಭಾರತ ಜಗಪ್ಪ ಮುಂತಾದವರು ತಾರಾಬಳಗದಲ್ಲಿದ್ದಾರೆ.

S/O ಮುತ್ತಣ್ಣ

ಶ್ರೀಕಾಂತ್ ಹುಣಸೂರು ನಿರ್ದೇಶನದಲ್ಲಿ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ಚಿತ್ರ. ‘ದಿಯಾ’ ಖ್ಯಾತಿಯ ಖುಷಿ ರವಿ ನಾಯಕಿ. ರಂಗಾಯಣ ರಘು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

‘ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ನನ್ನ‌ ತಂದೆಗೆ ಸಮಾನ. ಸೆಟ್‌ನಲ್ಲಿ ಸಾಕಷ್ಟು ತಪ್ಪುಗಳನ್ನು ತಿದ್ದಿ ನಟನೆ ಹೇಳಿಕೊಟ್ಟರು. ಒಂದು ಸುಂದರ ಅನುಭವ ನೀಡುವ ಚಿತ್ರವಿದು. ಖುಷಿ ರವಿ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಛಾಯಾಚಿತ್ರಗ್ರಾಹಕ ಸ್ಕೇಟಿಂಗ್ ಕೃಷ್ಣ ಅವರು ಈ ಚಿತ್ರದಲ್ಲಿ ಕಾಶಿಯನ್ನೂ ತೋರಿಸಿರುವ ಪರಿ ಚೆನ್ನಾಗಿದೆ’ ಎಂದಿದ್ದಾರೆ ಪ್ರಣಂ. 

ಪುರಾತನ ಫಿಲ್ಮ್ಸ್‌ ಬಂಡವಾಳ ಹೂಡಿದೆ. ಸಚಿನ್ ಬಸ್ರೂರ್ ಸಂಗೀತವಿದೆ.

ಖುಷಿ ರವಿ, ಪ್ರಣಂ ದೇವರಾಜ್‌

ಮಾಯಾವಿ

ಬಹುತೇಕ ಹೊಸ ಪ್ರತಿಭೆಗಳಿಂದ ಕೂಡಿರುವ ಚಿತ್ರಕ್ಕೆ ಶಂಕರ್ ಜಿ. ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಇದೊಂದು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಸಿನಿಮಾದ ಕೊನೆಯಲ್ಲೊಂದು ಸಂದೇಶವಿದೆ. ಎಲ್ಲಾ ತರಹದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ. ಪ್ರೀತಿ, ಭಾವನೆ, ಆ್ಯಕ್ಷನ್ ಹೀಗೆ ಎಲ್ಲಾ ಥರದ ಅಂಶಗಳೂ ಈ ಸಿನಿಮಾದಲ್ಲಿವೆ. ಚಿತ್ರದುರ್ಗ, ಬೆಂಗಳೂರು, ಹೊಸಪೇಟೆ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ ನಿರ್ದೇಶಕರು.

ರಘುರಾಮ್‌ಗೆ ನಿಶ್ಚಿತಾ ಶೆಟ್ಟಿ ನಾಯಕಿ. ಉಳಿದಂತೆ ಹಿರಿಯ ನಟ ಎಂ.ಕೆ.ಮಠ, ಸೂರ್ಯಪ್ರವೀಣ್, ಸುರೇಶ ಬಾಬು, ಅನುರಾಧಾ, ಶಿಲ್ಪಾ, ಖುಷಿ ಗೌಡ ಮತ್ತಿತರರು ‘ಮಾಯಾವಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಶ್ರೀದುರ್ಗಾ ಸೆಕ್ಯುರಿಟಿ ಸರ್ವೀಸಸ್’ ಬ್ಯಾನರಿನಲ್ಲಿ  ಮಹಂತೇಶ್ ಹೆಚ್. ಬಂಡವಾಳ ಹೂಡಿದ್ದಾರೆ.

ಚಿತ್ರದ ಎರಡು ಹಾಡುಗಳಿಗೆ ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದು ವಿಜಯಪ್ರಕಾಶ್, ಮೇಘನಾ ಮತ್ತಿತರರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗುರುದತ್ತ ಮುಸುರಿ ಛಾಯಾಚಿತ್ರಗ್ರಹಣ, ಅನಿಲ್ ಕುಮಾರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. 

ನಿದ್ರಾದೇವಿ Next Door

ಪ್ರವೀರ್, ರಿಷಿಕಾ ಜೋಡಿಯಾಗಿ ನಟಿಸಿರುವ ಚಿತ್ರಕ್ಕೆ ಸುರಾಗ್‌ ನಿರ್ದೇಶನವಿದೆ. ಜಯರಾಮ ದೇವಸಮುದ್ರ ಬಂಡವಾಳ ಹೂಡಿದ್ದಾರೆ. ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ನಕುಲ್ ಅಭಯಂಕರ್‌ ಸಂಗೀತ, ಅಜಯ್ ಕುಲಕರ್ಣಿ ಛಾಯಾಚಿತ್ರಗ್ರಹಣ, ಹೇಮಂತ್ ಕುಮಾರ್‌ ಡಿ. ಸಂಕಲನವಿದೆ.

ಇವುಗಳ ಜೊತೆಗೆ ಗುರಿ, ರಕ್ಷಕ, ರಾಮನಗರ ಚಿತ್ರಗಳೂ ತೆರೆ ಕಾಣುತ್ತಿವೆ.

ಪ್ರವೀರ್, ರಿಷಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.