
‘ದಿಯಾ’, ‘ದಸರಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ, ಅರುಣ್ ನಿರ್ದೇಶನದ ‘ಕೆಟಿಎಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆ.16ರಂದು ತೆರೆ ಕಾಣಲಿರುವ ಈ ಸಿನಿಮಾದ ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿತು.
‘ಒಳ್ಳೆಯ ಕಥೆಗೊಂದು ಅದ್ಭುತ ನಟ ಬೇಕು. ಈ ದಾರಿಯಲ್ಲಿ ನನಗೆ ದೀಕ್ಷಿತ್ ಸಿಕ್ಕರು. ನನ್ನ ಕನಸಿಗಿಂತ ಚೆನ್ನಾಗಿ ಈ ಸಿನಿಮಾ ಮೂಡಿಬಂದಿದೆ. ಪಾತ್ರಗಳನ್ನು ಬರೆಯುವುದು ಸುಲಭ. ಆದರೆ ನಾಲ್ಕು ಶೇಡ್ಸ್ ನಿಭಾಯಿಸಿ, ಪಾತ್ರಕ್ಕಾಗಿ ಎಂಟು ಕೆ.ಜಿ. ತೂಕ ಇಳಿಸಿಕೊಂಡು, ಹತ್ತು ತಿಂಗಳು ಗಡ್ಡ, ಮೀಸೆ ತೆಗೆಸಿಕೊಳ್ಳದೆ, ಸಿನಿಮಾಗಾಗಿ ಎರಡು ವರ್ಷ ಮೀಸಲಿಟ್ಟಿದ್ದಾರೆ ದೀಕ್ಷಿತ್. ಇದು ಚಿತ್ರತಂಡಕ್ಕೆ ಸ್ಫೂರ್ತಿಯಾಗಿದೆ. ಸಂಗೀತ ನಿರ್ದೇಶಕ ಚೇತನ್ ಅವರಿಗೆ ಇದು ಮೊದಲನೇ ಸಿನಿಮಾ. ನನಗೆ ಇದು ಎರಡನೇ ಸಿನಿಮಾ. ಇದೊಂದು ಪ್ರೇಮಕಥೆ. ಹಾಗೆಯೇ ಎಲ್ಲರನ್ನೂ ಕಾಡುವ ಸಿನಿಮಾ. ಸುತ್ತಮುತ್ತ ನೋಡುವ ಕಥೆಗಳೇ ಈ ಸಿನಿಮಾದಲ್ಲಿದೆ. ಕೆಟಿಎಂ ಎಂದರೆ ಕೇವಲ ಬೈಕ್ ಅಲ್ಲ. ಆ ಕಥೆ ಏನು ಎಂಬುವುದನ್ನು ಸಿನಿಮಾದಲ್ಲೇ ನೋಡಬೇಕು. ಮೂರು ಹಂತದಲ್ಲಿ ಸಿನಿಮಾವಿದೆ’ ಎನ್ನುತ್ತಾರೆ ಅರುಣ್.
‘ಇವತ್ತಿನ ದಿನಗಳಲ್ಲಿ ಕಲಾವಿದನಿಗೆ ಪ್ರತಿ ದಿನವೂ ಹೋರಾಟವೇ. ಒಂದೇ ಶುಕ್ರವಾರ ಹತ್ತು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ‘ದಿಯಾ’ದಿಂದ ಹಿಡಿದು ಇಲ್ಲಿಯವರೆಗಿನ ಪಯಣದ ಬಗ್ಗೆ ಖುಷಿ ಇದೆ. ತೃಪ್ತಿ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಒಂದೇ ಜಾನರ್‌ನ ಹಾಗೂ ಒಂದೇ ಮಾದರಿಯ ಪಾತ್ರಗಳನ್ನು ಮಾಡಬಾರದು ಎನ್ನುವ ಗುರಿ ನನ್ನದು. ಈ ಹಿನ್ನೆಲೆಯಲ್ಲಿ ಕೆಟಿಎಂ ನೋಡಿದಾಗ ನನ್ನೊಳಗಿನ ಕಲಾವಿದನ ಸಂಪೂರ್ಣ ಪರಿಚಯವಾಗುತ್ತದೆ’ ಎಂದರು ದೀಕ್ಷಿತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.