ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್ 2025ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ (ಅ.8) 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಹಾಗೂ ಚಿತ್ರದಲ್ಲಿನ ನಟನೆಗಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯ್ ಕಿರಗಂದೂರು, ‘ಕಾಂತಾರ ಚಿತ್ರದ ಪ್ರೀಕ್ವೆಲ್‌ನ ಚಿತ್ರೀಕರಣ ನಡೆಯುತ್ತಿದೆ. ಇಡೀ ತಂಡ ಕುಂದಾಪುರದಲ್ಲೇ ಉಳಿದುಕೊಂಡು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. 2025ರ ಆಗಸ್ಟ್‌ನಲ್ಲಿ ಚಿತ್ರವನ್ನು ತೆರೆಯಲ್ಲಿ ನಿರೀಕ್ಷೆ ಮಾಡಬಹುದು’ ಎಂದಿದ್ದಾರೆ. ಜೊತೆಗೆ ಯಶ್ ನಟನೆಯ ಕೆ.ಜಿ.ಎಫ್. ಸಿನಿಮಾದ ಮೂರನೇ ಭಾಗ ಕುರಿತು ನಾಲ್ಕೈದು ತಿಂಗಳಲ್ಲಿ ಅಪ್‌ಡೇಟ್ ಕೊಡುವುದಾಗಿ ಹೇಳಿದ್ದಾರೆ.
ಕಾಂತಾರ ಪ್ರೀಕ್ವೆಲ್‌ಗಾಗಿ ರಿಷಬ್ ದೈಹಿಕವಾಗಿಯೂ ಬದಲಾಗಿದ್ದು, ಸಿನಿಮಾಗಾಗಿ ಹತ್ತು ಕೆ.ಜಿ. ಏರಿಸಿಕೊಂಡು, ಎಂಟು ಕೆ.ಜಿ. ಇಳಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಹೆಚ್ಚಿನ ಪ್ರಮಾಣದ ಆ್ಯಕ್ಷನ್ಸ್ ಇದ್ದು, ಕಳರಿಪಯಟ್ಟು ತರಬೇತಿಯನ್ನೂ ರಿಷಬ್ ಪಡೆದಿದ್ದಾರೆ. ಪ್ರೀಕ್ವೆಲ್ ಅನ್ನು ಈಗಾಗಲೇ ಪ್ರೈಂ ವಿಡಿಯೊ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಇದಾಗಿದ್ದು, ಕನ್ನಡ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಚಿತ್ರಗ್ರಹಣ ಸೇರಿದಂತೆ ಮೊದಲ ಭಾಗದಲ್ಲಿ ಕಾರ್ಯನಿರ್ವಹಿಸಿದ್ದ ತಾಂತ್ರಿಕ ತಂಡವೇ ಪ್ರೀಕ್ವೆಲ್‌ನಲ್ಲೂ ಕೆಲಸ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.