ಹೊಂಬಾಳೆ ಫಿಲ್ಮ್ಸ್ ಮತ್ತು ಪಿವಿಆರ್ ಐನಾಕ್ಸ್ ಸಂಸ್ಥೆಗಳು ತಮ್ಮ ಲಾಂಛನಕ್ಕೆ ಕಾಂತಾರದ ಜ್ವಾಲೆಯನ್ನು ಸೇರಿಸಿ ಹೊಸ ರೀತಿಯ ಪ್ರಚಾರಕ್ಕೆ ಕಾರ್ಯಕ್ಕೆ ಚಾಲನೆ ನೀಡಿವೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಅ.2ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಈ ವಾರ ತೆರೆ ಕಂಡಿರುವ ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳ ನಡುವೆ ಈ ಸಿನಿಮಾವನ್ನು ಪ್ರಚಾರ ಮಾಡಲು ನಿರ್ಮಾಣ ಸಂಸ್ಥೆ ಮುಂದಾಗಿದೆ.
‘ಗುರುವಾರ ತೆರೆಕಂಡಿರುವ ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳನ್ನು ನೋಡಲು ಬರುವ ಪ್ರೇಕ್ಷಕರು ಎಲ್ಲಾ ಪಿವಿಆರ್ ಐನಾಕ್ಸ್ ಚಿತ್ರಮಂದಿರಗಳಲ್ಲಿ ಕಾಂತಾರದ ಜ್ವಾಲೆಯ ಅನಿಮೇಷನ್ ಹೊಂದಿರುವ ಲಾಂಛನವನ್ನು ನೋಡಲಿದ್ದಾರೆ. ಅತ್ಯಾಧುನಿಕ ಪ್ರೊಜೆಕ್ಷನ್ ವ್ಯವಸ್ಥೆ ಮತ್ತು ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಈ ಲಾಂಛನವನ್ನು ವಿಶೇಷವಾಗಿ ರೂಪಿಸಲಾಗಿದೆ. ಇದು ಕಾಂತಾರ ಚಿತ್ರದ ಮೂಲ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಪಿವಿಆರ್ ಐನಾಕ್ಸ್‌ನ ಎಲ್ಲಾ ಚಿತ್ರಮಂದಿರಗಳ ದೊಡ್ಡ ಪರದೆಗಳ ಮೇಲೆ ಈ ಲಾಂಛನ ಪ್ರದರ್ಶನಗೊಳ್ಳಲಿದೆ’ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.
‘ಕಾಂತಾರ’ ಚಿತ್ರದ ಬೃಹತ್ ಯಶಸ್ಸಿನಿಂದ ಅದರ ಹಿಂದಿನ ಕಥೆಯನ್ನು ಹೊಂದಿರುವ ಚಾಪ್ಟರ್–1 ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕಾಗಿ ನಾಯಕ ರಿಷಬ್ ಶೆಟ್ಟಿ ಸಾಕಷ್ಟು ಹೊಸ ಸಾಹಸಕಲೆಗಳನ್ನು ಅಭ್ಯಾಸ ಮಾಡಿದ್ದಾರೆ. ಗುಳಿಗ ತುಳುನಾಡಿಗೆ ಬಂದ ಹಿನ್ನೆಲೆಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ರಿಷಬ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.