ಕಾಂತಾರ ಸಿನಿಮಾದ ಪೋಸ್ಟರ್
–ಸಂಗ್ರಹ ಚಿತ್ರ
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್–1’ ಸಿನಿಮಾ ನಾಳೆ (ಅ.2) ದೇಶದಾದ್ಯಂತ ಏಳು ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಬಿಡುಗಡೆಯಾಗಲಿದೆ.
ಭಾರತವಷ್ಟೇ ಅಲ್ಲದೆ ಏಕಕಾಲದಲ್ಲಿ ಸುಮಾರು 30 ದೇಶಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ. ಹಲವು ಏಕಪರದೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಈಗಾಗಲೇ ಮೊದಲ ದಿನದ ಶೋಗಳು ಹೌಸ್‌ಫುಲ್ ಆಗಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳು ಪ್ರತಿದಿನ 26–27 ಪ್ರದರ್ಶನಗಳನ್ನು ‘ಕಾಂತಾರ’ ಸಿನಿಮಾಗಾಗಿಯೇ ನೀಡಿವೆ. ಏಕಪರದೆ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6.30ರಿಂದಲೇ ಪ್ರದರ್ಶನಗಳು ಆರಂಭಗೊಳ್ಳಲಿವೆ. ಬೆಂಗಳೂರಿನಲ್ಲೇ 100ಕ್ಕೂ ಅಧಿಕ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಕಾಂತಾರ’ ತೆರೆಕಾಣುತ್ತಿದೆ. ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ವಾರದ ಹಿಂದಷ್ಟೇ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಹೀಗಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಕಾಂತಾರ’ ಸಿನಿಮಾದ ಟಿಕೆಟ್ ದರ ಗರಿಷ್ಠ ₹1000 ತಲುಪಿದೆ. ಕನಿಷ್ಠ ದರವೇ ₹250–300 ಇದೆ.
ಚಿತ್ರತಂಡ ಈಗಾಗಲೇ ಹೈದರಾಬಾದ್, ಮುಂಬೈನಲ್ಲಿ ಪ್ರಚಾರ ನಡೆಸಿದೆ. ಚೆನ್ನೈನಲ್ಲಿ ಮಂಗಳವಾರ (ಸೆ.30) ಪ್ರಚಾರ ಕಾರ್ಯಕ್ರಮ ನಡೆಯಬೇಕಿತ್ತು. ಕರೂರಿನಲ್ಲಿ ನಡೆದ ದುರಂತದ ಕಾರಣ ಈ ಕಾರ್ಯಕ್ರಮವನ್ನು ಚಿತ್ರತಂಡ ರದ್ದುಗೊಳಿಸಿತು. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿದ್ದು, ಮಲಯಾಳ ನಟ ಜಯರಾಮ್, ಕನ್ನಡಿಗರೇ ಆದ ಬಾಲಿವುಡ್ ನಟ ಗುಲ್ಶನ್ ದೇವಯ್ಯ ತಾರಾಬಳಗದಲ್ಲಿದ್ದಾರೆ. ಕೇರಳದಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಬಿಡುಗಡೆ ಮಾಡಲಿದ್ದು, ನೇಪಾಳ ಸೇರಿದಂತೆ ಉತ್ತರ ಭಾರತದಲ್ಲಿ ಈ ಸಿನಿಮಾವನ್ನು ಎಎ ಫಿಲ್ಮ್ಸ್ ಬಿಡುಗಡೆ ಮಾಡಲಿದೆ. ಪ್ರೀಕ್ವೆಲ್ ಅನ್ನು ಈಗಾಗಲೇ ಪ್ರೈಂ ವಿಡಿಯೊ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಇದಾಗಿದ್ದು, ಕನ್ನಡ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಚಿತ್ರಗ್ರಹಣ ಈ ಸಿನಿಮಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.