
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್–1’ ಸಿನಿಮಾ 2025ರಲ್ಲಿ ವಿಶ್ವದಾದ್ಯಂತ ಅತ್ಯಧಿಕ ಹಣ ಗಳಿಸಿದ ಭಾರತೀಯ ಚಿತ್ರವಾಗಿದೆ. ಸಿನಿಮಾವು ಇಲ್ಲಿಯವರೆಗೆ ₹818 ಕೋಟಿ ಕಲೆಕ್ಷನ್ ಮಾಡಿದ್ದು, ಈ ಮೂಲಕ ವಿಕ್ಕಿ ಕೌಶಲ್ ನಟನೆಯ ಹಿಂದಿಯ ‘ಛಾವಾ’ ಸಿನಿಮಾವನ್ನು ಹಿಂದಿಕ್ಕಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ ಮೂರು ವಾರ ಉರುಳಿದ್ದರೂ ಹಲವೆಡೆ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಚಿತ್ರವು ಕರ್ನಾಟಕ ರಾಜ್ಯವೊಂದರಲ್ಲೇ ₹250 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ಈ ಗಡಿ ದಾಟಿದ ಮೊದಲ ಕನ್ನಡ ಚಲನಚಿತ್ರ ಎಂಬ ದಾಖಲೆಯನ್ನು ಬರೆದಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯ ಕ್ಷಣ ಎಂದಿದೆ ಹೊಂಬಾಳೆ ಫಿಲ್ಮ್ಸ್.
ಈಗಾಗಲೇ ಭಾರತದ ಹಲವು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಿರುವ ‘ಕಾಂತಾರ’ ಸಿನಿಮಾದ ಇಂಗ್ಲಿಷ್ ಆವೃತ್ತಿಯು ಅ.31ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈ ಮೂಲಕ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಲು ತಂಡ ತಯಾರಿ ಆರಂಭಿಸಿದೆ. ಸಿನಿಮಾದಲ್ಲಿ ‘ಬೆರ್ಮೆ’ ಎಂಬ ಪಾತ್ರದಲ್ಲಿ ರಿಷಬ್ ನಟಿಸಿದ್ದು, ಈ ಪಾತ್ರಕ್ಕೆ ಸಜ್ಜಾದ ವಿಡಿಯೊವೊಂದನ್ನು ರಿಷಬ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಕಳರಿಪಯಟ್ಟು ಕಲಿತು, ಜಿಮ್‌ನಲ್ಲಿ ದೇಹದಂಡಿಸಿ ಯಾವುದೇ ಡ್ಯೂಪ್ ಬಳಸದೆ ಸಾಹಸ ದೃಶ್ಯಗಳನ್ನು ತಾವೇ ನಿರ್ವಹಿಸಿದ ಬಗೆಯನ್ನು ಈ ವಿಡಿಯೊದಲ್ಲಿ ತೋರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.