ರಿಷಬ್ ಶೆಟ್ಟಿ
ಬೆಂಗಳೂರು: ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್–1’ ಸಿನಿಮಾ ದೇಶದಾದ್ಯಂತ ಸುಮಾರು ಏಳು ಸಾವಿರ ತೆರೆಗಳಲ್ಲಿ ಅ.2ರಂದು ಬಿಡುಗಡೆಯಾಗಲಿದೆ.
ಸಿನಿಮಾ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು, ‘ದೇಶದಾದ್ಯಂತ ಏಳು ಸಾವಿರ ತೆರೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಏಕಕಾಲದಲ್ಲಿ ಸುಮಾರು 30 ದೇಶಗಳಲ್ಲಿ ಸಿನಿಮಾ ತೆರೆಕಾಣಲಿದ್ದು, ಮೊದಲ ಬಾರಿಗೆ ದಕ್ಷಿಣ ಅಮೆರಿಕದಲ್ಲಿ ಸ್ಪ್ಯಾನಿಶ್ ಭಾಷೆಯಲ್ಲಿ ಡಬ್ ಆಗಿ ಸಿನಿಮಾ ಬಿಡುಗಡೆಯಾಗಲಿದೆ. ಸೆ.27ರಿಂದ ತಂಡ ಪ್ರಚಾರಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಲಿದೆ’ ಎಂದರು.
ಸಿನಿಮಾ ಟಿಕೆಟ್ ದರ ಮಿತಿ ವಿಚಾರವಾಗಿ ಹೊಂಬಾಳೆ ಫಿಲ್ಮ್ಸ್ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ವೇದಿಕೆಯಲ್ಲಿ ಉತ್ತರಿಸಲು ವಿಜಯ್ ಕಿರಗಂದೂರು ನಿರಾಕರಿಸಿದರು.
ಸಾಕಷ್ಟು ಅಡೆತಡೆಗಳು
‘ಐದು ವರ್ಷದ ‘ಕಾಂತಾರ’ದ ಪಯಣದಲ್ಲಿ ಸಿನಿಮಾ ಪೂರ್ಣಗೊಳಿಸಲಾಗದಷ್ಟು ಅಡೆತಡೆಗಳನ್ನು ಎದುರಿಸಿದ್ದೇವೆ. ಈ ಸಂದರ್ಭದಲ್ಲಿ ನನ್ನ ಬೆನ್ನಹಿಂದೆ ನಿಂತಿದ್ದು ನನ್ನ ಪತ್ನಿಯಾದ ಪ್ರಗತಿ. ಅವಳು ಹೊತ್ತ ಹರಕೆಗಳಿಗೆ ಲೆಕ್ಕವಿಲ್ಲ. ಅತ್ತು ಬಿಡುವಷ್ಟು ಭಾವನಾತ್ಮಕ ಪಯಣವೂ ಇದಾಗಿತ್ತು. ಮಕ್ಕಳನ್ನು ನೋಡುವಷ್ಟು ಸಮಯವೂ ನನಗೆ ಇರಲಿಲ್ಲ. ಎಲ್ಲವನ್ನೂ ಪ್ರಗತಿ ನಿಭಾಯಿಸುತ್ತಿದ್ದಳು. ಮೂರು ತಿಂಗಳಿಂದ ಸರಿಯಾಗಿ ನಿದ್ದೆಯೇ ಮಾಡಿಲ್ಲ. ‘ಕಾಂತಾರ’ ಸಿನಿಮಾ ಮಾಡಲು ಪ್ರಾರಂಭಿಸಿದ ಮೇಲೆ ಸೆಟ್‌ನಲ್ಲಿ ಹಾಗಾಯಿತು, ಹೀಗಾಯಿತು ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಲೆಕ್ಕಹಾಕಿದರೆ ನಾಲ್ಕೈದು ಬಾರಿ ನಾನೇ ಸಾಯುವಂತಹ ಘಟನೆಗಳು ನಡೆದಿದ್ದವು. ಇವತ್ತು ನಾನು ಬದುಕಿ ಬಂದು, ಹೆಗಲ ಮೇಲೆ ಹೊತ್ತು ಈ ಸಿನಿಮಾವನ್ನು ಜನರ ಮುಂದೆ ಇಟ್ಟಿದ್ದೇನೆ ಎಂದರೆ ಅದಕ್ಕೆ ಆ ದೈವದ ಆಶೀರ್ವಾದವೇ ಕಾರಣ’ ಎಂದರು ನಟ ರಿಷಬ್ ಶೆಟ್ಟಿ.
‘ಈ ಸಿನಿಮಾಗಾಗಿ ದೈವಗಳ ಬಗ್ಗೆ ಸಂಶೋಧನೆ ಮಾಡಿರುವ ಪ್ರಾಧ್ಯಾಪಕರ ಜೊತೆ ಚರ್ಚಿಸಿ, ಸಂಶೋಧನೆಗಳನ್ನು ಮಾಡುತ್ತಾ ಮೂಲ ಕಥೆಯನ್ನು ರಚಿಸಿದ್ದೆ. ಕಳರಿಪಯಟ್ಟನ್ನು ಒಂದು ದೃಶ್ಯಕ್ಕಾಗಿ ನಾನು ಅಭ್ಯಾಸ ಮಾಡಿಲ್ಲ. ವ್ಯಾಯಾಮದ ಒಂದು ಭಾಗವಾಗಿರುವ ಈ ಕಲೆಯನ್ನು ಸಿನಿಮಾದ ಕಥೆಯೊಳಗೆ ಅಳವಡಿಸಿದ್ದೇನೆ. ಈ ಸಿನಿಮಾದಿಂದ ಸುಮಾರು 4.5 ಲಕ್ಷ ಗಂಟೆಯ ಕೆಲಸ ಜನರಿಗೆ ದೊರಕಿತ್ತು. ಸಿನಿಮಾ ಸ್ಥಳೀಯ ಊರಿನ ಜನರಿಗೂ ಉದ್ಯೋಗ ನೀಡಿತ್ತು’ ಎಂದರು ರಿಷಬ್.
ನಾನಾವತರಾಗಳಲ್ಲಿ ರಿಷಬ್
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕಾಂತಾರ’ ಪ್ರೀಕ್ವೆಲ್ ಅ.2ರಂದು ತೆರೆಕಾಣುತ್ತಿದೆ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ನಾನಾವತಾರಗಳಲ್ಲಿ ರಿಷಬ್ ತೆರೆ ಮೇಲೆ ಬರಲಿದ್ದಾರೆ. ಹಿಂದಿ ಟ್ರೇಲರ್ ಅನ್ನು ನಟ ಹೃತಿಕ್ ರೋಶನ್ ತಮಿಳಿನ ಟ್ರೇಲರ್ ಅನ್ನು ನಟ ಶಿವಕಾರ್ತಿಕೇಯನ್ ಮಲಯಾಳ ಟ್ರೇಲರ್ ಅನ್ನು ನಟ ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಭಾಸ್ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆಗೊಳಿಸಿದರು. ‘ಕಾಂತಾರ’ ಸಿನಿಮಾದಲ್ಲಿ ‘ಶಿವ’ನ ತಂದೆ ಕಾಣೆಯಾದ ಜಾಗದಿಂದ ‘ಪ್ರೀಕ್ವೆಲ್’ನ ಕಥೆ ಆರಂಭವಾಗಲಿದೆ. ‘ಶಿವ’ನ ಹಿರಿಯರ ಕಥೆ ‘ಪ್ರೀಕ್ವೆಲ್’ನಲ್ಲಿದ್ದು ಧರ್ಮ ಕಾಪಾಡಲು ಬಂದ ಶಿವನ ಗಣದ ಉಲ್ಲೇಖ ಇಲ್ಲಿದೆ. ಆದಿ ದೈವ ಎಂದು ಕರೆಯಲ್ಪಡುವ ‘ಬೆರ್ಮೆ’ಯ ಸುತ್ತ ಈ ಸಿನಿಮಾ ಸಾಗುತ್ತದೆ. ‘ಈಶ್ವರ’ನಾಗಿಯೂ ರಿಷಬ್ ಶೆಟ್ಟಿ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಕುಮಾರಿಯಾಗಿ ರುಕ್ಮಿಣಿ ವಸಂತ್ ‘ರಾಜ’ನಾಗಿ ಮಲಯಾಳ ನಟ ಜಯರಾಮ್ ‘ಕುಲಶೇಖರ’ ಎಂಬ ಪಾತ್ರದಲ್ಲಿ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಚಿತ್ರದಲ್ಲಿದ್ದಾರೆ.
ಮಣ್ಣಿನ ಮಕ್ಕಳಷ್ಟೇ ಇದ್ದರೆ ಅಚ್ಚುಕಟ್ಟು
‘ಮೊದಲ ಭಾಗ ಮಾಡಿದಾಗ ಅದೊಂದು ಕನ್ನಡದ ಸಿನಿಮಾವಾಗಿತ್ತು. ಎರಡನೇ ಭಾಗ ಆರಂಭಿಸಿದ ಸಂದರ್ಭದಲ್ಲಿ ಕನ್ನಡಿಗರೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದರು. ಕಥೆ ಯಾರನ್ನು ಆಯ್ಕೆ ಮಾಡುತ್ತದೆ ಎನ್ನುವುದು ಮುಖ್ಯ. ಕಥೆಯೇ ಕಲಾವಿದರನ್ನು ಕೇಳಬೇಕು. ಇದನ್ನು ಹೊರತುಪಡಿಸಿ ಖ್ಯಾತನಾಮರನ್ನು ತಂದು ಪಾತ್ರಗಳನ್ನು ಮಾಡಿಸಿದರೆ ಅದು ಫಲಿಸುವುದಿಲ್ಲ. ಸಿನಿಮಾಗೂ ಇದರಿಂದ ಅನ್ಯಾಯವಾಗುತ್ತದೆ. ನಮ್ಮ ಸಿನಿಮಾದಲ್ಲಿ ಸ್ಥಳೀಯ ಜನರ ಜೊತೆಗೆ ಎಲ್ಲಾ ರಾಜ್ಯಗಳ ಜನರು ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಘರ್ಷವನ್ನು ಸ್ವಲ್ಪ ಆಳವಾಗಿ ವಿಶ್ಲೇಷಿಸಿದ್ದೇವೆ. ಹೇಳುತ್ತಿರುವುದೇ ಮಣ್ಣಿನ ಕಥೆಯನ್ನಾದ ಕಾರಣ ಮಣ್ಣಿನ ಮಕ್ಕಳಷ್ಟೇ ಇದ್ದರೆ ಸಿನಿಮಾ ಅಚ್ಚುಕಟ್ಟಾಗಿ ಬರಲು ಸಾಧ್ಯ’ ಎನ್ನುತ್ತಾರೆ ರಿಷಬ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.