ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ’ ಪ್ರೀಕ್ವೆಲ್‌ನ ತಾರಾಬಳಗ ಇಷ್ಟು ದಿನ ಗೌಪ್ಯವಾಗಿಯೇ ಇತ್ತು. ರಿಷಬ್ ಶೆಟ್ಟಿ ಅವರ ಪಾತ್ರವನ್ನು ಹೊರತುಪಡಿಸಿ ಇನ್ಯಾವ ಪಾತ್ರಗಳ ಗುಟ್ಟನ್ನು ತಂಡ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರ ನಾಯಕಿಯನ್ನು ಹೊಂಬಾಳೆ ಫಿಲ್ಮ್ಸ್ ಪರಿಚಯಿಸಿದೆ. ನಟಿ ರುಕ್ಮಿಣಿ ವಸಂತ್ ‘ಕನಕವತಿ’ಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ದಿನವೇ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ‘ಬೀರ್‌ಬಲ್’ ಬೆಡಗಿಯಾಗಿ ಚಂದನವನ ಪ್ರವೇಶಿಸಿದ್ದ ರುಕ್ಮಿಣಿ ವಸಂತ್ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ‘ಪುಟ್ಟಿ’ಯಾಗಿ ಎಲ್ಲರಿಗೂ ಪರಿಚಿತ. ‘ಬಾನದಾರಿಯಲ್ಲಿ’, ‘ಬಘೀರ’, ‘ಭೈರತಿ ರಣಗಲ್’ ಬಳಿಕ ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆ ತೆರೆಹಂಚಿಕೊಂಡಿದ್ದರು ರುಕ್ಮಿಣಿ. ನಂತರದಲ್ಲಿ ಕಾಲಿವುಡ್‌ನ ಖ್ಯಾತ ನಟ ಶಿವಕಾರ್ತಿಕೇಯನ್ ನಟನೆಯ ಮುರುಗದಾಸ್ ನಿರ್ದೇಶನದ ‘ಮದರಾಸಿ’ ಸೆಟ್ಟೇರಿತ್ತು. ಈ ಸಿನಿಮಾ ಸೆ.5ಕ್ಕೆ ತೆರೆಕಾಣಲಿದ್ದು, ಇದಾಗಿ ಒಂದು ತಿಂಗಳಲ್ಲೇ ಅಂದರೆ ಅ.2ರಂದು ‘ಕಾಂತಾರ’ ಪ್ರೀಕ್ವೆಲ್ ರಿಲೀಸ್ ಆಗಲಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕಾಂತಾರ’ ಪ್ರೀಕ್ವೆಲ್‌ನ ಚಿತ್ರೀಕರಣದ ದೃಶ್ಯಗಳ ತುಣುಕುಗಳನ್ನು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಬಿಡುಗಡೆಗೊಳಿಸಿತ್ತು. ಸಿನಿಮಾಗಾಗಿ ನೂರಾರು ಕೋಟಿ ವ್ಯಯಿಸಿರುವ ಹೊಂಬಾಳೆ ಅದ್ದೂರಿಯಾದ ಹೊಸ ಲೋಕವನ್ನೇ ಈ ಸಿನಿಮಾಗಾಗಿ ಸೃಷ್ಟಿಸಿದೆ. ಕುಂದಾಪುರ ಬಳಿ 25 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ ಈ ಸಿನಿಮಾದ ಕಾಲ್ಪನಿಕ ಊರನ್ನು ಸೃಷ್ಟಿಸಲಾಗಿತ್ತು. ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಯುವರಾಣಿಯ ವೇಷದಲ್ಲಿ ರುಕ್ಮಿಣಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಛಾಯಾಚಿತ್ರಗ್ರಹಣ ಹಾಗೂ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ಆಸ್ಕರ್ ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ಮಲಯಾಳ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಪ್ರೀಕ್ವೆಲ್ ಅನ್ನು ಈಗಾಗಲೇ ಪ್ರೈಮ್ ವಿಡಿಯೊ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.