ADVERTISEMENT

ಕರಣ್ ಜೋಳಿಗೆಯಲ್ಲಿದೆ ಸಲಿಂಗಿಗಳ ರೊಮ್ಯಾನ್ಸ್‌ ಕತೆ

ಬಾಲಿವುಡ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:46 IST
Last Updated 30 ಜನವರಿ 2019, 19:46 IST
ಕರಣ್ ಜೋಹರ್
ಕರಣ್ ಜೋಹರ್   

ಬಾಲಿವುಡ್‌ ಚಿತ್ರ ನಿರ್ಮಾಪಕ ಕರಣ್ ಜೋಹರ್‌ ಮೊನ್ನೆ ದೂರದ ಸ್ವಿಟ್ಜರ್ಲೆಂಡ್‌ನಿಂದ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದರು. ಅವರ ಮುಂದಿರುವ ವಸ್ತು ಸಲಿಂಗಿಗಳ ಪ್ರೀತಿ, ಪ್ರೇಮ, ಪ್ರಣಯ.

ಪ್ರೀತಿ ಮತ್ತು ಪ್ರಣಯವನ್ನು ರಸವತ್ತಾಗಿ ಚಿತ್ರಿಸುವಲ್ಲಿ ನಿಸ್ಸೀಮರೆನಿಸಿರುವ ಕೆಜೋ, ಸಲಿಂಗಿಗಳ ಪ್ರೇಮವನ್ನು ತೆರೆಗೆ ತರಲು ಇದು ಸಕಾಲ ಎಂದಿದ್ದಾರೆ.

‘ಸಲಿಂಗಿಗಳ ಪ್ರೇಮ ಸಂಬಂಧದ ಉತ್ಕಟತೆ ಮತ್ತು ಎಲ್ಲಾ ಆಯಾಮಗಳನ್ನು ಸಿನಿಮಾದಲ್ಲಿ ತೋರಿಸಲಿದ್ದೇನೆ. ಇಬ್ಬರು ದಿಗ್ಗಜ ನಾಯಕನಟರನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಿದ್ದೇನೆ. ಆದರೆ ಆ ಇಬ್ಬರು ಯಾರು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ‘ ಎಂದೂ ಕೆಜೋ ವಿವರಿಸಿದ್ದಾರೆ.

ADVERTISEMENT

2008ರಲ್ಲಿ ಕೇಜೊ ಮತ್ತು ಹೀರೂ ಯಶ್‌ ಜೋಹರ್‌ ನಿರ್ಮಿಸಿದ್ದ ‘ದೋಸ್ತಾನ’ ಸಲಿಂಗಿಗಳ ಸಹಬಾಳ್ವೆಯ ಕತೆಯನ್ನು ಒಳಗೊಂಡಿತ್ತು. ಇಬ್ಬರು ಯುವಕರು (ಅಭಿಷೇಕ್‌ ಬಚ್ಚನ್‌ ಮತ್ತು ಜಾನ್‌ ಅಬ್ರಾಹಂ) ಸಲಿಂಗಿಗಳಂತೆ ನಟಿಸಿ ಗೆಳತಿ (ಪ್ರಿಯಾಂಕಾ ಚೋಪ್ರಾ) ಜೊತೆ ಒಂದೇ ಮನೆಯಲ್ಲಿ ವಾಸ ಮಾಡುವ ಹಾಗೂ ಇಬ್ಬರಿಗೂ ಆಕೆಯೊಂದಿಗೆ ಪ್ರೀತಿ ಮೊಳೆಯುವ ಕತೆ
‘ದೋಸ್ತಾನ’ ಚಿತ್ರದ್ದು.

ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್‌ ನಟಿಸಿದ್ದ ‘ಫೈರ್‌’ ಚಿತ್ರಕ್ಕೆ ಕೆಲವು ರಾಜಕೀಯ ಪಕ್ಷಗಳು ಮತ್ತು ಮುಖಂಡರಿಂದ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆಗಳು ಎದುರಾಗಿದ್ದವು.

ಆದರೆ ಸಲಿಂಗಿಗಳ ಕತೆಯುಳ್ಳ ಚಿತ್ರಕ್ಕೆ ನಮ್ಮ ದೇಶದಲ್ಲಿ ನಿರೀಕ್ಷಿತ ಉತ್ತೇಜನ ಸಿಗುತ್ತಿಲ್ಲ ಎಂಬ ನೋವೂ ಕೆಜೋ ಅವರಿಗಿದೆ. ‘ಪ್ರಮುಖ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕನಾಗಿ ಸಲಿಂಗಿಗಳ ಪ್ರೀತಿ ಕುರಿತ ಸಿನಿಮಾವನ್ನು ಮಾಡಿ ಯಶಸ್ವಿಯಾಗುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ. ಸದ್ಯದಲ್ಲೇ ಅಂತಹ ಚಿತ್ರವನ್ನು ಮಾಡುತ್ತೇನೆ ಕೂಡಾ’ ಎಂದು ತಮ್ಮ ದೃಢನಿರ್ಧಾರವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಕೆಜೋ ಪಾಲ್ಗೊಂಡು ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

ಒಟ್ಟಿನಲ್ಲಿ ಕರಣ್‌ ಜೋಹರ್‌ ಅವರ ಜೋಳಿಗೆಯಲ್ಲಿ ಸಲಿಂಗಿಗಳ ರೊಮ್ಯಾನ್ಸ್‌ ಕತೆಯೊಂದು ಬೆಚ್ಚಗೆ ಕುಳಿತಿದೆ ಎಂದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.