ADVERTISEMENT

ಸಿನಿ ಸುದ್ದಿ | ‘ಕರಾವಳಿ’ಯಲ್ಲಿ ಮಾವೀರನಾದ ರಾಜ್‌ ಬಿ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 1:17 IST
Last Updated 8 ಆಗಸ್ಟ್ 2025, 1:17 IST
<div class="paragraphs"><p>ಕರಾವಳಿ ಸಿನಿಮಾ ಪೋಸ್ಟರ್</p></div>

ಕರಾವಳಿ ಸಿನಿಮಾ ಪೋಸ್ಟರ್

   

ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಬಿಡುಗಡೆಗೂ ಮುನ್ನವೇ ಕುತೂಹಲ ಸೃಷ್ಟಿಸಿದೆ. ಕರಾವಳಿ ಮಣ್ಣಿನ ಮತ್ತೊಂದು ಭಿನ್ನವಾದ ಕಥೆ ಹೊತ್ತ ಈ ಸಿನಿಮಾದಲ್ಲಿ ನಟ ಪ್ರಜ್ವಲ್‌ ದೇವರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಜ್ವಲ್‌ ಸೇರಿದಂತೆ ನಟರಾದ ರಮೇಶ್‌ ಇಂದಿರಾ, ಮಿತ್ರ ಕೂಡಾ ಈ ಹಿಂದೆಂದೂ ಮಾಡಿರದಂತಹ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ನಟ ರಾಜ್‌ ಬಿ.ಶೆಟ್ಟಿ. 

ಸದ್ಯ ‘ಸು ಫ್ರಮ್‌ ಸೋ’ನ ಕರುಣಾಕರ ಗುರೂಜಿಯಾಗಿ ಮಿಂಚುತ್ತಿರುವ ರಾಜ್‌ ‘ಕರಾವಳಿ’ಯಲ್ಲಿ ‘ಮಾವೀರ’ನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್‌ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ರಾಜ್ ಲುಕ್ ಆಕರ್ಷಕವಾಗಿದೆ. ಎರಡು ಕೋಣಗಳ ಮಧ್ಯೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಒಂದು ಕೈಯಲ್ಲಿ ಪಂಜು ಹಿಡಿದಿದ್ದಾರೆ. ‘ಮಾವೀರ’ ಕಂಬಳ ಓಡಿಸುವ ಓಟಗಾರನೇ ಅಥವಾ ಕಂಬಳ ನಡೆಸುವ ಕುಟುಂಬದ ಮಹಾವೀರನೇ ಎನ್ನುವುದು ಕುತೂಹಲ ಮೂಡಿಸಿದೆ. ರಾಜ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಪೋಸ್ಟರ್‌ ‘ಕರಾವಳಿ’ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ADVERTISEMENT

ಸಿನಿಪಯಣದಲ್ಲಿ ನಿರಂತರವಾಗಿ ಭಿನ್ನವಾದ ಪಾತ್ರಗಳಿಗೆ ಬಣ್ಣಹಚ್ಚುತ್ತಿದ್ದಾರೆ ರಾಜ್‌. 2017ರಲ್ಲಿ ‘ಒಂದು ಮೊಟ್ಟೆಯ ಕಥೆ’ ಬಳಿಕ ಅವರು ಹಾಸ್ಯ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದು 2025ರಲ್ಲಿ. ಈ ನಡುವೆ ‘ಗರುಡ ಗಮನ ವೃಷಭ ವಾಹನ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’, ‘ಟೋಬಿ’, ‘ಚಾರ್ಲಿ’, ‘ಟರ್ಬೊ’ ಹೀಗೆ ಎಲ್ಲಾ ಸಿನಿಮಾಗಳಲ್ಲೂ ಅವರ ಪಾತ್ರ ಒಂದಕ್ಕಿಂತ ಒಂದು ಭಿನ್ನವಾಗಿತ್ತು. ಸದ್ಯ ಅರ್ಜುನ್‌ ಜನ್ಯ ನಿರ್ದೇಶನದ ‘45’ ಸಿನಿಮಾ ಬಿಡುಗಡೆಗೆ ಎದುರುನೋಡುತ್ತಿರುವ ರಾಜ್‌, ‘ಕರಾವಳಿ’ಗೆ ಗತ್ತು ತುಂಬಿದ್ದಾರೆ. 

ಕಂಬಳದ ಜೊತೆಗೆ ಯಕ್ಷಗಾನ ‘ಕರಾವಳಿ’ ಸಿನಿಮಾದ ಪ್ರಮುಖ ಭಾಗವಾಗಿದೆ. ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಸಂಪದಾ ನಾಯಕಿಯಾಗಿದ್ದಾರೆ. ಮನುಷ್ಯ ಮತ್ತು ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಇದಾಗಿದೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್‌ ಮಾಸಾಂತ್ಯದಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.