ADVERTISEMENT

ಸೈಫ್‌ ಉತ್ತಮ ಬಾಣಸಿಗ; ನನಗೆ ಮೊಟ್ಟೆ ಬೇಯಿಸಲೂ ಬಾರದು: ಕರೀನಾ ಕಪೂರ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 9:27 IST
Last Updated 3 ಏಪ್ರಿಲ್ 2025, 9:27 IST
ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌
ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌   

ನವದೆಹಲಿ: ‘ಮನೆಯಲ್ಲಿ ನಾನು ಮತ್ತು ಸೈಫ್‌ ಇಬ್ಬರೂ ಜತೆಗೂಡಿ ಅಡುಗೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇವೆ. ಯಾವುದೇ ಸಂದರ್ಭಕ್ಕಾದರೂ ಸೈಫ್‌ ಅಡುಗೆ ಮಾಡಲು ಸಿದ್ಧರಾಗುತ್ತಾರೆ’ ಎಂದು ಬಾಲಿವುಡ್ ನಟಿ ಖರೀನಾ ಕಪೂರ್ ಖಾನ್ ತಮ್ಮ ಅಡುಗೆ ಮನೆಯ ಪುರಾಣವನ್ನು ಹಂಚಿಕೊಂಡಿದ್ದಾರೆ.

ತಮ್ಮ ಪೌಷ್ಟಿಕ ತಜ್ಞೆ ಋಜುತಾ ದಿವಾಕರ್‌ ಅವರ ‘ದಿ ಕಾಮನ್‌ಸೆನ್ಸ್ ಡಯಟ್‌’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಕರೀನಾ, ‘ದಿನವನ್ನು ಒತ್ತಡದಲ್ಲೇ ಕಳೆದಾಗ ಮನೆ ಅಡುಗೆ ನೀಡುವ ಆಹ್ಲಾದ ಬೇರೊಂದಿಲ್ಲ. ಹೀಗಾಗಿ ನಾನು ಮತ್ತು ಸೈಫ್‌ ಮನೆಯಲ್ಲೇ ಅಡುಗೆ ಮಾಡುವುದನ್ನು ರೂಢಿಸಿಕೊಂಡಿದ್ದೇವೆ’ ಎಂದಿದ್ದಾರೆ.

‘ಈ ನಮ್ಮ ಅಭ್ಯಾಸ ನಮ್ಮ ವೈಯಕ್ತಿಕ ಬದುಕಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ. ಸೈಫ್‌ ಒಬ್ಬ ಒಳ್ಳೆಯ ಬಾಣಸಿಗ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ನನಗೆ ಮೊಟ್ಟೆ ಬೇಯಿಸಲೂ ಬರುವುದಿಲ್ಲ’ ಎಂದು ಕರೀನಾ ಹೇಳಿದ್ದಾರೆ.

ADVERTISEMENT

ಕರೀನಾ ಅವರ ಇಷ್ಟದ ಆಹಾರ ಕಿಚಡಿಯಂತೆ. ಆದರೆ ಇಂಥದ್ದೇ ಅಡುಗೆ ಬೇಕೆಂಬ ಬೇಡಿಕೆ ಇಲ್ಲ. ಹಾಗೆಯೇ ಒಂದೇ ಅಡುಗೆಯನ್ನು ಪದೇ ಪದೇ ತಿನ್ನಲೂ ಅವರಿಗೆ ಬೇಸರವಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

‘ಕನಿಷ್ಠ ಮೂರು ದಿನ ನಾನು ಕಿಚಡಿ ತಿನ್ನದಿದ್ದರೆ, ಮನಸ್ಸು ಹಾತೊರೆಯಲಾರಂಭಿಸುತ್ತದೆ. ವಾರದಲ್ಲಿ ಐದು ದಿನವಾದರೂ ನಾನು ಕಿಚಡಿ ತಿನ್ನುತ್ತೇನೆ. ಅದರ ಮೇಲೆ ತುಪ್ಪ ಹಾಕಿಕೊಂಡು ತಿಂದರಂತೂ ಸ್ವರ್ಗ’ ಎಂದು ಕರೀನಾ ಬಾಯಿ ಚಪ್ಪರಿಸಿದ್ದಾರೆ.

ಕಪೂರ್‌ ಕುಟುಂಬ ಬಹಳಾವಾಗಿ ಇಷ್ಟಪಡುವುದು ‘ಪಾಯಾ ಸೂಪ್‌’. ಇದನ್ನು ನಾವು ‘ಸುವರ್ಣ ಭಕ್ಷ್ಯ’ ಎಂದೇ ನಮ್ಮ ಮನೆಯಲ್ಲಿ ಕರೆಯುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.