ADVERTISEMENT

ಕರಿಯಪ್ಪನ ಕೆಮಿಸ್ಟ್ರಿಗೆ 63ರ ಖುಷಿ

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:30 IST
Last Updated 23 ಮೇ 2019, 19:30 IST
ನೀನಾಸಂ ಸತೀಶ್ ಮತ್ತು ತಬಲಾ ನಾಣಿ
ನೀನಾಸಂ ಸತೀಶ್ ಮತ್ತು ತಬಲಾ ನಾಣಿ   

ನಿರ್ಮಾಪಕ ಡಾ.ಡಿ.ಎಸ್. ಮಂಜುನಾಥ್ ಅವರು ಈ ಹಿಂದೆ ‘ಸಂಯುಕ್ತ–2’ ಎನ್ನುವ ಸಿನಿಮಾ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಬಗ್ಗೆ ಚಿತ್ರ ವೀಕ್ಷಕರು ಖುಷಿಯ ಪ್ರತಿಕ್ರಿಯೆ ಎಷ್ಟರಮಟ್ಟಿಗೆ ಕೊಟ್ಟರೋ ಗೊತ್ತಿಲ್ಲ, ಸಿನಿಮಾ ಯಶಸ್ಸು ಕಂಡ ಸುದ್ದಿಯಂತೂ ಸಿಗಲಿಲ್ಲ.

ಆದರೆ, ಮತ್ತೊಂದು ಸಿನಿಮಾ ನಿರ್ಮಿಸಿ ಯಶಸ್ಸಿನ ರುಚಿ ಕಂಡುಕೊಂಡಿದ್ದಾರೆ ಮಂಜುನಾಥ್. ಸಿನಿಮಾ ಹೆಸರು ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’. ಚಿತ್ರ ‘ಯಶಸ್ವಿಯಾಗಿ’ 63 ದಿನಗಳ ಪ್ರದರ್ಶನ ಕಂಡ ಕಾರಣಕ್ಕೆ, ಸಿನಿತಂಡ ಸಂತೋಷ ಕೂಟವೊಂದನ್ನು ಆಯೋಜಿಸಿತ್ತು.

‘ಕರಿಯಪ್ಪ’ನ ಯಶಸ್ಸಿಗಾಗಿ ಕೆಲಸ ಮಾಡಿದ ಎಲ್ಲ ಕಲಾವಿದರನ್ನು, ತಂತ್ರಜ್ಞರನ್ನು ಗೌರವಿಸಲಾಯಿತು. ನಟ ನೀನಾಸಂ ಸತೀಶ್, ನಿರ್ಮಾಪಕ ಸುಪ್ರೀತ್, ಭರ್ಜರಿ ಚೇತನ್, ನಿರ್ದೇಶಕ ಮಹೇಶ್‍ ಕುಮಾರ್, ಗಾಯಕ ನವೀನ್‍ಸಜ್ಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ADVERTISEMENT

‘ಕಡಿಮೆ ಬಜೆಟ್‍ನಲ್ಲಿ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಿಸುವುದು ಕಷ್ಟ. ಅಂತಹ ಕೆಲಸವನ್ನು ಈ ತಂಡ ಮಾಡಿದೆ. ಒಂದು ಸಿನಿಮಾಗೆ ಬೇಕಿರುವುದು ಒಳ್ಳೆಯ ಕಥೆ ಹಾಗೂ ಕಥೆಯ ಪಾತ್ರಗಳಿಗೆ ಜೀವ ತುಂಬುವ ಕಲಾವಿದರು. ತಬಲಾ ನಾಣಿ, ಸಂಜನಾ, ಚಂದನ್ ಎಲ್ಲರೂ ಒಳ್ಳೆಯ ಪ್ರಯತ್ನ ಮಾಡಿದ್ದಾರೆ, ಚಿತ್ರವನ್ನು ಗೆಲ್ಲಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ನೀನಾಸಂ ಸತೀಶ್.

‘ನಿರ್ದೇಶಕನ ಪಾಲಿಗೆ ಪ್ರತಿ ಚಿತ್ರವೂ ಸವಾಲಿನ ಕೆಲಸವೇ ಸರಿ. ಈ ಸಿನಿಮಾ ನಿರ್ದೇಶಕರು ಸವಾಲುಗಳನ್ನು ಗೆದ್ದು, ನಿರ್ಮಾಪಕರನ್ನು ಗೆಲ್ಲಿಸಿಕೊಟ್ಟಿದ್ದಾರೆ’ ಎಂದವರು ನಿರ್ದೇಶಕ ಚೇತನ್ ಕುಮಾರ್.

‘63 ದಿನಗಳ ಕಾಲ ಚಿತ್ರವೊಂದು ಪ್ರದರ್ಶನ ಕಂಡಿರುವುದು ತಮಾಷೆಯ ಸಂಗತಿ ಅಲ್ಲ. ನನ್ನ ಮೊದಲ ಚಿತ್ರವೇ ಇಷ್ಟು ದೊಡ್ಡ ಯಶಸ್ಸು ಕಂಡಿರುವುದು ಖುಷಿಯ ವಿಚಾರ. ಚಿತ್ರತಂಡದಿಂದ ಸಿಕ್ಕ ಪ್ರೋತ್ಸಾಹದ ಕಾರಣದಿಂದಲೇ ಇದು ಸಾಧ್ಯವಾಯಿತು’ ಎಂದು ಖುಷಿಯಿಂದ ಹೇಳಿದರು ನಾಯಕಿ ಸಂಜನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.