ಕರೀಶ್ಮಾ ಕಪೂರ್ ಜತೆ ಸಂಜಯ್ ಕಪೂರ್. ಬಲ ಚಿತ್ರದಲ್ಲಿ ಪೋಲೊ ಆಟದಲ್ಲಿ ಸಂಜಯ್ ಕಪೂರ್
ಎಕ್ಸ್
ಮುಂಬೈ: ಬಾಲಿವುಡ್ ನಟಿ ಕರೀಶ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ (53) ಅವರು ಇಂಗ್ಲೆಂಡ್‌ನಲ್ಲಿ ಗುರುವಾರ ಪೊಲೊ ಆಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಆಟೊಮೊಬೈಲ್ ಬಿಡಿಭಾಗಗಳ ತಯಾರಿಕಾ ಕಂಪನಿ ಹೊಂದಿರುವ ಸಂಜಯ್, ಕರೀಶ್ಮಾ ಕಪೂರ್ ಅವರನ್ನು 2003ರಲ್ಲಿ ವರಿಸಿದ್ದರು. ಈ ದಂಪತಿಗೆ ಮಗ ಹಾಗೂ ಮಗಳು ಇದ್ದಾರೆ. 2016ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿತ್ತು.
ಇಂಗ್ಲೆಂಡ್‌ನಲ್ಲಿ ಗುರುವಾರ ಪೋಲೊ ಪಂದ್ಯಾವಳಿ ಆಯೋಜನೆಗೊಂಡಿತ್ತು. ಸಂಜಯ್ ಕಪೂರ್ ಇದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎಂದೆನ್ನಲಾಗಿದೆ. ಪೋಲೊ ಆಡುವಾಗ ಆಕಸ್ಮಿಕವಾಗಿ ಅವರು ಜೇನು ನೊಣವನ್ನು ನುಂಗಿದರು. ಅದೂ ಕಾರಣವಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಸಂಜಯ್ ಕಪೂರ್ ನಿಧನಕ್ಕೂ ಪೂರ್ವದಲ್ಲಿ ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಜತೆಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲೂ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದರು.
ಸೋನಾ ಸಮೂಹ ಸಂಸ್ಥೆಯ ಸಂಸ್ಥಾಪಕ ಸುರೀಂದರ್ ಕಪೂರ್ ಅವರ ಪುತ್ರರಾದ ಸಂಜಯ್, ಕಂಪನಿಯ ಅಧ್ಯಕ್ಷರಾಗಿದ್ದರು. ಕರೀಶ್ಮಾಗೆ ವಿಚ್ಛೇಧನ ನೀಡಿದ ನಂತರ ರೂಪದರ್ಶಿ ಹಾಗೂ ಉದ್ಯಮಿ ಪ್ರಿಯಾ ಸಚ್‌ದೇವ್ ಅವರನ್ನು ಸಂಜಯ್ ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗ ಇದ್ದಾನೆ.
ಸಂಜಯ್ ಕಪೂರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸೋದರಿ ಕರೀನಾ ಕಪೂರ್ ಹಾಗೂ ಅವರ ಪತಿ ಸೈಫ್ ಅಲಿಖಾನ್ ಅವರು ಕರೀಶ್ಮಾ ಮನೆಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.