ADVERTISEMENT

ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿ; ಸಿ.ಎಂ. ಭೇಟಿಯಾದ ನಿಯೋಗ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 12:37 IST
Last Updated 31 ಜನವರಿ 2022, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗ ಸೋಮವಾರ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದೆ.

ಮಂಡಳಿಯ ಅಧ್ಯಕ್ಷ ಡಿ.ಆರ್‌.ಜೈರಾಜ್‌ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ‘ಕೋವಿಡ್‌ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು. ಚಿತ್ರಮಂದಿರಗಳ ಒಳಗೆ ಹವಾನಿಯಂತ್ರಕ ವ್ಯವಸ್ಥೆಯ ಅವಶ್ಯಕತೆ, ಒಂದು ವೇಳೆ ಹವಾನಿಯಂತ್ರಣ ಇಲ್ಲವಾದರೆ ಅದರಿಂದಾಗುವ ಪರಿಣಾಮಗಳ ಬಗೆಗೂ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಲಾಯಿತು’ ಎಂದು ನಿಯೋಗದಲ್ಲಿದ್ದ ವಾಣಿಜ್ಯಮಂಡಳಿ ಕಾರ್ಯದರ್ಶಿ ಎನ್‌.ಎಂ. ಸುರೇಶ್‌ ಮಾಹಿತಿ ನೀಡಿದರು.

‘ಆಸನಭರ್ತಿ ಇತಿಮಿತಿಯಿಂದಾಗಿ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿವರಿಸಿದ್ದೇವೆ. ನಮ್ಮ ಮನವಿ ಆಲಿಸಿದ ಸಿ.ಎಂ., ಮುಂದಿನ ನಾಲ್ಕು ದಿನಗಳ ಒಳಗೆ ತಜ್ಞರೊಂದಿಗೆ ಚರ್ಚಿಸಿ, ಪೂರ್ಣ ಪ್ರಮಾಣದ ಆಸನ ಭರ್ತಿ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಸರ್ಕಾರ ನಿರೀಕ್ಷೆಯಂತೆ ನಡೆದುಕೊಂಡರೆ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಭರ್ತಿಯಾಗಬಹುದು’ ಎಂದು ಸುರೇಶ್‌ ಮಾಹಿತಿ ನೀಡಿದರು.

ನಿರ್ಮಾಪಕ ಸಾ.ರಾ.ಗೋವಿಂದು, ನಿರ್ದೇಶಕ ನಾಗಣ್ಣ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.