ಧ್ರುವ ಸರ್ಜಾ ಅಭಿನಯಿಸಿ, ‘ಜೋಗಿ’ ಪ್ರೇಮ್ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಕೆಡಿ’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಬಹುತಾರೆಯರನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರೇಮ್ ಬೆಂಗಳೂರಿನ ರಕ್ತಸಿಕ್ತ ಜಗತ್ತಿನ ಕಥೆಯನ್ನು ಹೇಳಲು ಹೊರಟಿದ್ದಾರೆ.
ಕಥೆಯ ನಾಯಕ ಕಾಳಿದಾಸ ವಿರೋಧಿಗಳ ಪಡೆಯನ್ನು ಹೊಡೆದುರುಳಿಸುವುದೇ ಚಿತ್ರದ ಮುಖ್ಯಕಥೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ರಕ್ತ ಬಸಿಯುತ್ತಿರುವ ಕತ್ತಿಯೊಂದಿಗೆ ನಾಯಕ ಧ್ರುವ ಸರ್ಜಾ ಪ್ರವೇಶಿಸಿದ್ದು, ಟೀಸರ್ ತುಂಬ ಆ್ಯಕ್ಷನ್ ದೃಶ್ಯಗಳು ಮತ್ತು ರಕ್ತವೇ ಕಾಣಿಸುತ್ತದೆ.
ಢಾಕ್ ದೇವನಾಗಿ ಸಂಜಯ್ ದತ್ ನಟಿಸಿದ್ದಾರೆ. ಇವರು ಕಥೆಯ ಪ್ರಮುಖ ಖಳನಾಯಕ. ರವಿಚಂದ್ರನ್ ಅಣ್ಣಯ್ಯಪ್ಪನಾಗಿ ಕಾಣಿಸಿಕೊಂಡರೆ, ರಮೇಶ್ ಅರವಿಂದ್ ಧರ್ಮನ ಪಾತ್ರದಲ್ಲಿದ್ದಾರೆ. ಮಹಾಲಕ್ಷ್ಮಿಯಾಗಿ ನಾಯಕಿ ರೀಷ್ಮಾ ನಾಣಯ್ಯ ನಟಿಸಿದ್ದು, ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಇದ್ದಾರೆ.
1980ರ ದಶಕದಲ್ಲಿನ ಬೆಂಗಳೂರಿನ ರೌಡಿಸಂ ಕಥೆಯನ್ನು ಚಿತ್ರ ಹೊಂದಿದೆ. ‘ಅವರಿಬ್ಬರದ್ದು ರಕ್ತ ಸಂಬಂಧ. ಆದರೆ ರಕ್ತ ಮೈಯಲ್ಲಿ ಹರಿಯುವುದಿಲ್ಲ’ ಎಂಬ ಡೈಲಾಗ್ ನಾಯಕ ಮತ್ತು ಖಳನಾಯಕನ ನಡುವಿನ ಕಥೆಯನ್ನು ಹೇಳುತ್ತಿದೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಸಂಕೇತ್ ಆಚಾರ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.