ADVERTISEMENT

ನಾಲ್ಕೇ ದಿನಕ್ಕೆ ₹ 551 ಕೋಟಿ ದಾಟಿದ ಕೆಜಿಎಫ್–2 ಗಳಿಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2022, 6:32 IST
Last Updated 18 ಏಪ್ರಿಲ್ 2022, 6:32 IST
   

ಬೆಂಗಳೂರು: ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮೀರಿ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿ ನಾಲ್ಕು ದಿನ ಕಳೆದಿದ್ದು, ₹ 551 ಕೋಟಿ ಗಳಿಕೆ ಕಂಡಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ಏಪ್ರಿಲ್ 14ರಂದು ತೆರೆಕಂಡಿದ್ದರಿಂದ ನಂತರದ ರಜಾ ದಿನಗಳ ಜೊತೆಗೆ ವೀಕೆಂಡ್ ಸಹ ಸಿಕ್ಕಿದ್ದು ಚಿತ್ರಕ್ಕೆ ಅನುಕೂಲವಾಗಿದೆ. ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಂಡಿತ್ತು.

ಮೊದಲ ದಿನ ₹ 165.37 ಕೋಟಿ, ಎರಡನೇ ದಿನ ₹ 139.25 ಕೋಟಿ, ಮೂರನೇ ದಿನ ₹ 115.08 ಕೋಟಿ ಮತ್ತು ನಾಲ್ಕನೇ ದಿನ ಭಾನುವಾರ ₹ 132.13 ಕೋಟಿ ಗಳಿಕೆ ಸೇರಿ ಒಟ್ಟು ₹ 551.83 ಗಳಿಸಿದೆ ಎಂದು ಚಿತ್ರ ವಿಮರ್ಶಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಮಿಳು ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ₹ 50 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದ್ದು, ಕಳೆದ ಮೂರು ದಿನಗಳಲ್ಲಿ ನಿತ್ಯ ₹ 10 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ಕೆಜಿಎಫ್–2 ಪಾತ್ರವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ವರದಿಯನ್ನು ಚಿತ್ರತಂಡ ಇನ್ನಷ್ಟೇ ಖಚಿತಪಡಿಸಬೇಕಿದೆ. ಕೆಜಿಎಫ್‌ನಲ್ಲಿ ಬಂಗಾರದ ಗಣಿಗಳನ್ನು ಲೂಟಿ ಮಾಡಿ ತನ್ನದೇ ಸಾಮ್ರಾಜ್ಯದಲ್ಲಿ ‘ರಾಕಿ’(ನಾಯಕ ಯಶ್), ಜಗತ್ತಿಗೇ ಸವಾಲು ಹಾಕುವ ಕಥಾಹಂದರ ಚಿತ್ರದಲ್ಲಿದೆ. ಮಾಸ್ ಡೈಲಾಗ್, ಅದ್ಬುತ ಎನಿಸುವಂತ ಸಾಹಸ ದೃಶ್ಯಗಳು ಚಿತ್ರದ ಹೈಲೈಟ್ಸ್.

ಖಳನಾಯಕನ ಪಾತ್ರದಲ್ಲಿ ಹಿಂದಿಯ ಖ್ಯಾತ ನಟ ಸಂಜಯ್ ದತ್, ಪ್ರಧಾನ ಮಂತ್ರಿ ಪಾತ್ರದಲ್ಲಿ ರವೀನಾ ಟಂಡನ್ ಗಮನ ಸೆಳೆದಿದ್ದಾರೆ. ಅನಂತ್ ನಾಗ್ ಜಾಗದಲ್ಲಿ ಕಥೆ ಹೇಳಿರುವ ಪ್ರಕಾಶ್ ರೈ ಅವರ ಡೈಲಾಗ್ ಡೆಲಿವರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ತಾಯಿಯ ಸೆಂಟಿಮೆಂಟ್ ವರ್ಕೌಟ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.