ADVERTISEMENT

ಸುಮ್ನೆ ಬೈಬೇಡಿ: ಕೆಜಿಎಫ್‌ ಹಾಡಲ್ಲಿ ಕನ್ನಡವೂ ಉಂಟು!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 9:52 IST
Last Updated 5 ಡಿಸೆಂಬರ್ 2018, 9:52 IST
ಕೆಜಿಎಫ್ ಚಿತ್ರದಲ್ಲಿ ಯಶ್‌
ಕೆಜಿಎಫ್ ಚಿತ್ರದಲ್ಲಿ ಯಶ್‌   

ಚಲ್ನೇ ಕಾ ಹುಕುಂ

ರುಖ್‌ನೇ ಕಾ ಹುಕುಂ

ಜಿಂದಗಿ ಪೆ ಹುಕುಂ

ADVERTISEMENT

ಮೌತ್‌ ಪೆ ಹುಕುಂ

ಬಂದೂಕ್‌ ಪೆ ಹುಕುಂ

ದುಶ್ಮನ್‌ ಪೆ ಹುಕುಂ

ಲೆಹರೋಂ ಪೆ ಹುಕುಂ

ಬಾಂಬೈ ಪೆ ಹುಕುಂ

‘ಯೇ ಕ್ಯಾ ಬಕ್ ರಹಾ ಹೈ’ ಹಿಂದಿಯಲ್ಲಿಯೇ ಬೈಯಬೇಡಿ. ಇದು ಕನ್ನಡದ ‘ಕೆಜಿಎಫ್‌’ ಸಿನಿಮಾದ ಹಾಡು ಮಾರಾಯ್ರೇ... ‘ಕನ್ನಡ ಸಿನಿಮಾ ಹಾಡು ಅಂತೀರಾ, ಎಲ್ಲಿ ಒಂದಕ್ಷರವೂ ಕನ್ನಡ ಕಾಣ್ತಾ ಇಲ್ವಲ್ಲಾ’ ಎಂಬ ಅನುಮಾನ ಖಂಡಿತ ನಿಮ್ಮ ಮನಸೊಳಗೆ ಸುಳಿದುಹೋಗಿರುತ್ತದೆ. ಇದೆ. ಖಂಡಿತ ಈ ಹಾಡಿನಲ್ಲಿ ಒಂದಿಷ್ಟು ಕನ್ನಡದ ಶಬ್ದಗಳಿವೆ.

ತುಂಬ ಕಾಯಬೇಕಿಲ್ಲ. ಮುಂದಿನ ಸಾಲುಗಳು ಹೀಗಿವೆ ನೋಡಿ:

‘ಜಾನ್‌ ಬಾಂಬೈ ಕಾ ಜಾನ್‌ ಬಾಂಬೈ ಕಾ ಜಾನ್‌ ರೇ/ ಇವನ ಕಣ್ಣಲ್ಲಿ ಕಣ್ಣು ಇಡಬೇಡ ಸಿಡಿಲು ಬಡಿಯತ್ತ ಭಾಗ್‌ರೇ’

ಸಿಕ್ತಲ್ವಾ ಕನ್ನಡ ಸಾಲು? ಇದಕ್ಕಿಂತ ಬೇರೆ ಪುರಾವೆ ಬೇಕೆ ಇದು ಕನ್ನಡ ಹಾಡು ಎಂದು ಸಾಬೀತುಮಾಡಲು. ಇನ್ನೂ ಅನುಮಾನ ಇದ್ರೆ ಈ ಹಾಡು ಬರೆದವರು ಯಾರು ಅಂತ ಕೇಳಿ. ಕನ್ನಡದ ಬಹುಜನಪ್ರಯ ಗೀತರಚನೆಕಾರ ಡಾ. ವಿ. ನಾಗೇಂದ್ರಪ್ರಸಾದ್‌ ಪೋಣಿಸಿದ ಶಬ್ದಗಳಿವು. ಅಂದ ಮೇಲೆ ಕನ್ನಡವಲ್ಲದೆ ಇನ್ನೇನಾಗಲು ಸಾಧ್ಯ?

ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ನಾಯಕನಾಗಿ ನಟಿಸಿರುವ ‘ಕೆಜಿಎಫ್’ ಚಿತ್ರದ ಮೊದಲ ಹಾಡು‘ಸಲಾಂ ರಾಖಿ ಬಾಯ್‌’ ಡಿ.04ಕ್ಕೆ ಅಂತರ್ಜಾಲದಲ್ಲಿ ಬಿಡುಗಡೆಗೊಂಡಿದೆ. ಒಂದಲ್ಲಾ ಎರಡಲ್ಲಾ, ಐದು ಭಾಷೆಗಳಲ್ಲಿ ನಿರ್ಮಾಣ ಆಗಿರುವ ಸಿನಿಮಾ ಇದು. ಅದೂ ಮುಂಬೈ ಹಿನ್ನೆಲೆಯಲ್ಲಿ ಶುರುವಾಗುವ ಕಥೆ ಇರುವುದು. ಮುಂಬೈನಲ್ಲಿ ಯಾವ ಭಾಷೆ ಮಾತಾಡೋದು? ಹಿಂದಿ ತಾನೇ? ಅಂದ ಮೇಲೆ ಸಿನಿಮಾದಲ್ಲಿ ನಾಯಕನ ಇಂಟ್ರೊಡಕ್ಷನ್‌ ಕೂಡ ಹಿಂದಿಯಲ್ಲಿಯೇ ಇದ್ದರೆ ಹೆಚ್ಚು ನೈಜವಾಗಿರುತ್ತದೆ ಎಂಬ ಕಾರಣಕ್ಕೆ ಮೊದಲೊಂದಿಷ್ಟು ಸಾಲುಗಳನ್ನು ಹಿಂದಿಯಲ್ಲಿ ಬರೆದರೆ ತಪ್ಪು ಎನ್ನಲಾದೀತೇ?

ದೊಡ್ಡ ಪ್ರಯತ್ನಕ್ಕೆ ಮುಂದಾದಾಗ ಅದನ್ನು ಟೀಕೆ ಮಾಡುವವರೂ ಇದ್ದೇ ಇರುತ್ತಾರೆ. ಹಾಗೆಯೇ ‘ಕೆಜಿಎಫ್‌’ ಸಿನಿಮಾದ ಮೊದಲ ಹಾಡಿಗೂ ಕೆಲವು ಟೀಕೆಗಳು ಎದುರಾಗಿವೆ. ಅವೇನೂ ಹೇಳಿಕೊಳ್ಳುವಂಥವಲ್ಲ. ‘ಕನ್ನಡ ಸಿನಿಮಾ ಅಂದಮೇಲೆ ಪೂರ್ತಿ ಅಲ್ದಿದ್ರೂ ಬಹುತೇಕ ಕನ್ನಡ ಸಾಲುಗಳು ಇರಬೇಕಲ್ವಾ? ಇಲ್ಲಿ ಬಹುತೇಕ ಹಿಂದಿ ಸಾಲುಗಳು, ಮಧ್ಯೆ ಒಂಚೂರು ಕನ್ನಡ ಶಬ್ದಗಳಿವೆ. ಅದೂ ರವಿ ಬಸ್ರೂರು ಬ್ಯಾಂಡ್‌ ಬಜಾನಾದಲ್ಲಿ ಕೇಳಿಸೋದೇ ಇಲ್ಲ’ ಎನ್ನುವ ಆರೋಪ. ಇನ್ನೊಂದಿಷ್ಟು ಜನ ‘ಯಶ್‌ ಇತ್ತೀಚೆಗೆ ಚಿತ್ರರಂಗಕ್ಕೆ ಒಳ್ಳೆಯದಾಗುವುದಾದರೆ ಡಬ್ಬಿಂಗ್‌ ಬಂದರೂ ಸರಿ’ ಎಂಬರ್ಥದ ಮಾತನಾಡಿದ್ದರು. ಹಾಗಾದರೆ ಅವರ ಕೆಜಿಎಫ್‌ ಸಿನಿಮಾ ಕನ್ನಡಕ್ಕೆ ಡಬ್‌ ಆಗುವ ಮೂಲಕ ಡಬ್ಬಿಂಗ್‌ ಅಭಿಯಾನ ಶುರುವಾಗಲಿ’ ಎಂದು ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲ, ಯಾರೋ ಪುಣ್ಯಾತ್ಮರು ಕಷ್ಟಪಟ್ಟು ವಾದ್ಯಮೇಳಗಳ ಗದ್ದಲದ ನಡುವೆಯೂ ತಾಳ್ಮೆಯಿಂದ ಹಾಡನ್ನು ಆಲಿಸಿ, ಸಾಹಿತ್ಯ ಬರೆದು ಅದರಲ್ಲಿ ಹಿಂದಿ ಸಾಲುಗಳು ಎಷ್ಟು, ಕನ್ನಡದವು ಎಷ್ಟು ಎಂದು ಗುರ್ತುಮಾಡಿದ್ದಾರೆ. ಹಿಂದಿ ಸಾಲುಗಳಿಗೆ ಕೆಂಪುಬಣ್ಣ ಬಳಸಿದ್ದಾರೆ. ಇಡೀ ಹಾಡು ರಕ್ತಸಿಕ್ತ ದೇಹದ ಹಾಗೆ ಕೆಂಪು ಕೆಂಪಾಗಿ ಕಾಣುತ್ತದೆ. ನಡುವೆ ಒಂದಿಷ್ಟು ಕನ್ನಡದ ಸಾಲುಗಳು ಸಿಗುತ್ತವೆ. ಕನ್ನಡದ ಸಾಲುಗಳು ಕೆಲವೇ ಇದ್ದರೆ ಏನು? ಅವು ಎಂಥ ಸಾಲುಗಳು? ಅವುಗಳ ಮಹತ್ವ ಎಂಥದ್ದು ಎನ್ನುವುದನ್ನು ಗಮನಸಿಬೇಕಲ್ಲವೇ? ಬರಿದೆ ವ್ಯಂಗ್ಯ ಮಾಡಲಿಕ್ಕೆ ಎಂದೇ ನಿಂತವರಿಗೇನು ಮೊಸರಲ್ಲಿಯೂ ಕಲ್ಲು ಸಿಗುತ್ತದೆ.

ಕಷ್ಟವಾಗಬಹುದು, ಅರ್ಥ ಆಗದೇ ಇರಬಹುದು. ಕೊಂಚ ಹೊತ್ತು ತಾಳ್ಮೆಯಿಂದ ಕಾದು ಕೇಳಿ. ಕನ್ನಡಕ್ಕಾಗಿ ಅಷ್ಟೂ ಕಾಯುವುದು ಸಾಧ್ಯವಿಲ್ಲ ಎಂದರೆ ಹೇಗೆ? ಹಿಂದಿ ಹಾಡು ಅರ್ಧ ಮುಗಿದ ಮೇಲೆ ಬರುವಂಥ ಸಾಲುಗಳನ್ನು ಕೇಳಿ:

‘ಬೆರಳ ಹಿಡಿದು ನಡೆಸಿದ

ಮೊದಲ ಮಾತು ಕಲಿಸಿದ

ಅವಳ ಮಾತೇ ವೇದ

ಬೆಂಕಿ ಜತೆಗೂ ಪಳಗಿದ

ಹಟವ ಹೊತ್ತು ತಿರುಗಿದ

ಪಣವ ಹೊತ್ತ ಯೋಧ

ತಡೆಯೋಕೆ ತರಬೇಕು ಇವನನ್ನು ಎಲ್ಲಿಂದ ಸೈನ್ಯವ

ತಡೆಯೋಕೆ ಸಾಧ್ಯಾನಾ? ಧುಮ್ಮಿಕ್ಕಿ ಬರುವಂಥ ಅಲೆಯನ್ನ’

ಇಂಥ ಸಾಲುಗಳನ್ನು ನಮ್ಮ ಕನ್ನಡದ ಗೀತರಚನೆಕಾರ ನಾಗೇಂದ್ರ ಪ್ರಸಾದ್ ಅಲ್ಲದೆ ಇನ್ಯಾರು ಹಿಂದಿ ಕವಿಗಳು ಬರೆಯಲಿಕ್ಕೆ ಸಾಧ್ಯವೇ?

ಇಷ್ಟಾದರೂ ಕೆಜಿಎಫ್‌ ಹಾಡು ನೋಡಿದವರೇನು ಕಮ್ಮಿ ಜನರೇ?

ಬುಧವಾರ ಮಧ್ಯಾಹ್ನದ ಹೊತ್ತಿಗೆ ಈ ಹಾಡಿನ ‘ಕನ್ನಡ’ ಅವತರಣಿಕೆಯನ್ನು 1.87 ಲಕ್ಷ ಜನ ವೀಕ್ಷಿಸಿದ್ದಾರೆ. ತಮಿಳು ಅವತರಣಿಕೆಯನ್ನು 1.71 ಲಕ್ಷ ಜನ ವೀಕ್ಷಿಸಿದ್ದಾರೆ. ತೆಲುಗು ಅವತರಣಿಕೆಯನ್ನು ಕನ್ನಡಕ್ಕಿಂದ ಹತ್ತಿರತ್ತಿರ ದುಪ್ಪಟ್ಟು ಜನ ಅಂದರೆ 3.33 ಲಕ್ಷ ಜನ ವೀಕ್ಷಿಸಿದ್ದಾರೆ.

ಕನ್ನಡದ ಯಾವ ಸಿನಿಮಾದ ಯಾವ ಹಾಡಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ವ್ಯೂಸ್‌ಗಳು ಸಿಕ್ಕಿದ್ದವು ಹೇಳಿ ನೋಡೋಣ. ಯಾರಿಗೂ ಅರ್ಥ ಆಗಲ್ಲ ಅಂದರೆ ಇಷ್ಟೆಲ್ಲ ಜನರು ನೋಡಲು ಸಾಧ್ಯವಿತ್ತೆ?

ಕನ್ನಡಿಗರು ವಿಶಾಲ ಹೃದಯದವರು; ಪೂರ್ತಿ ಹಿಂದಿ ಹಾಡನ್ನೇ ಹಾಕಿದ್ದರೂ ಪ್ರೀತಿಯಿಂದ ಅಪ್ಪಿಕೊಂಡು ಮೆರೆಸುತ್ತಿದ್ದರು. ಆದರೆ ‘ಕೆಜಿಎಫ್’ ಚಿತ್ರತಂಡಕ್ಕೆ ಕನ್ನಡ ಮೇಲೆ ಪ್ರೀತಿ ಇದೆ. ತನ್ನ ಭಾಷೆಯ ಬಗ್ಗ ಬದ್ಧತೆಯೂ ಇದೆ. ಹಾಗಾಗಿಯೇ ನಡುವೆ ಒಂದಿಷ್ಟು ಪರಮಾದ್ಭುತ ಕನ್ನಡ ಸಾಲುಗಳನ್ನು ಪೋಣಿಸಿದ್ದಾರೆ.

ಬರಿದೇ ಹೊಟ್ಟೆಕಿಚ್ಚುಪಟ್ಟು ತೆಗಳುತ್ತಿರಬೇಡಿ. ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ ‘ಕೆಜಿಎಫ್‌’ ಚಿತ್ರದ ಹಾಡಿನಲ್ಲಿ ಇರುವ ಕೆಲವು ಕನ್ನಡ ಸಾಲುಗಳನ್ನು ಕೇಳಿ ರೋಮಾಂಚಗೊಳ್ಳಿ. ಇದು ಕನ್ನಡವನನ್ನು ಮೇಲಕ್ಕೆತ್ತುವ ಪ್ರಯತ್ನ ಎನ್ನುವುದನ್ನು ಅರ್ಥಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.