ADVERTISEMENT

ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಕೆ.ಜಿ.ಎಫ್‌ ಚಿತ್ರತಂಡ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 9:26 IST
Last Updated 1 ಫೆಬ್ರುವರಿ 2022, 9:26 IST
ಕೊಲ್ಲೂರು ಹಾಗೂ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೆ.ಜಿ.ಎಫ್‌ ಚಿತ್ರತಂಡ
ಕೊಲ್ಲೂರು ಹಾಗೂ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೆ.ಜಿ.ಎಫ್‌ ಚಿತ್ರತಂಡ   

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌ ಎರಡನೇ ಭಾಗ ಏಪ್ರಿಲ್‌ 14ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಯಶ್‌ ಸಮ್ಮುಖದಲ್ಲಿ ಇಡೀ ಚಿತ್ರತಂಡವು ಕೊಲ್ಲೂರಿನ ಮೂಕಾಂಬಿಕೆ ಹಾಗೂ ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.

ಕೋವಿಡ್‌ ಮೂರನೇ ಅಲೆಯ ತೀವ್ರತೆ ಇಳಿಕೆಯಾಗುತ್ತಿದ್ದು, ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿಗೆ ಸರ್ಕಾರ ಅವಕಾಶ ನೀಡುವ ನಿರೀಕ್ಷೆ ಇದೆ. ಹೀಗಾಗಿ ಚಂದನವನ ಸೇರಿದಂತೆ ಟಾಲಿವುಡ್‌, ಬಾಲಿವುಡ್‌ ಹಾಗೂ ಕಾಲಿವುಡ್‌ನ ಬಿಗ್‌ಬಜೆಟ್‌ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಕಾಯುತ್ತಿವೆ.ಪ್ರಶಾಂತ್‌ ನೀಲ್‌ ನಿರ್ದೇಶನ ಮತ್ತು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿರುವ ಕೆ.ಜಿ.ಎಫ್‌–2 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪ್ರಗತಿಯಲ್ಲಿದೆ. ಇತ್ತೀಚೆಗಷ್ಟೇ ಚಿತ್ರದಲ್ಲಿ ‘ಅಧೀರ’ನ ಪಾತ್ರಕ್ಕೆ ಬಣ್ಣಹಚ್ಚಿದ್ದ ಬಾಲಿವುಡ್‌ ನಟ ಸಂಜಯ್‌ ದತ್‌ ತಮ್ಮ ಡಬ್ಬಿಂಗ್‌ ಪೂರ್ಣಗೊಳಿಸಿದ್ದರು.

ಕಳೆದ ವರ್ಷದ ಜುಲೈನಲ್ಲೇ ಬಿಡುಗಡೆಯಾಗಬೇಕಿದ್ದ ‘ಕೆಜಿಎಫ್‌–2’ ಚಿತ್ರವು ಕೋವಿಡ್‌ ಎರಡನೇ ಅಲೆಯ ಕಾರಣದಿಂದಾಗಿ ಮುಂದಕ್ಕೆ ಹೋಗಿತ್ತು. ಇದಾದ ನಂತರ ಸರ್ಕಾರವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧಿಸಿದ್ದ ಕಾರಣ ಸಿನಿಮಾ ಬಿಡುಗಡೆಯನ್ನು 2022ರ ಏ.14ಕ್ಕೆ ಚಿತ್ರತಂಡವು ಮುಂದೂಡಿತ್ತು.

ADVERTISEMENT

ಚಿತ್ರದಲ್ಲಿ ಬಹುಮುಖ್ಯವಾದ ‘ರಮಿಕಾ ಸೇನ್‌’ ಪಾತ್ರದಲ್ಲಿ ಬಾಲಿವುಡ್‌ನ ನಟಿ ರವಿನಾ ಟಂಡನ್‌ ನಟಿಸಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣಹಚ್ಚಿದ್ದು, ಪ್ರಕಾಶ್‌ ರೈ, ಮಾಳವಿಕಾ ಅವಿನಾಶ್‌, ಬಿ.ಸುರೇಶ್‌, ಯಶ್‌ ಶೆಟ್ಟಿ, ಅರ್ಚನಾ ಜೋಯಿಷ್‌, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.