ADVERTISEMENT

ಬುರ್ಜ್‌ ಖಲೀಫಾ ಮೇಲೆ ಕಿಚ್ಚನ ಖದರ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 17:36 IST
Last Updated 31 ಜನವರಿ 2021, 17:36 IST
ಬುರ್ಜ್‌ ಖಲೀಫಾ ಮೇಲೆ ಸುದೀಪ್‌ ಕಟೌಟ್‌ (ಟ್ವಿಟರ್‌ ಚಿತ್ರ)
ಬುರ್ಜ್‌ ಖಲೀಫಾ ಮೇಲೆ ಸುದೀಪ್‌ ಕಟೌಟ್‌ (ಟ್ವಿಟರ್‌ ಚಿತ್ರ)   

ಬೆಂಗಳೂರು: ಚಂದನವನದಲ್ಲಿ 25 ವಸಂತಗಳನ್ನು ಸಾರ್ಥಕವಾಗಿ ಪೂರೈಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಬಹು ನಿರೀಕ್ಷೆಯ ‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆಯ ಪೋಸ್ಟರ್ ಮತ್ತು ಕಟೌಟ್‌ಗಳು ವಿಶ್ವದ ಅತ್ಯಂತ ಎತ್ತರದ ಕಟ್ಟಡದುಬೈನ ಬುರ್ಜ್‌ ಖಲೀಫಾ ಮೇಲೆ ಭಾನುವಾರ ರಾತ್ರಿ ವರ್ಣ ರಂಜಿತವಾಗಿ ರಾರಾಜಿಸಿದವು.

ರಾತ್ರಿ 9 ಗಂಟೆಗೆ ಸರಿಯಾಗಿ ಲೇಸರ್‌ ಬೆಳಕಿನ ಮೂಲಕ ಚಿತ್ರದ ಟೈಟಲ್‌ ಮತ್ತು ಕಟೌಟ್‌ಗಳುಬುರ್ಜ್‌ ಖಲೀಫಾ ಮೇಲೆ ಮೂಡಿಬಂದವು. ಸುದೀಪ್‌ ಅವರ ಬೆಳ್ಳಿ ಹೆಜ್ಜೆಯ ಸಂಭ್ರಮವನ್ನು ಸ್ಮರಣೀಯಗೊಳಿಸಲು ‘ವಿಕ್ರಾಂತ್‌ ರೋಣ’ ಚಿತ್ರತಂಡ ಬುರ್ಜ್‌ ಖಲೀಫಾ ಮೇಲೆ ಚಿತ್ರದ ಶೀರ್ಷಿಕೆ ಮತ್ತು ಚಿತ್ರದ ಮೂರು ನಿಮಿಷಗಳ ಟೀಸರ್‌ ಬಿಡುಗಡೆ ಮಾಡಲು ಎರಡು ತಿಂಗಳ ಹಿಂದೆಯೇ ಯೋಜನೆ ರೂಪಿಸಿತ್ತು. ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಕಿಚ್ಚನ ಅಭಿಮಾನಿಗಳೂ ಅಕ್ಷರಶಃ ಖುಷಿಗೊಂಡರು.

ಚಿತ್ರತಂಡದೊಂದಿಗೆ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಸುದೀಪ್‌ ಅಭಿಮಾನಿಗಳತ್ತ ಕೈಬೀಸಿ ಖುಷಿ ಹಂಚಿಕೊಂಡರು.

ADVERTISEMENT

‘ಬುರ್ಜ್‌ ಖಲೀಫಾ ಮೇಲೆ ಕನ್ನಡ ಧ್ವಜ ಕಾಣಿಸಿದ್ದು ನನಗೆ ತುಂಬಾ ಖುಷಿಯಾಯಿತು. ನಮ್ಮ ಚಿತ್ರತಂಡ ಇಂಥದ್ದೊಂದು ಅಚ್ಚರಿ ನೀಡಿದ್ದು ನನಗೆ ಇನ್ನಷ್ಟು ಖುಷಿಕೊಟ್ಟಿತು. ಅಲ್ಲದೇ ಇವರೆಲ್ಲರ ಮೊಗದಲ್ಲಿ ಸಂತಸ ನೆಲೆಸಿರುವುದನ್ನು ನೋಡಿ ನಾನು ಮತ್ತಷ್ಟು ಸಂತೋಷಗೊಂಡಿದ್ದೇನೆ’ ಎಂದು ಸುದೀಪ್‌ ಪ್ರತಿಕ್ರಿಯಿಸಿದ್ದಾರೆ.

‘ಹುಟ್ಟಿದಾಗ ನಾವು ಯಾರಿಗೂ ಗೊತ್ತಿರುವುದಿಲ್ಲ, ಬೆಳೆಯುತ್ತಾ ಹೆಸರು ಸಂಪಾದಿಸಿ, ಹೆಸರಿನ ಮೂಲಕ ಗುರುತಿಸಿಕೊಂಡಾಗ ಹೆಮ್ಮೆ ಎನಿಸುವುದು ಸಹಜ. ಜಗತ್ತಿನ ಯಾವುದೇ ಮೂಲೆಯಲ್ಲಿ ಅಭಿಮಾನಿಗಳನ್ನು ಹೊಂದಿರುವುದು ಯಾವುದೇ ಸೆಲಬ್ರಿಟಿಗೆ ಹೆಮ್ಮೆಯ ವಿಚಾರ. ಅಭಿಮಾನಿಗಳು ತೋರಿಸುವ ಅಭಿಮಾನಕ್ಕಿಂತ ದೊಡ್ಡ ಬಿರುದು, ಸಮ್ಮಾನ ಮತ್ತೊಂದಿಲ್ಲ. ನಾನು ಮನರಂಜನಾ ಕ್ಷೇತ್ರದಲ್ಲಿರುವುದಕ್ಕೆ ತುಂಬಾ ಹೆಮ್ಮೆ ಎನಿಸಿದೆ’ ಎನ್ನುವ ಮಾತು ಸೇರಿಸಿದರು ಸುದೀಪ್‌.

‘ಚಿತ್ರ ಪೂರ್ಣಗೊಂಡು ಬಿಡುಗಡೆಯ ಹಂತಕ್ಕೆ ಬರಲು ಇನ್ನು ಕೆಲವು ದಿನಗಳು ಬೇಕಾಗುತ್ತದೆ. ಬಹುಷಃ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ. ‘ವಿಕ್ರಾಂತ್‌ ರೋಣ’ನಿಗೆ ಜನರು ತೋರಿಸುತ್ತಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ’ ಎನ್ನಲು ಸುದೀಪ್‌ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.