ADVERTISEMENT

‘ತಿರುಮಲ ವೈನ್‌ಸ್ಟೋರ್‌’ನಲ್ಲಿ ಕುಡುಕರ ಕಿರಿಕ್: ಟೀಸರ್‌ ಔಟ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 8:21 IST
Last Updated 14 ಜೂನ್ 2020, 8:21 IST
ಟೀಸರ್‌
ಟೀಸರ್‌   

ಕಿರಿಕ್‌ ಕೀರ್ತಿ (ಕೀರ್ತಿ ಶಂಕರಘಟ್ಟ) ನಾಯಕನಾಗಿ ನಟಿಸಿರುವ ‘ತಿರುಮಲ ವೈನ್ ಸ್ಟೋರ್‌’ ಸಿನಿಮಾದ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾರ್‌ನೊಳಗೆ ಲಾಕ್‌ ಆಗುವ ವ್ಯಕ್ತಿ ಮಾಡುವ ಅವಾಂತರ ಹಾಗೂ ಆತನ ಮನಸ್ಥಿತಿಯನ್ನು ಒಂದು ನಿಮಿಷದ ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ.

ಚಿತ್ರದ ನಾಯಕ ಟಾಯ್ಲೆಟ್‌ನಲ್ಲಿ ಇದ್ದಾಗ ವೈನ್‌ ಸ್ಟೋರ್‌ ಬಾಗಿಲನ್ನು ಮುಚ್ಚಲಾಗುತ್ತದೆ. ಆತ ಸುಮಾರು 15 ದಿನ ಅಲ್ಲೇ ಕಾಲ ಕಳೆಯಬೇಕಾಗಿ ಬರುತ್ತದೆ. ಆಗ ಮದ್ಯ ಸೇವಿಸುತ್ತಾ ಅವನು ಎಷ್ಟು ದಿನ ಕಾಲ ಕಳೆಯುತ್ತಾನೆ? ತನ್ನ ಇಷ್ಟದ ಜಾಗದಲ್ಲಿ ಇದ್ದರೂ ಅವನು ಅಲ್ಲಿಂದ ಹೊರಬರಲು ಮಾಡುವ ಪ್ರಯತ್ನ, ಕಾಡುವ ನೆನಪು, ಅವನ ಮಾನಸಿಕ ಸ್ಥಿತಿ ಬಗ್ಗೆ ಟೀಸರ್‌ನಲ್ಲಿದೆ. ಬಿಡುಗಡೆಯಾದ ಒಂದು ದಿನದಲ್ಲಿ 22 ಸಾವಿರಕ್ಕೂ ಹೆಚ್ಚು ಜನ ಟೀಸರ್‌ ವೀಕ್ಷಿಸಿದ್ದಾರೆ.

ಇದರಲ್ಲಿ ಕಿರಿಕ್‌ ಕೀರ್ತಿ ಕುಡುಕನ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ವೈಷ್ಣವಿ ಮೆನನ್, ಕೆಂಪೇಗೌಡ‌ ಪ್ರಮುಖ ‍ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.‘ಎರಡನೇ ಸಲ’, ‘ದೇವ್ರಂಥ ಮನುಷ್ಯ’ ಚಿತ್ರಗಳಲ್ಲಿಕೀರ್ತಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇವರು ಬಿಗ್‌ ಬಾಸ್‌ ರಿಯಾಲಿಟಿ ಷೋದ ರನ್ನರ್‌ ಅಪ್ ಕೂಡ.

ADVERTISEMENT

ಒಬ್ಬ ಯುವಕ ಕುಡಿತದ ವ್ಯಸನಕ್ಕೆ ಬಲಿಯಾದರೆ ಆಗುವ ದುಷ್ಪರಿಣಾಮ ಕುರಿತು ಕತೆ ಹೇಳುವ ಈ ಸಿನಿಮಾದಲ್ಲಿ ಸಂಬಂಧ, ಭಾವನೆಗಳಿಗೆ ಬೆಲೆ ಕೊಡದ ವ್ಯಕ್ತಿ, ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದಾಗ ಆತನಿಗೆ ಕಾಡುವ ಭೂತಕಾಲದ ನೆನಪುಗಳನ್ನು ನವಿರಾಗಿ ನಿರೂಪಿಸಲಾಗಿದೆ. ಇದು ಸಸ್ಪೆನ್ಸ್‌ ಥ್ರಿಲ್ಲರ್‌ ಕತೆಯಾಗಿದ್ದು, ಮದ್ಯವ್ಯಸನಿ ಏಕೆ ವೈನ್‌ಸ್ಟೋರ್‌ ಒಳಗೆ ಸಿಲುಕಿದ ಎಂಬ ಕುತೂಹಲವೇ ಚಿತ್ರದ ಎಳೆ.

ಚಿತ್ರದ ಶೇ 90ರಷ್ಟು ಚಿತ್ರೀಕರಣವು ಮಾಗಡಿ ರಸ್ತೆಯಲ್ಲಿನ ಎರಡು ಬಾರ್‌ಗಳಲ್ಲಿ ನಡೆದಿದೆ. ವಿಶೇಷವೆಂದರೆ ಚಿತ್ರೀಕರಣ ನಡೆಸಿದ ಒಂದು ವೈನ್‌ ಸ್ಟೋರ್‌ ಹೆಸರು ಕೂಡ ‘ತಿರುಮಲ ವೈನ್‌ ಸ್ಟೋರ್’‌ ಎಂದೇ ಇತ್ತಂತೆ. ಮುಖ್ಯರಸ್ತೆಯಲ್ಲಿ ಬಾರ್‌ ಇರಬಾರದೆಂಬ ನಿಯಮದಿಂದ ಆ ಬಾರನ್ನು ಮುಚ್ಚಲಾಗಿದೆ. ಹಾಗಾಗಿ ಆ ಬಾರನ್ನೇ ಸಿನಿಮಾದ ಚಿತ್ರೀಕರಣಕ್ಕೆ ಬಳಸಿಕೊಂಡೆವು ಎನ್ನುತ್ತದೆ ಚಿತ್ರತಂಡ.

ಚಿತ್ರದ ಶೂಟಿಂಗ್‌ 23 ದಿನಗಳ ಕಾಲ ನಡೆದಿದೆ. ಮಾರ್ಚ್‌ನಲ್ಲೇ ಚಿತ್ರದ ಎಲ್ಲಾ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಮುಗಿದಿತ್ತು. ಏಪ್ರಿಲ್‌ನಲ್ಲಿ ಬಿಡುಗಡೆಗೆ ತಂಡ ನಿರ್ಧರಿಸಿತ್ತು.ಆದರೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಚಿತ್ರದ ಬಿಡುಗಡೆ ಸಾಧ್ಯವಾಗಿಲ್ಲ. ಈಗ ಒಟಿಟಿ ಪ್ಲಾಟ್‌ಫಾರಂ ಮೂಲಕ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಜುಲೈ, ಆಗಸ್ಟ್‌ನೊಳಗೆ ಚಿತ್ರ ಬಿಡುಗಡೆಯಾಗಲಿದೆ.

ಆರ್ಯ ಎಂ. ಮಹೇಶ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ನಿರಂಜನ್‌ ಬಾಬು ಛಾಯಾಗ್ರಹಣವಿದೆ. ಕತೆ ಕಿರಿಕ್‌ ಕೀರ್ತಿ ಅವರದೇ.ಆವಿಷ್ಕಾರ್‌ ಕ್ರಿಯೇಶನ್ಸ್‌ನಡಿ ಗಿರೀಶ್‌ ಕೋಲಾರ ಹಾಗೂ ಅರ್ಪಿತಾ ಕೀರ್ತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.