
ಸ್ಯಾಂಡಲ್ ವುಡ್‌ನಲ್ಲಿ ‘ಕ್ರಿಸ್ಮಿ’ ಎಂದೇ ಖ್ಯಾತಿ ಪಡೆದಿರುವ ಡಾರ್ಲಿಂಗ್ ಕೃಷ್ಣ– ಮಿಲನಾ ನಾಗರಾಜ್ ‘ಲವ್ ಮಾಕ್ಟೇಲ್’ ಸಿನಿಮಾ ಸರಣಿ ಮೂಲಕ ಜನರಿಗೆ ಹತ್ತಿರವಾದವರು. ‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಮಿಲನಾ ಹಾಗೂ ಕೃಷ್ಣ ಅವರದ್ದು ಲವ್ ಮ್ಯಾರೇಜ್. 2021ರಲ್ಲಿ ಪ್ರೇಮಿಗಳ ದಿನದಂದೇ ಹಸೆಮಣೆ ಏರಿದ ಈ ಜೋಡಿ, ಲವ್ ಮಾಕ್ಟೇಲ್, ಲವ್ ಬರ್ಡ್ಸ್ ಹಾಗೂ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಗಳಲ್ಲೂ ಜೋಡಿಯಾಗಿಯೇ ನಟಿಸಿರುವುದು ವಿಶೇಷ.
ನೆನಪಿರಬಹುದು, ನಿಮ್ಮನ್ನು ಮೊದಲ ಬಾರಿ ನೋಡಿದ್ದು 2012ರ ವರ್ಷಾಂತ್ಯದಲ್ಲಿ, ನನ್ನ ಮೊದಲ ಸಿನಿಮಾ ‘ನಮ್ ದುನಿಯಾ ನಮ್ ಸ್ಟೈಲ್’ನ ಕಚೇರಿಯಲ್ಲಿ. ಧಾರಾವಾಹಿ ಕ್ಷೇತ್ರದಿಂದ ಬಂದ ನಿಮಗೆ ನಟನೆ ಕರಗತವಾಗಿತ್ತು. ಕ್ರೀಡಾ ಕ್ಷೇತ್ರದಿಂದ ಬಂದ ನಾನು ನಟನೆಗೆ ಸಂಬಂಧಿಸಿದ ವಿಷಯಗಳ ಸಲಹೆಗಳನ್ನು ನಿಮ್ಮಿಂದ ಪಡೆದುಕೊಂಡಿದ್ದು ಮನಸ್ಸಿನಲ್ಲಿ ಇನ್ನೂ ಹಸುರಾಗಿದೆ. ಆಗ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು.
ಈ ಸ್ನೇಹ ಪ್ರೀತಿಗೆ ತಿರುಗಿದ್ದು 2014ರಲ್ಲಿ ಅಲ್ಲವೇ? ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ಮಾಡಿದ್ದು ‘ಚಾರ್ಲಿ’ ಸಿನಿಮಾ. ನನಗೆ ನೀವು ಪ್ರೊಪೋಸ್ ಮಾಡಿದಾಗ ನಮ್ಮಿಬ್ಬರ ಸ್ನೇಹಕ್ಕೆ ಎರಡು ವರ್ಷವಾಗಿತ್ತು. ನೀವೇ ನೇರವಾಗಿ ಮದುವೆಯ ಪ್ರಸ್ತಾಪ ಇರಿಸಿದ್ರಿ; ನೆನಪಿಸಿಕೊಳ್ಳಿ. ಕೆಲಸದ ಮೇಲೆ ನಿಮಗಿದ್ದ ನಿಷ್ಠೆ, ಪ್ರೀತಿ, ಶಿಸ್ತು ನನ್ನನ್ನು ಮೊದಲು ಆಕರ್ಷಿಸಿದ ನಿಮ್ಮ ಗುಣಗಳು. ಯಾವ ವಿಷಯವನ್ನೂ ನೀವು ಸುಲಭವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಸೆಟ್‌ಗೆ ನೀವು ತಡವಾಗಿ ಬಂದದ್ದನ್ನು ನಾನೆಂದೂ ನೋಡಿಲ್ಲ. ನಿಮ್ಮ ಈ ಸಮಯಪಾಲನೆ ಇಷ್ಟವಾಯಿತು. ನನ್ನನ್ನು ಬಹಳ ಶಿಸ್ತಿನಿಂದ ಬೆಳೆಸಿದ್ದರು. ಹೀಗಾಗಿಯೇ ಈ ರೀತಿಯ ಶಿಸ್ತು ಬೆಳೆಸಿಕೊಂಡಿರುವ ನಿಮ್ಮನ್ನು ಮನಸಾರೆ ಒಪ್ಪಿಕೊಂಡೆ.
ನಮ್ಮ ಕನಸಿನ ಕೂಸನ್ನು ಕೈಗೆತ್ತಿಕೊಂಡಾಗ ನಾವಿಬ್ಬರೂ ಪ್ರೀತಿಯಲ್ಲಿದ್ದೆವು. ಆಗ ನಮ್ಮಿಬ್ಬರ ಗುರಿ ಒಂದೇ ಆಗಿತ್ತು. ಅದುವೇ ‘ಲವ್ ಮಾಕ್ಟೇಲ್’. ಇಬ್ಬರೂ ಒಂದೇ ದಾರಿಯಲ್ಲಿ ಹೆಜ್ಜೆ ಹಾಕಿ ಯಶಸ್ಸನ್ನು ಕಂಡೆವು. ಕಥೆ ಬರೆಯುವುದರಿಂದ ಹಿಡಿದು ಸಿನಿಮಾವನ್ನು ತೆರೆಗೆ ತಂದ ದಿನದವರೆಗಿನ ಅವಧಿ ಇತ್ತಲ್ಲವೇ ಅದು ನಮ್ಮ ಜೀವನಕ್ಕೂ ಪಾಠವಾಯಿತು. ಅದೆಷ್ಟೋ ಬಾರಿ ನಾವಿಬ್ಬರು ಹಲವು ಗಂಟೆ ಜೊತೆಯಾಗಿ ಕುಳಿತು ಕಥೆ ಬರೆದಿದ್ದೇವೆ, ಸಿನಿಮಾದ ವಿಷಯಕ್ಕಾಗಿ ಚರ್ಚೆ ಮಾಡಿದ್ದೇವೆ, ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳೂ ಹುಟ್ಟಿಕೊಂಡಿದ್ದವು, ತಾಳ್ಮೆಯ ಪರೀಕ್ಷೆಗಳೂ ಆಗಿದ್ದವು. ಅವೆಲ್ಲವನ್ನೂ ಮಾತಿನಲ್ಲೇ ನಿಭಾಯಿಸಿದೆವು. ನಾನು ಸಿನಿಮಾ ನಿರ್ಮಾಣಕ್ಕೆ ಇಳಿಯಲು ನಿಮ್ಮ ಬೆಂಬಲ, ಪ್ರೋತ್ಸಾಹ ಹೆಚ್ಚೇ ಇತ್ತು. ಈ ಕೆಲಸಗಳು ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ತಂದವು. ನಾವು ಜನರ ಕಣ್ಣಲ್ಲಿ ‘ಕ್ರಿಸ್ಮಿ’ ಜೋಡಿಯಾದೆವು. 2021 ಫೆ. 14, ಪ್ರೇಮಿಗಳ ದಿನದಂದೇ ನಮ್ಮಿಬ್ಬರ ಮದುವೆಯಾಗಿದ್ದು ವಿಶೇಷವಲ್ಲದೆ ಮತ್ತೇನು?
ಬೇಬು, ನಿಮಗೊಂದು ಥ್ಯಾಂಕ್ಸ್ ಹೇಳಬೇಕು. ಏಕೆ ಗೊತ್ತೇ? ನಟಿಯಾಗಿ ನನಗೆ ಬಹಳ ಅಭದ್ರತೆ ಕಾಡುತ್ತಿದ್ದ ಸಮಯವದು. ಬಂದ ಅವಕಾಶಗಳಲ್ಲಿ ಸಿನಿಮಾ ಮಾಡುತ್ತಿದ್ದವಳು ನಾನು. ನಾನಾಗಿ ಹೋಗಿ ಅವಕಾಶ ಕೇಳಿದ್ದಿಲ್ಲ. ನನಗೆ ಬ್ರೇಕ್ ಸಿಕ್ಕಿದ್ದು 28ನೇ ವಯಸ್ಸಿನಲ್ಲಿ. ನನ್ನೊಳಗಿನ ಸಿನಿಮಾ ತುಡಿತ ಕಡಿಮೆಯಾಗದಂತೆ ನೋಡಿಕೊಂಡಿದ್ದು ನೀವು. ಮನಃಸ್ಥಿತಿ ದೃಢವಾಗಿರದೇ ಇದ್ದಾಗ ಭಾವನಾತ್ಮಕವಾಗಿ ನನ್ನ ಬೆಂಬಲಕ್ಕೆ ನಿಂತಿರಿ, ನನ್ನ ಮನೋಬಲ ಹಿಗ್ಗಿಸಿದಿರಿ. ‘ಜೀವನದಲ್ಲಿ ಯಶಸ್ಸು ಸಿಗುವುದಕ್ಕೆ ಒಂದು ಕಾಲ ಎಂಬುದಿಲ್ಲ. ಆ ಕಾಲ ಬಂದಾಗ ಆ ಕ್ಷೇತ್ರದಲ್ಲಿ ನೀನಿರಬೇಕು ಹಾಗೂ ಅದಕ್ಕಾಗಿ ಸಿದ್ಧಳಾಗಿರ ಬೇಕು’ ಎಂಬ ನಿಮ್ಮ ಸಲಹೆ ನನ್ನನ್ನು ಹುರಿದುಂಬಿಸುತ್ತಾ ಬಂದಿದೆ. ಇದು ನನಗೊಬ್ಬಳಿಗೇ ಅಲ್ಲ, ಎಲ್ಲರಿಗೂ ಪಾಠದಂತಿದೆ.
‘ಲವ್ ಮಾಕ್ಟೇಲ್’ ಮೂರನೇ ಕೂಸು (ಪಾರ್ಟ್ 3) ಇದೇ ಏ. 10ಕ್ಕೆ ಬರುತ್ತಿದೆ. ಈ ಕೂಸಿನ ಜೊತೆ ನಾವು ಹೆಜ್ಜೆ ಹಾಕುತ್ತಾ ಎಂಟು ವರ್ಷಗಳನ್ನು ಕಳೆದಿದ್ದೇವೆ ಎಂದರೆ ನಂಬಲಾಗುತ್ತಿಲ್ಲ. ಒಂದು ಕಂಪನಿಯ ವಹಿವಾಟು ಸರಾಗವಾಗಿ ನಡೆಯುತ್ತಿರುವಂತೆ ನಮ್ಮಿಬ್ಬರ ಈ ಸಿನಿಮಾ ಕೆಲಸ ಸಾಗುತ್ತಿದೆ. ಅಷ್ಟರಮಟ್ಟಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಶೇ 3–5ರಷ್ಟು ಯಶಸ್ಸನ್ನಷ್ಟೇ ಕಾಣುತ್ತಿರುವ ಈ ಚಿತ್ರರಂಗದಲ್ಲಿ ನಮ್ಮಿಬ್ಬರ ಸಿನಿಮಾಗಾಗಿ ಜನ ಕಾಯುತ್ತಿರುವುದನ್ನು ನೋಡಿದಾಗ ಖುಷಿಯಾಗುತ್ತದೆ. ಇದು ನಮ್ಮಿಬ್ಬರಿಗೂ ಸವಾಲೂ ಆಗಿದೆ ಅಲ್ಲವೇ? ‘ಲವ್ ಮಾಕ್ಟೇಲ್’ ಎಂಬ ಚಂದದ ಶೀರ್ಷಿಕೆಯಿಟ್ಟು ನಾವು ಕೇವಲ ಪ್ರೀತಿಯ ಬಗ್ಗೆಯಷ್ಟೇ ಹೇಳದೆ, ಜೀವನದ ವಿವಿಧ ಹಂತ, ಭಾವನೆಗಳ ಬಗ್ಗೆ ಹೇಳುತ್ತಿದ್ದೇವೆ ಎಂಬ ಸಾರ್ಥಕತೆ ಇದೆ.
ಮಗಳು ಪರಿ ಸಿಟ್ಟು, ಹಟ ಮಾಡುತ್ತಿದ್ದರೆ ನಿಮ್ಮನ್ನೇ ಹೋಲುತ್ತಾಳೆ. ನೀವು ಬಾಲ್ಯದಲ್ಲಿ ಬಹಳ ತುಂಟ ಆಗಿದ್ದಿರಿ ಎಂದು ಕೇಳಿದ್ದೇನೆ. ಈಕೆಯ ತುಂಟತನವೇನೂ ಕಮ್ಮಿ ಇಲ್ಲ. ಆದರೂ ನನ್ನಷ್ಟು ತರ್‍ಲೆ ಇಲ್ಲ ಬಿಡಿ. ಎಲ್ಲರೂ ನಿಮ್ಮನ್ನು ‘ಡಾರ್ಲಿಂಗ್’ ಎನ್ನುವಾಗ ಖುಷಿಯಾಗುತ್ತದೆ. ನೀವು ಎಲ್ಲರ ಡಾರ್ಲಿಂಗ್ ಅಲ್ಲವೇ ಬೇಬು?
–ನಿಮ್ಮ ಪ್ರೀತಿಯ ಮಿಲನಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.