ADVERTISEMENT

ಲಂಬೋದರ ಹೆಂಗಿದ್ದ ಹೆಂಗಾದ ಗೊತ್ತಾ?

ಕೆ.ಎಚ್.ಓಬಳೇಶ್
Published 10 ಜನವರಿ 2019, 20:00 IST
Last Updated 10 ಜನವರಿ 2019, 20:00 IST
ನಟ ಯೋಗೇಶ್‌
ನಟ ಯೋಗೇಶ್‌   

‘ನಾನು ಓದಿದ್ದು ಬೆಂಗಳೂರಿನಲ್ಲಿಯೇ. ಹೈಸ್ಕೂಲ್‌ನಲ್ಲಿ ಓದಿಗಿಂತ ಕ್ರೀಡೆಯಲ್ಲಿ ಪಾಲ್ಗೊಂಡಿದ್ದೇ ಹೆಚ್ಚು. ಒಮ್ಮೆ ಶಾಲೆಯಿಂದ ವಾಲಿಬಾಲ್‌ ಟೂರ್ನಿಗೆ ಹೋಗಿದ್ವಿ. ಆದ್ರೆ, ಅದೃಷ್ಟ ಕೈಕೊಟ್ಟಿತ್ತು. ಸೋತು ಸಪ್ಪೆಮೋರೆ ಹಾಕಿಕೊಂಡು ಶಾಲೆಗೆ ಹೋಗುವುದು ಹೇಗೆಂಬ ಚಿಂತೆ ಕಾಡಿತು. ಇನ್ನೊಂದೆಡೆ ಶಿಕ್ಷಕರು ಹೊಡೆಯುತ್ತಾರೆಂಬ ಭಯ. ಕೊನೆಗೆ, ಸ್ನೇಹಿತರೆಲ್ಲರೂ ಹಣ ಸಂಗ್ರಹಿಸಿ ಟ್ರೋಫಿ ಖರೀದಿಸಿದೆವು. ಪ್ರಶಸ್ತಿ ಗೆದ್ದಿರುವುದಾಗಿ ಸುಳ್ಳು ಹೇಳಿದೆವು. ಇದು ಬಹುಕಾಲ ಉಳಿಯಲಿಲ್ಲ. ಸತ್ಯ ಗೊತ್ತಾದಾಗ ಶಿಕ್ಷಕರಿಂದ ಚೆನ್ನಾಗಿ ಹೊಡೆತ ಬಿತ್ತು’

ಶಾಲಾ ಜೀವನದ ಈ ಕಥೆ ಹೇಳಿ ಲಂಬೋದರನ ಜಗತ್ತಿಗೆ ಹೊರಳಿದರು ನಟ ‘ಲೂಸ್‌ ಮಾದ’ ಯೋಗೇಶ್‌. ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಲಂಬೋದರ ನಗುವಿನ ಕಚಗುಳಿ ಇಡಲಿದ್ದಾನೆ ಎಂದು ಗಡ್ಡ ನೇವರಿಸಿಕೊಂಡರು. ಕೆ. ಕೃಷ್ಣರಾಜ್‌ ನಿರ್ದೇಶನದ ‘ಲಂಬೋದರ ಬಸವನಗುಡಿ ಬೆಂಗಳೂರು’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಒಂದು ವರ್ಷದ ಬಿಡುವಿನ ಬಳಿಕ ಯೋಗಿ ಸ್ಟೈಲಿಷ್‌ ಆಗಿ ನಗಿಸಲು ಜನರ ಮುಂದೆ ಬರುತ್ತಿದ್ದಾರೆ. ಅವರು ಗಡ್ಡ ತೆಗೆಸಿ ಹೈಸ್ಕೂಲ್‌ ಹುಡುಗನಾಗಿಯೂ ಕಾಣಿಸಿಕೊಂಡಿದ್ದಾರೆ. ಯೋಗಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ನಿರ್ದೇಶಕರು ಈ ಕಥೆ ಹೊಸೆದಿದ್ದಾರಂತೆ.

‘ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ಇದು. ಕಾಲೇಜು ಮುಗಿಸಿದ ಹುಡುಗರು ಸ್ವಲ್ಪ ದಿನಗಳ ಕಾಲ ಕೆಲಸಕ್ಕೆ ಹೋಗುವುದಿಲ್ಲ. ಆರಾಮವಾಗಿ ಕಾಲ ಕಳೆಯಲು ಇಚ್ಛಿಸುತ್ತಾರೆ. ಆಗ ಅವರ ಜೀವನದಲ್ಲಿ ಏನಾಗುತ್ತದೆ ಎನ್ನುವುದೇ ಕಥೆಯ ತಿರುಳು. ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿದಾಗ ಹೇಗೆ ಜಗಳವಾಡುತ್ತಾರೆ, ಅಪ್ಪ– ಅಮ್ಮ ಮತ್ತು ಮಗನ ನಡುವೆ ಇರುವ ಬಾಂಧವ್ಯ ಎಂತಹದ್ದು ಎನ್ನುವುದರ ಸುತ್ತ ಚಿತ್ರಕಥೆ ಸಾಗಲಿದೆ’ ಎನ್ನುತ್ತಾರೆ ಯೋಗಿ.

ADVERTISEMENT

ಯೋಗಿಯ ವೃತ್ತಿಬದುಕಿಗೆ ಒಂದು ದಶಕ ತುಂಬಿದೆ. ಅವರು ನಟಿಸಿದ ಮೊದಲ ಚಿತ್ರ ‘ದುನಿಯಾ’. ಅದರಲ್ಲಿನ ಲೂಸ್‌ ಮಾದನ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ‘ಅಂಬಾರಿ’, ‘ಸಿದ್ಲಿಂಗು’ನಂತಹ ಸೂಪರ್‌ ಹಿಟ್‌ ಚಿತ್ರ ನೀಡಿದ ಅವರು ‘ಹುಡುಗರು’, ‘ಯಾರೇ ಕೂಗಾಡಲಿ’ ಚಿತ್ರದಲ್ಲಿನ ನಟನೆ ಮೂಲಕ ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾದರು.

ವೃತ್ತಿಬದುಕಿನಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಅವರಿಗೆ ‘ಲಂಬೋದರ’ನ ಮೂಲಕ ಮತ್ತೆ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರುವ ಆಸೆಯಿದೆ. ‘ನನ್ನ ಹಿಂದಿನ ಚಿತ್ರಗಳಲ್ಲಿ ಮಧ್ಯಮ ವರ್ಗದ ಹುಡುಗನಾಗಿ ಜನರನ್ನು ನಗಿಸಿದ್ದೇನೆ. ಈ ಚಿತ್ರದಲ್ಲಿಯೂ ಅದೇ ಕೆಲಸ ಮುಂದುವರಿದಿದೆ. ಆದರೆ, ಕಾಸ್ಟ್ಯೂಮ್‌, ಲುಕ್‌ ಅನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೇನೆ’ ಎನ್ನುವುದು ಅವರ ವಿವರಣೆ.

‘ಮಕ್ಕಳಿಗೆ ನಾವು ಮಾಡುವುದೇ ಸರಿಯಾಗಿದೆ ಅನಿಸುತ್ತದೆ. ಯಾರ ಮಾತನ್ನೂ ಅವರು ಕೇಳಲು ಸಿದ್ಧರಿರುವುದಿಲ್ಲ. ಜೀವನದಲ್ಲಿ ಪೆಟ್ಟು ಬಿದ್ದಾಗ ಪೋಷಕರು ಹೇಳಿದ ಮಾತುಗಳು ಅರಿವಿಗೆ ಬರುತ್ತವೆ. ಇದನ್ನೇ ಚಿತ್ರದಲ್ಲಿ ಹೇಳಿದ್ದೇವೆ. ಜೊತೆಗೆ, ಪೋಷಕರು ಮಕ್ಕಳೊಂದಿಗೆ ಹೇಗಿರಬೇಕು ಎಂಬ ಸಂದೇಶವೂ ಇದರಲ್ಲಿದೆ’ ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟರು. ಗಡ್ಡದ ಮೇಲೆ ಯೋಗಿಗೆ ಬಹುಪ್ರೀತಿ. ಅವರು ಗಡ್ಡ ತೆಗೆಸಿದ್ದು ‘ಸಿದ್ಲಿಂಗು’ ಚಿತ್ರದಲ್ಲಿ. ‘ಈ ಚಿತ್ರದಲ್ಲಿ ಹೈಸ್ಕೂಲ್ ಹುಡುಗನಾಗಿ ಕಾಣಿಸಿಕೊಂಡಿರುವುದರಿಂದ ಗಡ್ಡ ತೆಗೆಸುವುದು ಅನಿವಾರ್ಯವಾಯಿತು’ ಎಂದು ನಕ್ಕರು.

ವರ್ಷಕ್ಕೆ ಎರಡು ಸಿನಿಮಾ ಮಾಡುವುದಾಗಿ ಹೊಸ ವರ್ಷದಲ್ಲಿ ಅವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಫೆಬ್ರುವರಿಯಲ್ಲಿ ಆ್ಯಕ್ಷನ್‌ ಮತ್ತು ಪ್ರೀತಿ ಮಿಳಿತ ಚಿತ್ರವೊಂದು ಸೆಟ್ಟೇರುತ್ತಿದೆಯಂತೆ. ‘ಇಲ್ಲಿಯವರೆಗೆ ನಾನು ಜನರಿಗೆ ಹತ್ತಿರವಾಗುವ ಸಿನಿಮಾಗಳಲ್ಲಿ ನಟಿಸಿದ್ದೇನೆ. ಇನ್ನು ಮುಂದೆ ಮಾಸ್‌ ಚಿತ್ರಗಳಲ್ಲಿ ನಟಿಸಲು ತೀರ್ಮಾನಿಸಿದ್ದೇನೆ.ರಾಮ್‌ಪ್ರಸಾದ್‌ ಫೆಬ್ರುವರಿಯಲ್ಲಿ ನನ್ನ ಹೊಸ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ನವೆಂಬರ್‌ನಲ್ಲಿ ಎ.ಪಿ. ಅರ್ಜುನ್‌ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಕಥೆಯಲ್ಲಿ ಹೊಸತನ ಇರಬೇಕು. ಪಾತ್ರ ಸವಾಲಿನಿಂದ ಕೂಡಿರಬೇಕು. ಅಂತಹ ಪಾತ್ರಗಳಿಗೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ಪಾತ್ರಗಳ ಆಯ್ಕೆ ಬಗ್ಗೆ ವಿವರಿಸುತ್ತಾರೆ.

ಚಿತ್ರ ನಿರ್ದೇಶನ ಮಾಡುವ ಆಸೆ ಇಲ್ಲವೇ? ಎಂಬ ಪ್ರಶ್ನೆಗೆ, ‘ಸಿನಿಮಾ ನಿರ್ದೇಶನ ಮಾಡಬೇಕೆಂಬುದು ನನ್ನ ಹಲವು ವರ್ಷದ ಕನಸು. ಆದರೆ, ನಾನು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಸ್ನೇಹಿತರ ಜೊತೆಗೆ ಕಥೆಯ ಬಗ್ಗೆ ಚರ್ಚಿಸುತ್ತಿರುತ್ತೇನೆ. ಆ್ಯಕ್ಷನ್‌ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.