ಸೋನು ನಿಗಮ್
ಬೆಂಗಳೂರು: ಗಾಯಕ ಸೋನು ನಿಗಮ್ ಅವರು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸದಸ್ಯರು ಆವಲಹಳ್ಳಿ ಪೊಲೀಸ್ ಠಾಣೆಗೆ ಶುಕ್ರವಾರ ರಾತ್ರಿ ದೂರು ನೀಡಿದ್ದಾರೆ.
ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ ಅವರು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿಲ್ಲ.
ಸೋನು ನಿಗಮ್ ಅವರು ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಏಪ್ರಿಲ್ 25 ಹಾಗೂ 26ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಭಾವನೆಗಳನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ವಿಡಿಯೊದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.
ಹಿನ್ನೆಲೆ:
ಇತ್ತೀಚೆಗೆ ನಗರದ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಕನ್ನಡ ಕುರಿತು ಆಡಿದ ಮಾತು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯುವಕನೊಬ್ಬ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳುಕು ಹಾಕಿ ಗಾಯಕ ಮಾತನಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
‘ನಾನು ಎಲ್ಲ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ನನ್ನ ಜೀವನದಲ್ಲಿ ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದವು. ನಾನು ಪ್ರತಿನಿತ್ಯವೂ ಶೋಗಳನ್ನು ಮಾಡುತ್ತೇನೆ. ಆದರೆ ಕರ್ನಾಟಕಕ್ಕೆ ಬಹಳ ಪ್ರೀತಿಯಿಂದ ಬರುತ್ತೇನೆ. ಕರ್ನಾಟಕಕ್ಕೆ ಬಹಳ ಗೌರವಯುತವಾಗಿ ಬರುತ್ತೇನೆ. ಏಕೆಂದರೆ ನೀವು ನನ್ನನ್ನು ಕುಟುಂಬದವನನ್ನಾಗಿ ಕಂಡಿದ್ದೀರಿ. ಅಲ್ಲೊಬ್ಬ ಹುಡುಗನ ವರ್ತನೆ ನನಗೆ ಸರಿ ಅನಿಸಲಿಲ್ಲ. ನಾನು ಕನ್ನಡ ಹಾಡು ಹಾಡಲು ಪ್ರಾರಂಭಿಸಿದ ವರ್ಷದಷ್ಟು ಆತನಿಗೆ ವಯಸ್ಸು ಆಗಿಲ್ಲ. ಆತ ನನಗೆ ಬಹಳ ಒರಟಾಗಿ ‘ಕನ್ನಡ ಕನ್ನಡ..’ ಎಂದು ಬೆದರಿಸುತ್ತಿದ್ದಾನೆ. ಪಹಲ್ಗಾಮ್‌ನಲ್ಲಿ ಏನು ಘಟನೆ ನಡೆದಿದೆಯೋ ಅದಕ್ಕೆ ಇದೇ ಕಾರಣ. ನೀನು ಈಗ ಮಾಡಿರುವುದೇ ಕಾರಣ. ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ. ನಾನು ಇಡೀ ವಿಶ್ವದಲ್ಲಿ ಎಲ್ಲಿಗೇ ಹೋದರೂ ಲಕ್ಷಾಂತರ ಜನರ ನಡುವೆ ಒಬ್ಬರು ‘ಕನ್ನಡ ಕನ್ನಡ’ ಎನ್ನುತ್ತಾರೆ. ನಾನು ಆ ಒಬ್ಬ ವ್ಯಕ್ತಿಗಾಗಿ ಒಂದೆರಡು ಸಾಲು ಕನ್ನಡದಲ್ಲಿ ಹಾಡುತ್ತೇನೆ. ನಾನು ನಿಮ್ಮನ್ನು ಇಷ್ಟು ಗೌರವದಿಂದ, ಪ್ರೀತಿಯಿಂದ ನೋಡುತ್ತೇನೆ. ಹೀಗಾಗಿ ಹೀಗೆ ಮಾಡಬಾರದು’ ಎಂದು ಸೋನು ನಿಗಮ್ ವೇದಿಕೆಯಲ್ಲಿ ಪ್ರದರ್ಶನ ನೀಡುವ ಸಂದರ್ಭದಲ್ಲಿ ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.