ADVERTISEMENT

ಲೋಕಸಭಾ ಚುನಾವಣೆ | ಗೀತಾ ಶಿವರಾಜ್‌ಕುಮಾರ್‌ಗೆ ನಿರ್ಮಾಪಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 12:58 IST
Last Updated 18 ಮಾರ್ಚ್ 2024, 12:58 IST
<div class="paragraphs"><p> ಗೀತಾ ಶಿವರಾಜ್‌ಕುಮಾರ್‌&nbsp;ಮತ್ತು  ಶಿವರಾಜ್ ಕುಮಾರ್</p></div>

ಗೀತಾ ಶಿವರಾಜ್‌ಕುಮಾರ್‌ ಮತ್ತು ಶಿವರಾಜ್ ಕುಮಾರ್

   

ಪ್ರಜಾವಾಣಿ ಚಿತ್ರ/ರಂಜು ಪಿ

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಬೆಂಬಲ ಘೋಷಿಸಿದ್ದಾರೆ.

ADVERTISEMENT

ಸೋಮವಾರ (ಮಾರ್ಚ್‌ 18) ಬೆಂಗಳೂರಿನ ಶಿವರಾಜ್‌ಕುಮಾರ್‌ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕರು ತಮ್ಮ ಬೆಂಬಲವನ್ನು ಘೋಷಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಅಧ್ಯಕ್ಷ ಎನ್‌.ಎಂ.ಸುರೇಶ್‌ ಮಾತನಾಡಿ, ‘ಗೀತಾ ಅವರನ್ನು ಬಹುಮತದಿಂದ ಗೆಲ್ಲಿಸಲು ನಾವು ಕಾರಣವಾಗುತ್ತೇವೆ. ದೊಡ್ಮನೆ ಕುಟುಂಬ ಚಿತ್ರೋದ್ಯಮದ ಆಸ್ತಿ. ಚಿತ್ರರಂಗದ ಎಲ್ಲ ಸಂಸ್ಥೆಗಳು ಗೀತಾ ಅವರ ಬೆನ್ನಿಗೆ ನಿಲ್ಲಲಿವೆ. ನಾಮಪತ್ರ ಸಲ್ಲಿಸುವ ದಿನ ಇಡೀ ಚಿತ್ರರಂಗ ಅಲ್ಲಿ ಉಪಸ್ಥಿತವಿರಲಿದೆ. ಪಕ್ಷಾತೀತವಾಗಿ ಚಿತ್ರರಂಗ ಬೆಂಬಲವಾಗಿ ನಿಲ್ಲಲಿದೆ’ ಎಂದರು.

ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌, ‘ಚಿತ್ರರಂಗದ ಸೇವೆಯನ್ನು ದೊಡ್ಮನೆ ಮೊದಲಿಂದಲೂ ಮಾಡುತ್ತಿದೆ. ಚಿತ್ರರಂಗದ ಸಣ್ಣಪುಟ್ಟ ಆಗುಹೋಗುಗಳನ್ನು ಸರಿಮಾಡಲು ನಾವು ದೊಡ್ಮನೆಗೆ ಹೋಗುತ್ತಿದ್ದೆವು. ಇದೀಗ ದೊಡ್ಮನೆಯವರು ಜನಸೇವೆ ಮಾಡಬೇಕು ಎಂದಾಗ, ಚಿತ್ರರಂಗ ಅವರ ಜೊತೆ ನಿಲ್ಲಬೇಕಾದದ್ದು ನಮ್ಮ ಕರ್ತವ್ಯ. ಈ ಮೂಲಕ ನಮ್ಮ ಋಣ ಸಂದಾಯ ಮಾಡಬೇಕು’ ಎಂದರು.

ಮಾರ್ಚ್‌ 20ಕ್ಕೆ ಭದ್ರಾವತಿ ಪ್ರವೇಶ: ‘ನಮ್ಮ ಶಕ್ತಿಯನ್ನೇ ಬಳಸಿಕೊಂಡು ಶಿವಮೊಗ್ಗ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಬೇರೆಯವರ ಒಡೆದು ಹೋದ ಮನೆಯತ್ತ ನೋಡುವುದಿಲ್ಲ. ಗೆಲ್ಲಿಸುವುದಕ್ಕೇ ಗೀತಾ ಅವರನ್ನು ನಿಲ್ಲಿಸುತ್ತಿದ್ದೇವೆ. ಗೆದ್ದ ಮೇಲೆ ಗೀತಾ ಅವರೇ ಆ ಕ್ಷೇತ್ರವನ್ನು ನಡೆಸುತ್ತಾರೆ. ನಾನು ಮಧ್ಯಸ್ತಿಕೆ ವಹಿಸುವುದಿಲ್ಲ. ಚಿತ್ರರಂಗಕ್ಕೆ ಧ್ವನಿಯಾಗಿ ಅವರು ಇರುತ್ತಾರೆ. ಮಾರ್ಚ್‌ 20ರಂದು ಭದ್ರಾವತಿಯಿಂದ ಗೀತಾ ಅವರು ಪ್ರಚಾರ ಆರಂಭಿಸುತ್ತಾರೆ. ಶಿವರಾಜ್‌ಕುಮಾರ್‌ ಅವರೂ ಇರುತ್ತಾರೆ. 21ಕ್ಕೆ ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಿ ಬೈಂದೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಶಿವರಾಜ್‌ಕುಮಾರ್‌ ಅವರು ಶೂಟಿಂಗ್‌ ಇತಿಮಿತಿ ನೋಡಿಕೊಂಡು ಪ್ರಚಾರದಲ್ಲಿ ಭಾಗವಹಿಸುತ್ತಾರೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

‘ಚಿತ್ರರಂಗದಿಂದ ನಾನು ಹೆಸರು ತೆಗೆದುಕೊಂಡಿದ್ದೇನೆ. ಚುನಾವಣೆ ಮುಗಿದ ಬಳಿಕ ಸಿನಿಮಾ ನಿರ್ಮಾಣ ಮಾಡುತ್ತೇನೆ. ಪ್ರೊಡಕ್ಷನ್‌ ಆರಂಭಿಸುತ್ತೇನೆ. ನಿರ್ಮಾಪಕರು ಅನ್ನದಾತರು. ಅವರು ಗೀತಾ ಅವರ ಬೆಂಬಲಕ್ಕೆ ನಿಂತಿರುವುದು ಸಂತೋಷ’ ಎಂದರು ಮಧು ಬಂಗಾರಪ್ಪ.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಸಾ.ರಾ.ಗೋವಿಂದ್‌, ಚೆನ್ನೇಗೌಡ, ಥಾಮಸ್‌ ಡಿಸೋಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.