ಬೆಂಗಳೂರು: ಕಲ್ಯಾಣಿ ಪ್ರಿಯದರ್ಶನ್ ನಟನೆಯ ಮಲಯಾಳಂ ಸಿನಿಮಾ ‘ಲೋಕಾ ಚಾಪ್ಟರ್–1 ಚಂದ್ರ’ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಆದರೆ ಸಿನಿಮಾದಲ್ಲಿ ಬಳಕೆಯಾದ ಸಂಭಾಷಣೆ ಕನ್ನಡಿಗರನ್ನು, ಕರ್ನಾಟಕವನ್ನು ಅವಮಾನಿಸುತ್ತಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ.
ವಿವಾದ ಸೃಷ್ಟಿಯಾಗುತ್ತಿದ್ದಂತೆ ಕನ್ನಡಿಗರನ್ನು ಚಿತ್ರತಂಡ ಕ್ಷಮೆಯಾಚಿಸಿದೆ.
ವಿವಾದ ಏನು?
ಲೋಕಾ ಚಿತ್ರದ ಬಹುತೇಕ ದೃಶ್ಯಗಳನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿನ ಸಂಭಾಷಣೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಹಿಳೆಯರ ಕುರಿತು ಕೆಟ್ಟ ಭಾಷಾಪ್ರಯೋಗ ಮಾಡಲಾಗಿದೆ. ಇದು ವಿವಾದ ಹುಟ್ಟಿಸಿದೆ.
ಕನ್ನಡದ ನಿರ್ದೇಶಕ ಮಂಸೋರೆ ಅವರು ಸಿನಿಮಾ ಕುರಿತು ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಕನ್ನಡದ ಸಿನಿಮಾ ಭೀಮ, ಮಲಯಾಳಂನ ‘ಆಫೀಸರ್ ಆನ್ ಡ್ಯೂಟಿ’, ‘ಆವೇಶಮ್’ ಈಗ ‘ಲೋಕಾ’ ಈ ಎಲ್ಲಾ ಸಿನಿಮಾಗಳಲ್ಲಿ ಬೆಂಗಳೂರನ್ನು ಡ್ರಗ್ಸ್ ಮತ್ತು ಅಪರಾಧಗಳ ರಾಜಧಾನಿ ಎನ್ನುವಂತೆ ತೋರಿಸಲಾಗಿದೆ. ಒಂದು ಕಾಲದಲ್ಲಿ ಬೆಂಗಳೂರನ್ನು ಒಳ್ಳೆಯ ನಗರ ಎಂದು ಬಿಂಬಿಸಲಾಗುತ್ತಿತ್ತು. ಅನಿಯಂತ್ರಿತ ವಲಸೆಯಿಂದಾಗಿ ಬೆಂಗಳೂರು ಈ ಸ್ಥಿತಿಗೆ ಬಂದಿದೆ’ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಅಪರಾಧಗಳು ಹೆಚ್ಚು ಎನ್ನುವಂತೆ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನೆಟ್ಟಿಗರೂ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕ್ಷಮೆ ಕೇಳಿರುವ ಚಿತ್ರತಂಡ, ‘ಲೋಕಾ ಚಿತ್ರದಲ್ಲಿ ಬಳಸಿದ ಸಂಭಾಷಣೆ ಕರ್ನಾಟಕದ ಜನರ ಭಾವನೆಗೆ ಧಕ್ಕೆ ತಂದಿದೆ ಎನ್ನುವ ವಿಚಾರ ಗಮನಕ್ಕೆ ಬಂದಿದ್ದು, ಯಾವ ಪದಗಳ ಬಳಕೆಯೂ ಜನರ ಮನಸ್ಸನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ. ಇದಕ್ಕೆ ವಿಷಾದಿಸುತ್ತೇವೆ. ಚಿತ್ರದಲ್ಲಿನ ಸಂಭಾಷಣೆಯನ್ನು ತೆಗೆಯಲಾಗಿದೆ. ಕನ್ನಡಿಗರ ಬಳಿ ಕ್ಷಮೆಯಾಚಿಸುತ್ತೇವೆ ಎಂದು ಬರೆದುಕೊಂಡಿದೆ.
ಲೋಕಾ ಚಾಪ್ಟರ್ –1
₹80 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಚಿತ್ರ ಮಹಿಳಾ ನಾಯಕಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೊದಲ ಚಿತ್ರವಾಗಿದೆ.
ಆ.28ರಂದು ಬಿಡುಗಡೆಯಾದ ಈ ಸಿನಿಮಾ ಸೋಮವಾರದ ಅಂತ್ಯಕ್ಕೆ ₹31.5 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.