ADVERTISEMENT

ಮಾನ್ವಿ ಎದುರಿಸಿದ ಕಾಸ್ಟಿಂಗ್ ಕೌಚ್ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 19:30 IST
Last Updated 12 ಏಪ್ರಿಲ್ 2020, 19:30 IST
ಮಾನ್ವಿ ಗಾಗ್ರೂ
ಮಾನ್ವಿ ಗಾಗ್ರೂ   

ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾದ ‘ಮೇಡ್ ಇನ್ ಹೆವನ್’ ಹಾಗೂ ಟಿವಿಎಫ್‌ನಲ್ಲಿ ಪ್ರಸಾರವಾದ ‘ಟಿವಿಎಫ್‌ ಟ್ರಿಪ್ಲಿಂಗ್’ ವೆಬ್ ಸರಣಿಗಳನ್ನು ವೀಕ್ಷಿಸಿದವರಿಗೆ ಮಾನ್ವಿ ಗಾಗ್ರೂ ಪರಿಚಿತರೇ ಆಗಿರುತ್ತಾರೆ.

ಮಾನ್ವಿ ಅವರು ಈಚೆಗೆ ನೀಡಿರುವ ಸಂದರ್ಶನವೊಂದರ ವೇಳೆ, ಹಿಂದೆ ನಾವು ಅನುಭವಿಸಿದ ‘ಪಾತ್ರಕ್ಕಾಗಿ ಪಲ್ಲಂಗ’ದ (ಕಾಸ್ಟಿಂಗ್ ಕೌಚ್) ಪ್ರಸಂಗದ ಕುರಿತು ಮಾತನಾಡಿದ್ದಾರೆ. ಈಗ ಒಂದು ವರ್ಷದ ಹಿಂದೆ ವ್ಯಕ್ತಿಯೊಬ್ಬರು ಮಾನ್ವಿ ಅವರಿಗೆ ಕರೆ ಮಾಡಿ, ವೆಬ್ ಸರಣಿಯೊಂದರಲ್ಲಿ ಪಾತ್ರ ನಿಭಾಯಿಸುವಿರಾ ಎಂದು ಕೇಳಿದರಂತೆ. ಆದರೆ, ಅದರಲ್ಲಿ ಮಾನ್ವಿ ಅವರಿಗೆ ಸಿಗಲಿದ್ದ ಸಂಭಾವನೆ ಕಡಿಮೆ ಇತ್ತು.

‘ನಾವು ಈಗಲೇ ಹಣದ ಬಗ್ಗೆ ಮಾತನಾಡುವುದು ಏಕೆ? ನನಗೆ ಸ್ಕ್ರಿಪ್ಟ್‌ ಬಗ್ಗೆ ಹೇಳಿ. ನನಗೆ ಅದು ಆಸಕ್ತಿ ಮೂಡಿಸಿದರೆ ಹಾಗೂ ನನ್ನ ಅಭಿನಯವನ್ನು ನೀವು ಬಳಸಿಕೊಳ್ಳುವಿರಾದರೆ ಬಜೆಟ್ ಕುರಿತು ಮಾತನಾಡೋಣ ಎಂದು ಹೇಳಿದೆ. ನಂತರದಲ್ಲಿ ಆ ವ್ಯಕ್ತಿ, ನನಗೆ ಮೊದಲು ತಿಳಿಸಿದ್ದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡುವುದಾಗಿ ಹೇಳಿದ. ಆದರೆ ಅಷ್ಟು ಹಣ ಕೊಡಬೇಕು ಎಂದಾದರೆ ನಾನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದೂ ತಿಳಿಸಿದ’ ಎನ್ನುವ ವಿಚಾರವನ್ನು ಮಾನ್ವಿ ಅವರು ‘ಕೊಯಿಮೊಯಿ’ ವೆಬ್‌ಸೈಟ್‌ಗೆ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಮಾತನ್ನು ಕೇಳಿದ್ದೇ ತಡ ಮಾನ್ವಿ ಅವರು ಆ ವ್ಯಕ್ತಿಗೆ ಚೆನ್ನಾಗಿ ಝಾಡಿಸಿದರಂತೆ. ‘ಫೋನ್‌ ಇಡು. ಇಲ್ಲದಿದ್ದರೆ ನಾನು ಪೊಲೀಸರಿಗೆ ವಿಷಯ ತಿಳಿಸುತ್ತೇನೆ’ ಎಂದು ಬಿಸಿ ಮುಟ್ಟಿಸಿದ್ದಾರೆ ಮಾನ್ವಿ.

2008ರಿಂದ ತೆರೆಯ ಮೇಲಿನ ಬದುಕು ಸಾಗಿಸುತ್ತಿರುವ ಮಾನ್ವಿ ಅವರು ಸಿನಿಮಾ, ಟಿ.ವಿ. ಧಾರಾವಾಹಿ ಹಾಗೂ ವೆಬ್ ಸರಣಿಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ‘ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಅವರ ತೀರಾ ಇತ್ತೀಚಿನ ಸಿನಿಮಾ. ಇದಲ್ಲದೆ ‘377 ಅಬ್ ನಾರ್ಮಲ್’ನಂತಹ ಭಿನ್ನ ಹಳಿಯ ಸಿನಿಮಾಗಳಲ್ಲಿ ಕೂಡ ಅವರು ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.