ADVERTISEMENT

Kannada Movies ಮಹಾಕವಿಯಲ್ಲಿ ಪಂಪನಾದ ಕಿಶೋರ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 21:31 IST
Last Updated 11 ಡಿಸೆಂಬರ್ 2025, 21:31 IST
ಕಿಶೋರ್‌ 
ಕಿಶೋರ್‌    

ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಮಹಾಕವಿ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿದೆ. 

ಬೆಳಗಾವಿಯ ಶ್ರೀ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ ಎಂದು ಚಿತ್ರತಂಡ ತಿಳಿಸಿದೆ. 

‘ಮಹಾಕವಿ’ಯು ಬರಗೂರರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ವಿಶೇಷ. ‘ಈ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನರೂಪ ಕೊಡಲಾಗಿದೆ. ಪಂಪ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದೂ ಸೃಜನಶೀಲ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ಬರೆದ ಕವಿ. ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಕುರಿತ ಪಂಪನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಅಂತೆಯೇ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊಟ್ಟಮೊದಲ ಕವಿ ಪಂಪ. ‘ಆದಿಪುರಾಣ’ದಲ್ಲಿ ಅಧಿಕಾರದ ಅಹಂಕಾರಕ್ಕೆ ವಿರೋಧ ಒಡ್ಡಿ ಯುದ್ಧದ ಬದಲು ಶಾಂತಿ ಸಂದೇಶ ನೀಡಿದ್ದಾನೆ. ಭೋಗದ ನಶ್ವರತೆಯನ್ನು ಪ್ರತಿಪಾದಿಸಿದ್ದಾನೆ. ಈ ಎಲ್ಲಾ ಪರಿಕಲ್ಪನೆಗಳಿಗೆ ಪ್ರತೀಕವಾಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆ’ ಎಂದಿದ್ದಾರೆ ಬರಗೂರು ರಾಮಚಂದ್ರಪ್ಪ. 

ADVERTISEMENT

ಪಂಪ ಮಹಾಕವಿಯ ಕೆಲವು ಪದ್ಯಗಳನ್ನು ಚಿತ್ರದಲ್ಲಿ ಬಳಸಿದ್ದು, ಒಂದು ಗೀತೆಯನ್ನು ಬರಗೂರು ಅವರು ರಚಿಸಿದ್ದಾರೆ. ಜೊತೆಗೆ ಚಿತ್ರಕಥೆ, ಸಂಭಾಷಣೆಯೂ ಅವರದ್ದೇ. ಪಂಪನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ‘ಬಿಗ್‍ಬಾಸ್’ ಖ್ಯಾತಿಯ ಅನುಷಾ ರೈ ನಾಯಕಿಯ ಪಾತ್ರದಲ್ಲಿದ್ದಾರೆ. ಬಾಲಕ ಪಂಪನ ಪಾತ್ರವನ್ನು ಆಕಾಂಕ್ಷ್ ಬರಗೂರು ವಹಿಸಿದ್ದು, ಹಿರಿಯ ನಟರಾದ ಸುಂದರ್‌ ರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೋವಿಂದ್ ಅವರಲ್ಲದೆ ಸುಂದರರಾಜ ಅರಸು, ವತ್ಸಲಾ ಮೋಹನ್, ರಾಘವ್, ಹನುಮಂತೇಗೌಡ, ಶಾಂತರಾಜು, ಚಲಪತಿ ಸಿರಾ, ಬಾಲಕೃಷ್ಣ ಬರಗೂರು, ನಟರಾಜ್, ಪ್ರವೀಣ್ ತಾರಾಬಳಗದಲ್ಲಿದ್ದಾರೆ. 

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಚಿತ್ರಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ತ್ರಿಭುವನ್ ನೃತ್ಯ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಸಿನಿಮಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.