ADVERTISEMENT

ತೆಲುಗು: ಒಂದೇ ಭಾಗದಲ್ಲಿ ‘ವಾರಾಣಸಿ’ 

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:03 IST
Last Updated 5 ಫೆಬ್ರುವರಿ 2026, 5:03 IST
ಪ್ರಿಯಾಂಕ, ಮಹೇಶ್‌ ಬಾಬು
ಪ್ರಿಯಾಂಕ, ಮಹೇಶ್‌ ಬಾಬು   

ಬೃಹತ್‌ ಬಜೆಟ್‌ನ ದೊಡ್ಡ ಸಿನಿಮಾಗಳು ಎರಡು, ಮೂರು ಭಾಗಗಳಲ್ಲಿ ಬರುವುದು ಇತ್ತೀಚಿನ ಟ್ರೆಂಡ್‌. ಒಂದು ಶೀರ್ಷಿಕೆ ಹಿಟ್‌ ಆದರೆ ಅದನ್ನು ಫ್ರಾಂಚೈಸಿಯಾಗಿಸಿಕೊಂಡು ಪ್ರೀಕ್ವೆಲ್‌, ಸೀಕ್ವೆಲ್‌ಗಳನ್ನು ಮಾಡುವುದು ಹಾಲಿವುಡ್‌ನಲ್ಲಿ ಸಾಮಾನ್ಯ ರೂಢಿ. ಅದು ಭಾರತೀಯ ಚಿತ್ರರಂಗಕ್ಕೂ ಕಾಲಿಟ್ಟು ಕೆಲ ವರ್ಷಗಳಾಗಿವೆ. ಆದರೆ, ಮಹೇಶ್‌ ಬಾಬು ನಟನೆಯ ‘ವಾರಾಣಸಿ’ ಒಂದೇ ಭಾಗದಲ್ಲಿ ಬರಲಿದ್ದು, 3 ಗಂಟೆ ಅವಧಿಯ ಚಿತ್ರ ಎಂದು ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಹೇಳಿದ್ದಾರೆ. 

ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಚಿತ್ರದ ಕುರಿತು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಚಿತ್ರೀಕರಣ ಪ್ರಗತಿಯಲ್ಲಿದ್ದು, ಏ.7,2027ರಂದು ಚಿತ್ರ ತೆರೆಗೆ ಬರಲಿದೆ. ಮೊದಲು ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರುವ ಆಲೋಚನೆ ಇತ್ತು. ಆದರೆ ಆ ಆಲೋಚನೆಗೆ ಈಗ ಸ್ಪಷ್ಟತೆ ಸಿಕ್ಕಿದ್ದು, ಒಂದೇ ಭಾಗದಲ್ಲಿ ಚಿತ್ರ ಮೂಡಿಬರಲಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಕೂಡ ಮುಕ್ತಾಯಗೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ. 

‘ಆರ್‌ಆರ್‌ಆರ್‌’ ಬಳಿಕ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಟ ಮಹೇಶ್‌ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರವಿದು. ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್‍ ಬಿಝಿನೆಸ್‍ ಸಂಸ್ಥೆಗಳಡಿ ಕೆ.ಎಲ್‍.ನಾರಾಯಣ ಮತ್ತು ಎಸ್‍.ಎಸ್. ಕಾರ್ತಿಕೇಯ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸುಮಾರು ₹1300 ಕೋಟಿ ಬಜೆಟ್‌ನ ಚಿತ್ರ ಎಂದು ಅಂದಾಜಿಸಲಾಗಿದೆ. ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್‌ ಸುಕುಮಾರನ್‌ ತಾರಾಬಳಗದಲ್ಲಿದ್ದಾರೆ. 

ADVERTISEMENT

ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್‍ ಕಥೆ-ಚಿತ್ರಕಥೆ ರಚಿಸಿದ್ದು, ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಲಿದ್ದಾರೆ. ಮಹೇಶ್‍ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್‍ ಸುಕುಮಾರನ್‍ ಕ್ರಮವಾಗಿ ‘ಮೋಹಿನಿ’ ಮತ್ತು ‘ಕುಂಭ’ ಎಂಬ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. 

‘ಹಲವು ವರ್ಷಗಳ ನಂತರ ಪ್ರಿಯಾಂಕ ಚೋಪ್ರಾ ಭಾರತೀಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಈ ಸಂಕೀರ್ಣ ಪಾತ್ರ ನೀಡುವ ಕುರಿತು ಮೊದಲು ಸ್ವಲ್ಪ ಗೊಂದಲವಿತ್ತು. ಆದರೆ ಈಗ ಅವರೇ ಈ ಪಾತ್ರಕ್ಕೆ ಸೂಕ್ತ ಎನ್ನಿಸಿದೆ’ ಎಂಬುದಾಗಿಯೂ ರಾಜಮೌಳಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.