ADVERTISEMENT

ಮಹಿರ ಹಾಡುಗಳ ಸಮಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 19:30 IST
Last Updated 14 ಫೆಬ್ರುವರಿ 2019, 19:30 IST
   

ಟೀಸರ್‌ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ ‘ಮಹಿರ’ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಕಲಾವಿದರ ಸಂಘದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

‘ಮಹಿರ ಸಿನಿಮಾ ಬಗ್ಗೆ ನನಗೂ ಕುತೂಹಲವಿದೆ’ ಎಂದ ದರ್ಶನ್‌, ‘ಲಂಡನ್‌ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಸ್ನೇಹಿತರಿಬ್ಬರು ಕನ್ನಡ ಚಿತ್ರೋದ್ಯಮಕ್ಕೆ ಬಂದು ಚಿತ್ರ ನಿರ್ಮಾಣ ಮಾಡಿರುವುದು ಸಂತೋಷ ತಂದಿದೆ. ‘ಮಹಿರ’ ಶೀರ್ಷಿಕೆಯ ಅರ್ಥವೇನೆಂದು ನನಗೆ ತಿಳಿದಿಲ್ಲ. ಆ ಬಗ್ಗೆ ಕೇಳಿದ್ದಕ್ಕೆ ‘ಅದು ಸಂಸ್ಕೃತ ಪದ’ ಎಂಬ ಉತ್ತರವನ್ನಷ್ಟೇ ಚಿತ್ರ ತಂಡದವರು ನೀಡಿದ್ದಾರೆ. ಚಿತ್ರದ ಟೀಸರ್‌ ನೋಡಿದಾಗ ಇದೊಂದು ಸಸ್ಪೆನ್ಸ್, ಥ್ರಿಲ್ಲರ್‌ ಎಂಬ ಭಾವನೆ ಮೂಡಿದೆ. ನಿರ್ಮಾಪಕರಿಗೆ ಯಶಸ್ಸು ಲಭಿಸಲಿ’ ಎಂದು ಶುಭ ಹಾರೈಸಿದರು.

‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರು ಕಾರ್ಯಕ್ರಮಕ್ಕೆ ಬಂದು, ಹಾಡುಗಳನ್ನು ಬಿಡುಗಡೆ ಮಾಡಿದ್ದರಿಂದ ನಿರ್ಮಾಪಕ ವಿವೇಕ್‍ ಕೋಡಪ್ಪ ಖುಷಿಯಾಗಿದ್ದರು.

ADVERTISEMENT

‘ಒಂದು ಮೊಟ್ಟೆಯ ಕತೆ’ ಖ್ಯಾತಿಯ ರಾಜ್‌ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ಇಂಟೆಲಿಜನ್ಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ಹೊಡೆದಾಟ– ಬಡಿದಾಟಗಳಿಲ್ಲದೆ, ತನ್ನ ಬುದ್ಧಿಶಕ್ತಿಯನ್ನು ಬಳಸಿಯೇ ಅಪರಾಧಿಯನ್ನು ಹಿಡಿಯುವ ಅಧಿಕಾರಿಯ ಪಾತ್ರ ನನ್ನದು’ ಎಂದರು.

ಮಹೇಶ್‌ ಗೌಡ ಈ ಚಿತ್ರದ ನಿರ್ದೇಶಕರು. ಈ ಸಿನಿಮಾ, ತಾಯಿ– ಮಗಳ ಸಂಬಂಧವನ್ನು ಕುರಿತದ್ದು. ಕತೆಯ ಸಣ್ಣ ಎಳೆಯೊಂದು ಈಗಾಗಲೇ ಬಹಿರಂಗಗೊಂಡಿದೆ. ತಾಯಿಯ ಪಾತ್ರದಲ್ಲಿ ವರ್ಜಿನಿಯಾ ರೋಡ್ರಿಗಸ್‌ ಹಾಗೂ ಮಗಳ ಪಾತ್ರದಲ್ಲಿ ಚೈತ್ರಾ ಆಚಾರ್‌ ನಟಿಸಿದ್ದಾರೆ.

‘ನಾನು ಪದವಿ ಅಧ್ಯಯನ ಮಾಡುತ್ತಿದ್ದೇನೆ. ಸಿನಿಮಾದಲ್ಲೂ ನನ್ನದು ಪದವಿ ಕಲಿಯುತ್ತಿರುವ ಯುವತಿಯ ಪಾತ್ರ. ಅಮ್ಮನೊಂದಿಗೆ ಸುಖವಾಗಿ ಜೀವನ ಮಾಡುತ್ತಿದ್ದ ಹುಡುಗಿಯು ಒಂದು ಹಂತದಲ್ಲಿ ತಾಯಿಯ ವಿಚಾರವಾಗಿ ಗಂಭೀರ ಆಗುತ್ತಾಳೆ. ಅದು ಯಾಕೆ, ಮುಂದೇನಾಗುತ್ತದೆ ಎಂಬುದನ್ನು ಚಿತ್ರಮಂದಿರಕ್ಕೆ ಬಂದು ನೋಡಿ’ ಎಂದು ಚೈತ್ರಾ ಆಚಾರ್ ಕತೆಯ ಗುಟ್ಟು ರಟ್ಟಾಗದಂತೆ ಮಾತನಾಡಿದರು. ನೀಲಿಮಾ ರಾವ್‌ ಹಾಗೂ ರಾಕೇಶ್‌ ಯು.ಪಿ. ಸಂಗೀತ ನೀಡಿದ್ದಾರೆ. ಇವರ ಜೊತೆಯಲ್ಲಿ ಗಾಯಕಿಯರಾದ ಪೂಜಾ, ನಿಖಿತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.