ADVERTISEMENT

Sandalwood: ರಾಮು ನಿರ್ದೇಶನದ ‘ಮೆಜೆಸ್ಟಿಕ್‌–2’ ಮಾರ್ಚ್‌ನಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
ಭರತ್‌ ಕುಮಾರ್‌, ಮಾಲಾಶ್ರೀ
ಭರತ್‌ ಕುಮಾರ್‌, ಮಾಲಾಶ್ರೀ   

ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಈ ಚಿತ್ರ ತೆರೆಕಂಡು 20 ವರ್ಷಗಳ ಬಳಿಕ ಆ ಮೆಜೆಸ್ಟಿಕ್‌ ಹೇಗಿದೆ ಎಂಬ ಕಥೆಯನ್ನು ಹೊಂದಿರುವ ‘ಮೆಜೆಸ್ಟಿಕ್‌–2’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಾಮು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಮಾರ್ಚ್‌ನಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಭರತ್‌ ಕುಮಾರ್‌ಗೆ ಸಂಹಿತಾ ವಿನ್ಯಾ ಜೋಡಿಯಾಗಿದ್ದಾರೆ. 

‘ಮೆಜೆಸ್ಟಿಕ್‌’ ಅತ್ಯಂತ ಪ್ರಭಾವಶಾಲಿ ಶೀರ್ಷಿಕೆ. ದರ್ಶನ್‌ ಅವರ ಮೊದಲ ಸಿನಿಮಾ. ಅದರ ಮುಂದುವರಿಕೆ ಕಥೆಯಲ್ಲಿ ನನಗೆ ಅವಕಾಶ ಸಿಕ್ಕಿರುವುದು ಖುಷಿಯ ವಿಷಯ. ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿರುವೆ. ಸಾಕಷ್ಟು ದಿನ ಮೆಜೆಸ್ಟಿಕ್‌ನಲ್ಲಿ ಸುತ್ತಾಡಿ, ಅಲ್ಲಿನ ಪ್ರಪಂಚವನ್ನು ಅರ್ಥ ಮಾಡಿಕೊಂಡು ಪಾತ್ರಕ್ಕೆ ಸಿದ್ಧನಾಗಿದ್ದೆ. ಸಾಕಷ್ಟು ಅಡತಡೆಗಳನ್ನು ದಾಟಿ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ದರ್ಶನ್‌ ಜೈಲಿನಲ್ಲಿ ಇಲ್ಲದಿದ್ದರೆ ಬಹುಶಃ ಇವತ್ತು ನಮ್ಮ ಜೊತೆಗಿದ್ದು ಬೆಂಬಲಿಸುತ್ತಿದ್ದರು. ಅವರ ಆಶೀರ್ವಾದ ನಮ್ಮ ಮೇಲಿದೆ’ ಎಂದರು ಭರತ್‌.

ಅಮ್ಮ ಎಂಟರ್‌ಪ್ರೈಸಸ್ ಮೂಲಕ ಹೆಚ್.ಆನಂದಪ್ಪ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ನಾಲ್ಕು ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೇನೆ. ಆದರೆ ಒಂದು ಸಿನಿಮಾ ಆ ಎಲ್ಲ ಸೋಲುಗಳಿಗಿಂತ ಹೆಚ್ಚು ಅನುಭವ ನೀಡಿದೆ. ಸಿನಿಮಾವನ್ನು ಈ ಹಂತಕ್ಕೆ ತರಲು ಸಾಕಷ್ಟು ಸಾಹಸಪಟ್ಟಿದ್ದೇವೆ. ಕಾರ್ಯಕ್ರಮಕ್ಕೆ ನಿರ್ದೇಶಕರು ಯಾಕೆ ಬಂದಿಲ್ಲ, ಚಿತ್ರಕ್ಕೆ ಏನೆಲ್ಲ ತೊಂದರೆಯಾಯಿತು ಎಂಬುದನ್ನು ಸಿನಿಮಾ ಬಿಡುಗಡೆ ಬಳಿಕ ಮಾತನಾಡುವೆ’ ಎಂದರು ನಿರ್ಮಾಪಕ.

ADVERTISEMENT

ಶ್ರುತಿ, ಮಾಲಾಶ್ರೀ, ಪೆಟ್ರೋಲ್‌ ಪ್ರಸನ್ನ, ಕೋಟೆ ಪ್ರಭಾಕರ್‌ ಮುಂತಾದವರು ಚಿತ್ರದಲ್ಲಿದ್ದಾರೆ. ವಿನು ಮನಸು ಸಂಗೀತ, ವೀನಸ್ ಮೂರ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.