ADVERTISEMENT

ಸಿದ್ಧವಾಗಿದೆ ‘ಮಜ್ಜಿಗೆ ಹುಳಿ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 14:32 IST
Last Updated 7 ಫೆಬ್ರುವರಿ 2019, 14:32 IST

ರವೀಂದ್ರ ಕೊಟಕಿ ನಿರ್ದೇಶನದ ‘ಮಜ್ಜಿಗೆ ಹುಳಿ’ ಸಿನಿಮಾದ ಆಡಿಯೊ ಹಾಗೂ ಟ್ರೇಲರ್‌ ಬಿಡುಗಡೆಯಾಗಿದೆ. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಹರಿ ಮ್ಯೂಸಿಕ್‌ ಸಂಸ್ಥೆಯ ವೇಲು ಅವರು ಆಡಿಯೊ ಬಿಡುಗಡೆ ಮಾಡಿದರು. ಅದೇ ಸಂದರ್ಭದಲ್ಲಿ ಚಿತ್ರದ ಕಲಾವಿದ ಸುಚೇಂದ್ರ ಪ್ರಸಾದ್‌ ಅವರು ಟ್ರೇಲರ್‌ ಬಿಡುಗಡೆ ಮಾಡಿದರು.

‘ಮಜ್ಜಿಗೆ ಹುಳಿ’ ಸಿನಿಮಾಕ್ಕೆ ‘ಒಳ್ಳೆ ಬಾಡೂಟ ಗುರು...’ ಎಂಬ ಅಡಿಬರಹವೂ ಇದೆ. ‘ಈ ಚಿತ್ರವು ಪ್ರೇಕ್ಷಕರಿಗೆ ಬಾಡೂಟದ ಖುಷಿಯನ್ನು ಕೊಡುತ್ತದೆ. ಒಂದು ಮುಷ್ಟಿಯಷ್ಟು ಕಥೆಗೆ, ಎರಡು ಬಟ್ಟಲು ಹಾಸ್ಯ, ಒಂದು ಬಟ್ಟಲು ಸೆಂಟಿಮೆಂಟ್‌, ರುಚಿಗೆ ತಕ್ಕಷ್ಟು ಇತರೆಲ್ಲ ಅಂಶಗಳನ್ನು ಸೇರಿಸಿ ಮಜ್ಜಿಗೆ ಹುಳಿ ತಯಾರಿಸಿದ್ದೇನೆ’ ಎಂದಿದ್ದಾರೆ ನಿರ್ದೇಶಕ ರವೀಂದ್ರ ಕೊಟಕಿ.

‘ಚಿತ್ರದಲ್ಲಿ ಒಟ್ಟು 28 ಪಾತ್ರಗಳಿವೆ. ಒಂದೇ ಕೊಠಡಿಯಲ್ಲಿ ಇಡೀ ಸಿನಿಮಾದ ಚಿತ್ರೀಕರಣ ನಡೆದಿದೆ. ಎಲ್ಲ ಪಾತ್ರಗಳೂ ಈ ಕೊಠಡಿಗೆ ಬಂದು ಹೋಗುತ್ತವೆ. ನವ ವಿವಾಹಿತ ಜೋಡಿಯೊಂದರ ಮೊದಲ ರಾತ್ರಿಯಂದು ನಡೆಯುವ ಅನೇಕ ಘಟನೆಗಳನ್ನು ಹಾಸ್ಯ ಮಿಶ್ರಿತವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದಿದ್ದಾರೆ ಕೊಟಕಿ.

ADVERTISEMENT

ಚಿತ್ರದಲ್ಲಿ ಐದು ಹಾಡುಗಳಿವೆ. ಹಾಡುಗಳನ್ನು ರವೀಂದ್ರ ಕೊಟಕಿ ಅವರೇ ಬರೆದಿದ್ದಾರೆ. ಎಂ. ಸಂಜೀವ ರಾವ್‌ ಸಂಗೀತ ನೀಡಿದ್ದಾರೆ. ‘ಚಿತ್ರಾನ್ನ’ ಎಂಬ ಒಂದು ಹಾಡನ್ನು ಗುರುಕಿರಣ್‌ ಹಾಡಿದ್ದಾರೆ. ದೀಪ್ತಿ ಪ್ರಶಾಂತ್‌ ಎಂಬ ಗಾಯಕಿ ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ.

‘ಕೊಳ್ಳೇಗಾಲ’ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದ ದೀಕ್ಷಿತ್‌ ವೆಂಕಟೇಶ್ ಈ ಚಿತ್ರದ ನಾಯಕ. ರೂಪಿಕಾ ನವ ವಧುವಿನ ಪಾತ್ರದಲ್ಲಿ ಕಾಣಿಸಿದ್ದಾರೆ. ಸಣ್ಣ ಪಾತ್ರವೊಂದರಲ್ಲಿ ಮಾನಸ ಗೌಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಮೇಶ್‌ ಭಟ್‌, ಸುಚೇಂದ್ರ ಪ್ರಸಾದ್‌, ಶಂಕರ ನಾರಾಯಣ, ಕುರಿ ಸುನಿಲ್‌, ಮಿಮಿಕ್ರಿ ದಯಾನಂದ್‌ ಮುಂತಾದವರನ್ನೊಳಗೊಂಡ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ನರಸಿಂಹಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರ ಈಗ ಸೆನ್ಸಾರ್‌ ಹಂತದಲ್ಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.