ADVERTISEMENT

ಕೋವಿಡ್‌ನಿಂದ ಚೇತರಿಕೆ ಸುಲಭವಾಗಿರಲಿಲ್ಲ: ಅನುಭವ ಬಿಚ್ಚಿಟ್ಟ ನಟಿ ಮಲೈಕಾ ಅರೋರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮೇ 2021, 12:56 IST
Last Updated 31 ಮೇ 2021, 12:56 IST
ಮಲೈಕಾ ಅರೊರಾ: ಮಲೈಕಾ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರದ ಸ್ಕ್ರೀನ್ ಗ್ರ್ಯಾಬ್
ಮಲೈಕಾ ಅರೊರಾ: ಮಲೈಕಾ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರದ ಸ್ಕ್ರೀನ್ ಗ್ರ್ಯಾಬ್   

ಮುಂಬೈ: ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಆರೋಗ್ಯ ಸುಧಾರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ಆಗಾಗ್ಗೆ ಬರುವ ವೈದ್ಯರು ಮತ್ತು ನುರಿತ ತಜ್ಞರ ಅಭಿಪ್ರಾಯಗಳನ್ನು ಕೇಳಿದ್ದೇವೆ. ಇದೀಗ, ನಟಿ ಮಲೈಕಾ ಅರೋರಾ ಅವರು ಕೋವಿಡ್‌ನಿಂದ ಚೇತರಿಸಿಕೊಂಡ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

ಬಾಲಿವುಡ್‌ನಲ್ಲಿ ಫಿಟ್ನೆಸ್ ಮೂಲಕವೇ ಹೆಸರುವಾಸಿಯಾಗಿರುವ ಮಲೈಕಾ ಅವರು ಸುಲಭವಾಗಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಜನರ ಊಹೆಗಳಿಗೆ ‘ಅದು ಸುಲಭವಾಗಿರಲಿಲ್ಲ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರಿಸಿದ್ದಾರೆ.

‘ಸುಲಭವಾ !? ಖಂಡಿತಾ ಆಗಿರಲಿಲ್ಲ. ಸೆಪ್ಟೆಂಬರ್ 5 ರಂದು ನನಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಅನುಭವ ನಿಜಕ್ಕೂ ಕೆಟ್ಟದ್ದಾಗಿತ್ತು. ಯಾರಾದರೂ ಕೋವಿಡ್‌ನಿಂದ ಚೇತರಿಕೆ ಸುಲಭ ಎಂದು ಭಾವಿಸಿದ್ದರೆ ಅವರಿಗೆ ದೈವದತ್ತವಾದ ರೋಗನಿರೋಧಕ ಶಕ್ತಿ ಇರಬೇಕು ಅಥವಾ ಕೋವಿಡ್ ಸೋಂಕಿನಿಂದ ತತ್ತರಿಸಿದ ಅನುಭವ ಇದ್ದಂತಿರುವುದಿಲ್ಲ. ‘ಸುಲಭ’ ಇದು ನಾನು ಬಳಸಬೇಕಾದ ಪದವಲ್ಲ. ಏಕೆಂದರೆ, ಕೋವಿಡ್ ದೈಹಿಕವಾಗಿ ನನ್ನನ್ನು ಸಂಪೂರ್ಣವಾಗಿ ಕುಂದಿಸಿತು. ಎದ್ದು 2 ಹೆಜ್ಜೆ ನಡೆಯುವುದು ಕಠಿಣವಾಗಿತ್ತು. ಕೂರುವುದು, ಹಾಸಿಗೆಯಿಂದ ಎದ್ದು ಕಿಟಕಿ ಬಳಿ ಹೋಗಿ ನಿಲ್ಲುವುದು ನನ್ನ ನಿತ್ಯದ ಪ್ರಯಾಣವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

‘ಸೋಂಕು ತಗುಲಿದ ಮೂರು ವಾರಗಳ ಬಳಿಕ ನನಗೆ ಕೋವಿಡ್ ನೆಗೆಟಿವ್ ಬಂದಿತು. ಆ ನಂತರವೂ ನಾನು ದುರ್ಬಲಳಾಗಿದ್ದೆ. ಈ ಹಿಂದಿನಂತೆ ವರ್ಕೌಟ್ ಮಾಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ. ವ್ಯಾಯಾಮ ಮಾಡುವುದು ಮಲೈಕಾಗೆ ನಿಜಕ್ಕೂ ತುಂಬಾ ಕಷ್ಟವಾಗಿತ್ತು. ‘ನನ್ನ ಮನಸ್ಸಿಗೆ ತಕ್ಕಂತೆ ನನ್ನ ದೇಹ ಬೆಂಬಲಿಸುತ್ತಿಲ್ಲ ಎಂದು ನಿರಾಶಳಾಗಿದ್ದೆ. ನನ್ನ ಶಕ್ತಿಯನ್ನು ನಾನು ಮರಳಿ ಪಡೆಯುವುದಿಲ್ಲವೇನೋ ಎಂದು ಗಾಬರಿಗೊಂಡಿದ್ದೆ. 24 ಗಂಟೆಗಳಲ್ಲಿ ಒಂದು ಚಟುವಟಿಕೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನನ್ನ ಮೊದಲ ದಿನದ ವರ್ಕೌಟ್ ತುಂಬಾ ಕೆಟ್ಟದಾಗಿತ್ತು. ಆದರೆ, 2 ನೇ ದಿನ ಸುಧಾರಿಸಿತು. 3, 4 ಮತ್ತು 5ನೇ ದಿನ.. ಹೀಗೆ ಕ್ರಮೇಣ ಸುಧಾರಿಸಿದೆ’ಎಂದು ಹೇಳಿದ್ದಾರೆ.

ADVERTISEMENT

ಮಲೈಕಾ ಕೊರೊನಾದಿಂದ ಚೇತರಿಸಿಕೊಂಡು 8 ತಿಂಗಳು ಕಳೆದಿದೆ. ಇದೀಗ, ಅವರು ತಮ್ಮ ಫಿಟ್ನೆಸ್ ಲಯ ಕಂಡುಕೊಂಡಿದ್ದಾರೆ. ಮೊದಲಿನಂತೆ ವರ್ಕೌಟ್ ಮಾಡುತ್ತಿದ್ದಾರೆ. ಕೋವಿಡ್‌ ಸೋಂಕು ತಗುಲುವುದಕ್ಕೂ ಮುನ್ನ ಮಾಡುತ್ತಿದ್ದಂತೆ ವರ್ಕೌಟ್ ನಡೆಸುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.