ಬೆಂಗಳೂರು: ಚಂದನವನದಲ್ಲಿ ‘ಕೋಟಿ ರಾಮು’ ಎಂದು ಖ್ಯಾತವಾಗಿದ್ದ ನಿರ್ಮಾಪಕ ರಾಮು ಅವರು ಕೊರೊನಾ ಸೋಂಕಿಗೆ ಒಳಗಾಗಿ ಕಳೆದ ಏಪ್ರಿಲ್ 26ರಂದು ಮೃತಪಟ್ಟಿದ್ದರು. ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಟಿ ಮಾಲಾಶ್ರೀ ಇದೀಗ ತಮ್ಮ ಮನದಾಳದ ಮಾತುಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಹಂಚಿಕೊಂಡಿದ್ದಾರೆ.
‘ಕಳೆದ 12 ದಿನ ಅತ್ಯಂತ ನೋವಿನ ದಿನಗಳಾಗಿತ್ತು. ಎಲ್ಲವೂ ಅಸ್ಪಷ್ಟವಾಗಿತ್ತು. ನನ್ನ ಪ್ರೀತಿಯ ಗಂಡ ರಾಮು ಅವರ ನಿಧನದಿಂದ ಇಡೀ ಕುಟುಂಬವೇ ದಿಗ್ಭ್ರಮೆಗೊಂಡಿತ್ತು. ಅವರು ನಮ್ಮ ಬೆನ್ನೆಲುಬಾಗಿದ್ದರು, ಮುಂದೆಯೂ ಬೆನ್ನೆಲುಬಾಗಿರಲಿದ್ದು, ದಾರಿ ತೋರಿಸುವ ಬೆಳಕಾಗಿರಲಿದ್ದಾರೆ. ರಾಮು ಅವರು ಅಗಲಿದ ಸಂದರ್ಭದಲ್ಲಿ ಇಡೀ ಚಿತ್ರರಂಗ ತೋರಿಸಿದ ಪ್ರೀತಿ ಹಾಗೂ ಬೆಂಬಲಕ್ಕೆ ನಾವು ಚಿರಋಣಿ.ಈ ಸಂಕಷ್ಟದ ಸಮಯದಲ್ಲಿ ಕಾಳಜಿ ತೋರಿದ, ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ ಮಾಧ್ಯಮದ ಸಿಬ್ಬಂದಿ, ಕಲಾವಿದರು, ನಿರ್ಮಾಪಕರು, ತಾಂತ್ರಿಕ ಸಿಬ್ಬಂದಿ ಹಾಗೂ ರಾಮು ಅವರ ಅಭಿಮಾನಿಗಳಿಗೆ ಧನ್ಯವಾದ’ ಎಂದು ಟ್ವೀಟ್‌ನಲ್ಲಿ ಪತ್ರವೊಂದನ್ನು ರಾಮು ಅವರ ಚಿತ್ರದ ಜೊತೆಗೆ ಮಾಲಾಶ್ರೀ ಅಪ್‌ಲೋಡ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.