ADVERTISEMENT

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

ಪಿಟಿಐ
Published 8 ಡಿಸೆಂಬರ್ 2025, 6:21 IST
Last Updated 8 ಡಿಸೆಂಬರ್ 2025, 6:21 IST
<div class="paragraphs"><p>ನಟ ದಿಲೀಪ್‌</p></div>

ನಟ ದಿಲೀಪ್‌

   

ಕೊಚ್ಚಿ: ದಕ್ಷಿಣ ಭಾರತದ ನಟಿಯೊಬ್ಬರ ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್‌ ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್‌ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

ಪ್ರಮುಖ ಆರೋಪಿ ಸುನಿಲ್‌ ಎನ್‌.ಎಸ್‌. ಅಲಿಯಾಸ್ ಪಲ್ಸರ್‌ ಸುನಿ ಹಾಗೂ ಮಾರ್ಟಿನ್‌ ಆಂಟನಿ, ಮಣಿಕಂಠನ್‌ ಬಿ, ವಿಜೇಶ್‌ ವಿ.ಪಿ, ಸಲೀಂ ಎಚ್. ಮತ್ತು ಪ್ರದೀಪ್ ತಪ್ಪಿತಸ್ಥರೆಂದು ಘೋಷಿಸಿದೆ. ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಡಿ.12ರಂದು ಪ್ರಕಟಿಸುವ ನಿರೀಕ್ಷೆಯಿದೆ.

ADVERTISEMENT

ನವೆಂಬರ್ 25ರಂದು ಸುದೀರ್ಘ ವಿಚಾರಣೆ ನಡೆಸಿದ್ದ ಎರ್ನಾಕುಲಂ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಹನಿ ಎಂ. ವರ್ಗೀಸ್‌ ಅವರು ಈ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ದಿಲೀಪ್‌ ಜೊತೆಗೆ ಇತರ ಮೂವರನ್ನು ಖುಲಾಸೆಗೊಳಿಸಲಾಗಿದೆ.

ಪ್ರಕರಣದಲ್ಲಿ ದಿಲೀಪ್‌ ಅವರ ಪಾತ್ರವನ್ನು ಸಾಬೀತುಪಡಿಸಲು ಯಾವುದೇ ನೇರ ಸಾಕ್ಷ್ಯಗಳಿಲ್ಲ. ಪ್ರಮುಖ ಆರೋಪಿ ಸುನಿಲ್ ಜೊತೆಗೆ ದಿಲೀಪ್ ಇರುವ ಛಾಯಾಚಿತ್ರಗಳು, ಮೊಬೈಲ್‌ ಫೋನ್‌ ಕರೆಗಳ ವಿವರ ಮತ್ತು ನಗದು ವಹಿವಾಟು ಮಾಹಿತಿಯನ್ನಷ್ಟೇ ಪ್ರಾಸಿಕ್ಯೂಷನ್ ನೀಡಿದೆ.

ಪ್ರಾಸಿಕ್ಯೂಷನ್‌ ಪ್ರಕಾರ, 2017ರ ಫೆಬ್ರುವರಿ 17ರಂದು ರಾತ್ರಿ ನಟಿಯನ್ನು ಅಪಹರಿಸಿದ್ದ ಸುನಿಲ್ ನೇತೃತ್ವದ ತಂಡ ಚಲಿಸುವ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿತ್ತು. ಮರುದಿನ ನಟಿ ದೂರು ದಾಖಲಿಸಿದ್ದರು. ಪೊಲೀಸರು ವಾರದೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿದ್ದರು. ಏಪ್ರಿಲ್‌ನಲ್ಲಿ ಏಳು ಮಂದಿ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಮುಖ ಆರೋಪಿ ಸುನಿಲ್ ಜೈಲಿನಲ್ಲಿ ಇದ್ದುಕೊಂಡೇ ದಿಲೀಪ್‌ಗೆ ಪತ್ರ ಕಳುಹಿಸಿದ್ದನ್ನು ತನಿಖಾ ತಂಡವು ಪತ್ತೆ ಮಾಡಿತ್ತು. 2017ರ ಜುಲೈ 10ರಂದು ದಿಲೀಪ್‌ ಅವರನ್ನು ಬಂಧಿಸಿತ್ತು. ಅ.3ರಂದು ಅವರಿಗೆ ಜಾಮೀನು ಸಿಕ್ಕಿತ್ತು.

ನವೆಂಬರ್‌ನಲ್ಲಿ ಪೊಲೀಸರು ದಿಲೀಪ್‌ ಸೇರಿದಂತೆ ಇನ್ನೂ ಏಳು ಜನರ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಐವರನ್ನು ನಂತರ ಬಿಡುಗಡೆ ಮಾಡಲಾಗಿತ್ತು.

‘ನಟಿ ಕಾವ್ಯಾ ಮಾಧವನ್‌ ಜೊತೆಗಿನ ಸಂಬಂಧದ ಬಗ್ಗೆ ದಿಲೀಪ್‌ ಅವರ ಮೊದಲ ಪತ್ನಿ ನಟಿ ಮಂಜು ವಾರಿಯರ್‌ ಅವರಿಗೆ ದೂರುದಾರರಾಗಿದ್ದ ಸಂತ್ರಸ್ತೆ ತಿಳಿಸಿದ್ದರು. ಇದೇ ಕಾರಣಕ್ಕೆ ದೂರುದಾರರ ಮೇಲೆ ಹಲ್ಲೆ ಮಾಡಲು ದಿಲೀಪ್‌ ಕೆಲವರನ್ನು ನೇಮಿಸಿಕೊಂಡಿದ್ದರು’ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿತ್ತು.

ದಿಲೀಪ್ ಮತ್ತು ಮಂಜು ವಾರಿಯರ್‌ ವಿಚ್ಛೇದನ ಪಡೆದಿದ್ದರು. ಬಳಿಕ, ಕಾವ್ಯಾ ಅವರನ್ನು ದಿಲೀಪ್‌ ಮದುವೆಯಾಗಿದ್ದರು. ಕಾವ್ಯಾ ಸಹ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು.

ಈ ಪ್ರಕರಣದಂತೆಯೇ, ವಿಚಾರಣೆಯೂ ಅನೇಕ ತಿರುವುಗಳಿಗೆ ಸಾಕ್ಷಿಯಾಗಿತ್ತು. 2019ರಲ್ಲಿ ದಿಲೀಪ್‌ ಅವರು ಸಿಬಿಐ ತನಿಖೆ ಕೋರಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು. ಆರು ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ 2019ರಲ್ಲಿ ನಿರ್ದೇಶಿಸಿತ್ತು.

ಮೇಲ್ಮನವಿ ಸಲ್ಲಿಸಲು ಕೇರಳ ಸರ್ಕಾರ ನಿರ್ಧಾರ

ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕೇರಳ ಸರ್ಕಾರ ಸೋಮವಾರ ತಿಳಿಸಿದೆ. ‘ಈ ತೀರ್ಪಿನಿಂದ ಸಂತ್ರಸ್ತೆಗೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ನಾನು ಮುಖ್ಯಮಂತ್ರಿ ಮತ್ತು ಡಿಜಿಪಿ ಅವರೊಂದಿಗೆ ಮಾತನಾಡಿದ್ದೇನೆ. ಮುಂದಿನ ಕ್ರಮ ಕೈಗೊಳ್ಳಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಲಾಗಿದೆ’ ಎಂದು ರಾಜ್ಯ ಕಾನೂನು ಸಚಿವ ಪಿ.ರಾಜೀವ್‌ ಹೇಳಿದ್ದಾರೆ. ‘ರಾಜ್ಯ ಸರ್ಕಾರವು ಯಾವಾಗಲೂ ಸಂತ್ರಸ್ತರ ಪರವಾಗಿ ನಿಂತಿದೆ ಮತ್ತು ಅದು ಮುಂದುವರಿಯುತ್ತದೆ’ ಎಂದಿದ್ದಾರೆ.

ಪ್ರಕರಣದಲ್ಲಿ ಸಿಲುಕಿಸಲು ಪಿತೂರಿ: ದಿಲೀಪ್‌

‘ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಹಾಗೂ ವೃತ್ತಿ ಜೀವನವನ್ನು ನಾಶ ಮಾಡಲು ಕೆಲ ಪೊಲೀಸ್‌ ಅಧಿಕಾರಿಗಳು ಮತ್ತು ಮಾಧ್ಯಮ ಕ್ಷೇತ್ರದ ಕೆಲವರು ಪಿತೂರಿ ನಡೆಸುತ್ತಿದ್ದಾರೆ’ ಎಂದು ನಟ ದಿಲೀಪ್‌ ಸೋಮವಾರ ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಖುಲಾಸೆಗೊಂಡ ಸ್ವಲ್ಪ ಸಮಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರಕರಣದ ಪ್ರಮುಖ ಆರೋಪಿ ಮತ್ತು ಜೈಲಿನಲ್ಲಿರುವ ಅವರ ಸಹ ಕೈದಿಯ ಬೆಂಬಲದೊಂದಿಗೆ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ನನ್ನ ವಿರುದ್ಧ ಸುಳ್ಳು ಕಥೆಯನ್ನು ಎಣೆದಿದ್ದರು. ಆ ಅಧಿಕಾರಿ ಸೇರಿದಂತೆ ಮಾಧ್ಯಮದವರು ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿದ್ದರು’ ಎಂದು ಆರೋಪಿಸಿದ್ದಾರೆ.

‘ಪೊಲೀಸರು ಹೆಣೆದ ಸುಳ್ಳು ಕಥೆಗೆ ನ್ಯಾಯಾಲಯ ಕಿವಿಗೊಟ್ಟಿಲ್ಲ. ನನ್ನ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕೂಲಂಕಷ ತನಿಖೆ ನಡೆಸಬೇಕು. ಸಮಾಜದಲ್ಲಿ ನನಗಿರುವ ಘನತೆ ಮತ್ತು ವೃತ್ತಿ ಜೀವನವನ್ನು ಹಾಳು ಮಾಡಲು ಕ್ರಿಮಿನಲ್‌ ಪಿತೂರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ತನ್ನ ಮೊದಲ ಪತ್ನಿ ನಟಿ ಮಂಜು ವಾರಿಯರ್‌ ಅವರನ್ನು ಟೀಕಿಸಿದ ದಿಲೀಪ್‌ ‘ಸಂತ್ರಸ್ತೆ ಮೇಲಿನ ಹಲ್ಲೆಯ ಹಿಂದೆ ಕ್ರಿಮಿನಲ್‌ ಪಿತೂರಿ ಇದ್ದು ಅದನ್ನು ತನಿಖೆ ಮಾಡಬೇಕು ಎಂಬ ಅವರ ಹೇಳಿಕೆಯೊಂದಿಗೆ ತಮ್ಮ ವಿರುದ್ಧದ ಪಿತೂರಿ ಪ್ರಾರಂಭವಾಗಿತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.