ADVERTISEMENT

'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ನಿರ್ದೇಶಕ ಸಚ್ಚಿದಾನಂದನ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2020, 3:12 IST
Last Updated 19 ಜೂನ್ 2020, 3:12 IST
ಸಚ್ಚಿದಾನಂದನ್ - ಚಿತ್ರ ಕೃಪೆ  (ಟ್ವಿಟರ್ @ /raveena116)
ಸಚ್ಚಿದಾನಂದನ್ - ಚಿತ್ರ ಕೃಪೆ (ಟ್ವಿಟರ್ @ /raveena116)   

ತ್ರಿಶ್ಶೂರ್: 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ನಿರ್ದೇಶಕ ಕೆ.ಆರ್ ಸಚ್ಚಿದಾನಂದನ್ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ 'ಸಚ್ಚೀ' ಎಂದೇ ಖ್ಯಾತರಾಗಿರುವ ಸಚ್ಚಿದಾನಂದನ್ ಅವರಿಗೆ 48 ವರ್ಷ ವಯಸ್ಸಾಗಿತ್ತು. ಜೂನ್ 16ರಂದು ಹೃದಯ ಸ್ತಂಭನಕ್ಕೊಳಗಾಗಿದ್ದ ಅವರನ್ನು ತ್ರಿಶ್ಶೂರಿನ ಜುಬಲಿ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.

ಮಲಯಾಳಂ ಸಿನಿಮಾ ರಂಗದಲ್ಲಿನಮತ್ತೊಬ್ಬ ಬರಹಗಾರ ಸೇತು ಮತ್ತು ಇವರು ಜಂಟಿಯಾಗಿ ಚಿತ್ರಕಥೆ ಬರೆದಿದ್ದು ಈಜೋಡಿಸಚ್ಚಿ-ಸೇತು ಜೋಡಿ ಎಂದೇ ಖ್ಯಾತರಾಗಿದ್ದರು. 2007ರಲ್ಲಿ ತೆರೆಕಂಡ ಚಾಕಲೇಟ್, ಮೇಕಪ್ ಮ್ಯಾಮ್, ರಾಬಿನ್ ಹುಡ್, ಸೀನಿಯರ್ಸ್ ಸಿನಿಮಾ ಹಿಟ್ ಆಗಿತ್ತು. 2011ರಲ್ಲಿ ತೆರೆಕಂಡ ಡಬಲ್ಸ್ ಅಷ್ಟೇನೂ ಸುದ್ದಿ ಮಾಡಲಿಲ್ಲ. ಈ ಸಿನಿಮಾದೊಂದಿಗೆ ಸಚ್ಚಿ-ಸೇತು ಜೋಡಿ ಬೇರೆಯಾದರು.

ADVERTISEMENT

ಮೋಹನ್ ಲಾಲ್ ನಟನೆಯ ರನ್ ಬೇಬಿ ರನ್, ಶೆರ್ಲಾಕ್ ಟೋಮ್ಸ್, ಡ್ರೈವಿಂಗ್ ಲೈಸನ್ಸ್ ಮೊದಲಾದ ಜನಪ್ರಿಯ ಚಿತ್ರಗಳ ಚಿತ್ರಕಥೆ ಸಚ್ಚಿ ಅವರದ್ದಾಗಿತ್ತು.

ಪೃಥ್ವಿರಾಜ್ ನಾಯಕನಾಗಿದ್ದ ಅನಾರ್ಕಲಿ (2015) ಸಚ್ಚಿ ನಿರ್ದೇಶಿಸಿದ ಮೊದಲ ಸಿನಿಮಾ. ಇದು ಬಾಕ್ಸ್ ಆಫೀಸಲ್ಲಿ ಹಿಟ್ ಆಗಿತ್ತು. ಆನಂತರ ನಿರ್ದೇಶನದಿಂದ ದೂರವಿದ್ದ ಅವರುಈ ವರ್ಷ ತೆರೆಕಂಡ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ಮೂಲಕ ನಿರ್ದೇಶನಕ್ಕೆ ವಾಪಸ್ಬಂದರು.ಪೃಥ್ವಿರಾಜ್ ಮತ್ತು ಬಿಜು ಮೆನನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಜನಮನ ಗೆದ್ದ ಈ ಸಿನಿಮಾದ ಹಿಂದಿ ರಿಮೇಕ್‌ ಕೆಲಸ ನಡೆದು ಬರುತ್ತಿದೆ.

ತ್ರಿಶ್ಶೂರ್ ಜಿಲ್ಲೆಯ ಕೊಡಂಗಲ್ಲೂರ್ ನಿವಾಸಿಯಾದ ಸಚ್ಚಿ ಕಾಮರ್ಸ್‌ನಲ್ಲಿ ಪದವಿ ಮತ್ತು ಎರ್ನಾಕುಳಂ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು 8 ವರ್ಷಗಳ ಕಾಲ ಕೇರಳ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು.ರವಿಪುರಂ ಸ್ಮಶಾನದಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.