ADVERTISEMENT

25 ವರ್ಷಗಳ ಹಿಂದೆ ಮೋಹನ್ ಲಾಲ್ ನಟಿಸಿದ್ದ ಚಿತ್ರ 'ಸ್ಪಡಿಕಂ' ಮರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 7:34 IST
Last Updated 31 ಮಾರ್ಚ್ 2020, 7:34 IST
   

ಮಲಯಾಳದ 'ಸ್ಪಡಿಕಂ' ಚಿತ್ರ(ಕನ್ನಡದಲ್ಲಿ ಸ್ಪಟಿಕಂ) ಭಾರತೀಯ ಕ್ಲಾಸಿಕ್ ಸಿನಿಮಾಗಳ ಪೈಕಿ ಒಂದಾಗಿದೆ. ಮೋಹನ್ ಲಾಲ್ ನಟನೆಯ ಈ ಸಿನಿಮಾ ತೆರೆಕಂಡು ಇಪ್ಪತ್ತೈದು ವರ್ಷಗಳು ಉರುಳಿವೆ. ಇದು ಅತ್ಯುತ್ತಮ ಮನರಂಜನಾತ್ಮಕ ಕಮರ್ಷಿಯಲ್ ಸಿನಿಮಾವಾಗಿದ್ದು, ಇಂದಿಗೂ ಜನಮಾನಸದಲ್ಲಿ ಉಳಿದಿದೆ.

ಅಂದಿನ ಕಾಲಕ್ಕೆ ಬಾಕ್ಸ್ ಆಫೀಸ್ ನಲ್ಲಿ ₹ 5 ಕೋಟಿ ಗಳಿಕೆ‌ ಕಂಡಿದ್ದು ಇದರ ಹೆಗ್ಗಳಿಕೆ. ಈ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಮೋಹಲ್ ಲಾಲ್ ಅವರು ಕೇರಳ ರಾಜ್ಯ ಸರ್ಕಾರ‌ ಕೊಡಮಾಡುವ 'ಅತ್ಯುತ್ತಮ ನಟ ಪ್ರಶಸ್ತಿ'ಗೆ ಭಾಜನರಾಗಿದ್ದರು. ಜೊತೆಗೆ, 1995ನೇ ಸಾಲಿನ ಫಿಲ್ಮ್‌ಫೇರ್ ಪ್ರಶಸ್ತಿ ‌ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ, ನಟ, ನಿರ್ದೇಶಕ ‌ಪ್ರಶಸ್ತಿಯನ್ನೂ ಈ ಚಿತ್ರ ಬಾಚಿಕೊಂಡಿತ್ತು.
ಈ ಸಿನಿಮಾ ಕನ್ನಡದಲ್ಲಿ 'ಮಿಸ್ಟರ್ ತೀರ್ಥ' ಹೆಸರಿನಲ್ಲಿ ರಿಮೇಕ್ ಆಗಿತ್ತು. ಸಾಧುಕೋಕಿಲ ಆ್ಯಕ್ಷನ್ ಕಟ್ ಹೇಳಿದ್ದ ಇದರಲ್ಲಿ ಸುದೀಪ್ ‌ನಾಯಕ‌ ನಟರಾಗಿ ನಟಿಸಿದ್ದರು. ಅಲ್ಲದೇ, ತಮಿಳು ಮತ್ತು ತೆಲುಗಿಗೂ‌ ರಿಮೇಕ್ ಆಗಿತ್ತು. ತಂದೆ ಮತ್ತು ಬೇಜವಾಬ್ದಾರಿ ಪುತ್ರನ ನಡುವಿನ ಭಾವನಾತ್ಮಕ ಕಥೆಯೇ ಇದರ ಹೂರಣ.

'ಸ್ಪಡಿಕಂ' ಚಿತ್ರ ನಿರ್ದೇಶಿಸಿದ್ದು ಭದ್ರನ್. ಈ ಸಿನಿಮಾದ ಕಥೆ ಹೆಣೆದಿದ್ದು ಅವರೇ. ಎಂ.ಪಿ. ವೆಂಕಟೇಶ್ ಸಂಗೀತ‌ ಸಂಯೋಜಿಸಿದ್ದ ಇದಕ್ಕೆ ಜೆ. ವಿಲಿಯಮ್ಸ್ ಮತ್ತು ಎಸ್. ಕುಮಾರ್ ಅವರ ಕ್ಯಾಮೆರಾ ಕೈಚಳಕವಿತ್ತು. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಎಂ.‌ಮೋಹನ್.
ಈಗಾಗಲೇ, ಮಾಲಿವುಡ್ ನ ಈ ಸಿನಿಮಾ ಟಿ.ವಿ.ಗಳಲ್ಲಿ ಹಲವು ಬಾರಿ ಪ್ರಸಾರವಾಗಿದೆ. ಅಂತರ್ಜಾಲ ತಾಣದಲ್ಲೂ ಲಭ್ಯವಿದೆ‌. ಆದರೆ, ದೊಡ್ಡ ಪರದೆ ಮೇಲೆ ಇಂದಿನ ಯುವಜನರು ಈ ಸಿನಿಮಾ ನೋಡಿಲ್ಲ‌ ಎನ್ನುವುದು ನಿರ್ಮಾಪಕರ‌ ಅಂಬೋಣ. ಹಾಗಾಗಿ, ಸಿನಿಮಾದ ಮರು ಬಿಡುಗಡೆಗೆ ಅವರು‌ ನಿರ್ಧರಿಸಿದ್ದಾರೆ. ಇದು ಮೋಹನ್ ಲಾಲ್ ಅವರ ಅಭಿಮಾನಿಗಳಲ್ಲಿ ಖುಷಿಯ ಅಲೆಯನ್ನು ಉಕ್ಕಿಸಿದೆ. ಇದರ ಭಾಗವಾಗಿಯೇ ಮೋಹನ್ ಲಾಲ್ ಅವರ ಫಸ್ಟ್ ಲುಕ್ ಅನ್ನೂ ಬಿಡುಗಡೆ ಮಾಡಲಾಗಿದೆ.

ADVERTISEMENT

ಸಿನಿಮಾದ ಮರು ಬಿಡುಗಡೆ ಬಗ್ಗೆ ನಿರ್ದೇಶಕ ಭದ್ರನ್‌‌‌ ಹೇಳುವುದು‌ ಹೀಗೆ: 'ಯುವಜನರು ಈಗಾಗಲೇ ಟಿ.ವಿ.ಯಲ್ಲಿ ಸಾಕಷ್ಟು ಬಾರಿ ಈ ಸಿನಿಮಾ ನೋಡಿರಬಹುದು. ಆದರೆ, ದೊಡ್ಡ ಪರದೆಯಲ್ಲಿ ವೀಕ್ಷಿಸುವಾಗ ಸಿಗುವ ಅನುಭವವೇ ಬೇರೆ' ಎನ್ನುತ್ತಾರೆ.

4ಕೆ ಡೂಬ್ಲಿ ಆಟಮ್ಸ್ ಸೌಂಡ್‌ ತಂತ್ರಜ್ಞಾನ ಬಳಸಿ ಸಿನಿಮಾದ ಧ್ವನಿ ಮತ್ತು ವಿಡಿಯೊದ ಗುಣಮಟ್ಟವನ್ನು ವೃದ್ಧಿಸಲಾಗಿದೆ. ಇದಕ್ಕಾಗಿ ‌₹ 2 ಕೋಟಿ ವೆಚ್ಚ‌ ಮಾಡಲಾಗಿದೆಯಂತೆ.

ಮೇ 21ರಂದು‌ ಮೋಹನ್ ಲಾಲ್ ಅವರ 60ನೇ ಜನ್ಮದಿನ. ಅಂದೇ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.