ADVERTISEMENT

ಇತಿಹಾಸದ ಬೆನ್ನು ಹತ್ತಿದ ಮಾಲಿವುಡ್

ನವೀನ ಕುಮಾರ್ ಜಿ.
Published 14 ಮಾರ್ಚ್ 2019, 20:02 IST
Last Updated 14 ಮಾರ್ಚ್ 2019, 20:02 IST
‘ಮರಕ್ಕಾರ್: ಅರಬಿ ಕಡಲಿಂಡೆ ಸಿಂಹಂ’ ಚಿತ್ರದಲ್ಲಿ ಮೋಹನ್ ಲಾಲ್ ಅವರ ಫಸ್ಟ್‌ಲುಕ್‌
‘ಮರಕ್ಕಾರ್: ಅರಬಿ ಕಡಲಿಂಡೆ ಸಿಂಹಂ’ ಚಿತ್ರದಲ್ಲಿ ಮೋಹನ್ ಲಾಲ್ ಅವರ ಫಸ್ಟ್‌ಲುಕ್‌   

ಐತಿಹಾಸ ಪುರುಷರ ಜೀವನಕಥೆ ಆಧರಿತ ಸಿನಿಮಾಗಳು ಮಲಯಾಳದಲ್ಲಿ ಸಾಕಷ್ಟು ನಿರ್ಮಾಣವಾಗಿವೆ. ಅಧಿಕ ಬಜೆಟ್‌ ಮತ್ತು ಬಹುತಾರಾಗಣದ ಇಂತಹ ಚಿತ್ರಗಳು ಅಲ್ಲಿನ ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲೂ ಯಶಸ್ವಿಯಾಗಿವೆ. ಇದೇ ಜಾಡಿನಲ್ಲಿ ಈಗ ಮಲಯಾಳ ಚಿತ್ರರಂಗದ ನಿರ್ದೇಶಕರು ಐತಿಹಾಸದ ವೀರಪುರುಷರ ಬೆನ್ನು ಹತ್ತಿದ್ದಾರೆ.

1989ರಲ್ಲಿ ಬಿಡುಗಡೆಯಾಗಿದ್ದ ಮಮ್ಮುಟ್ಟಿ ಅಭಿನಯದ ‘ಒರು ವಡಕ್ಕನ್ ವೀರಗಾಥಾ’ ಸಿನಿಮಾ ಮಲಯಾಳದ ಐತಿಹಾಸಿಕ ಸಿನಿಮಾಗಳಿಗೊಂದು ಮೈಲುಗಲ್ಲು. ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಚಿತ್ರಕತೆ ಬರೆದಿದ್ದ ಈ ಸಿನಿಮಾವನ್ನು ಹರಿಹರನ್ ನಿರ್ದೇಶಿಸಿದ್ದರು. ಉತ್ತರ ಮಲಬಾರ್‌ನ ಚೇಗವರ್ ವೀರಯೋಧರ ಕಥೆ ಹೊಂದಿರುವ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಜೊತೆಗೆ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿತ್ತು.

ಆ ನಂತರ 2009ರಲ್ಲಿ ಬಿಡುಗಡೆಯಾದ ಮಮ್ಮುಟ್ಟಿ ಅಭಿನಯದ ‘ಕೇರಳ ವರ್ಮ ಪಳಸ್ಸಿ ರಾಜ’ ಸಿನಿಮಾ ಮಾಲಿವುಡ್‌ನಲ್ಲಿ ಮತ್ತೆ ಇಂತಹ ಸಿನಿಮಾಗಳ ಪರ್ವಕ್ಕೆ ನಾಂದಿ ಹಾಡಿತು. ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಪಳಸ್ಸಿ ರಾಜನ ಕಥೆ ಆಧರಿಸಿರುವ ಈ ಸಿನಿಮಾವನ್ನು ಹರಿಹರನ್ ನಿರ್ದೇಶಿಸಿದ್ದರು. ಇದಕ್ಕೂ ಎಂ.ಟಿ. ವಾಸುದೇವನ್ ನಾಯರ್ ಅವರೇ ಚಿತ್ರಕಥೆ ಬರೆದಿದ್ದು ವಿಶೇಷ.

ADVERTISEMENT

2011ರಲ್ಲಿ ತೆರೆಕಂಡಿದ್ದ ಪೃಥ್ವಿರಾಜ್ ಅಭಿನಯದ ‘ಉರುಮಿ’ ಚಿತ್ರ ಐತಿಹಾಸಿಕ ಸಿನಿಮಾಗಳಿಗೆ ಮತ್ತಷ್ಟು ಮಾರುಕಟ್ಟೆ ವಿಸ್ತರಿಸಿತು. ವಾಸ್ಕೋಡಗಾಮ ಮಲಬಾರ್‌ಗೆ ಕಾಲಿರಿಸಿದ ಕಥಾಹಂದರ ಹೊಂದಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ದೊಡ್ಡ ಸದ್ದು ಮಾಡಿತ್ತು. ಪ್ರಭುದೇವ್, ಆರ್ಯ, ನಿತ್ಯಾ ಮೆನನ್, ಜೆನಿಲಿಯಾ ಡಿಸೋಜಾ, ವಿದ್ಯಾಬಾಲನ್, ತಬು ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿತ್ತು. ಸಂತೋಷ್ ಶಿವನ್ ಈ ಸಿನಿಮಾ ನಿರ್ದೇಶಿಸಿದ್ದರು.

ಮಲಬಾರ್‌ನ ಯೋಧ ಚಂದು ಚೇಗವರ್ ಕಥೆ ಆಧರಿತ ‘ವೀರಂ’ ಸಿನಿಮಾ 2017ರಲ್ಲಿ ಬಿಡುಗಡೆಗೊಂಡಿತ್ತು. ಇದು ಕೂಡ ‘ಉರುಮಿ’ ಸಾಲಿಗೆ ಸೇರುವ ಚಿತ್ರ. ಆದರೆ, ಇದು ಅಷ್ಟೇನು ಸದ್ದು ಮಾಡಿರಲಿಲ್ಲ. 2018ರ ಅಕ್ಟೋಬರ್‌ನಲ್ಲಿ ತೆರೆಗೆ ಬಂದ ‘ಕಾಯಂಕುಳಂ ಕೊಚ್ಚುಣ್ಣಿ’ ಬಿಗ್ ಬಜೆಟ್ ಚಿತ್ರ ಸಿನಿಪಂಡಿತರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ನಿವಿನ್ ಪೌಳಿ ಹಾಗೂ ಮೋಹನ್‌ಲಾಲ್‌ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ನಿರ್ದೇಶಿಸಿದ್ದು ರೋಷನ್ ಆಂಡ್ರ್ಯೂವ್ಸ್. ಬ್ರಿಟಿಷರ ಕಾಲದಲ್ಲಿ ಶ್ರೀಮಂತರ ಸಂಪತ್ತನ್ನು ದೋಚಿ ಬಡವರಿಗೆ ಹಂಚುತ್ತಿದ್ದ ಕೊಚ್ಚುಣ್ಣಿಯ ಕಥೆ ಆಧರಿಸಿರುವ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಬಳಿಕ ವಿ.ಎ. ಶ್ರೀಕುಮಾರ್ ಮೆನನ್ ನಿರ್ದೇಶನದಲ್ಲಿ ತೆರೆಕಂಡ ಮೋಹನ್‌ಲಾಲ್‌ ಚಿತ್ರ ‘ಒಡಿಯನ್’ ಕೂಡ ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಿತು. ಈ ಎರಡು ಚಿತ್ರಗಳ ಭರ್ಜರಿ ಗೆಲುವಿನ ಬಳಿಕ ಮಾಲಿವುಡ್‌ನಲ್ಲಿ ಇಂತಹ ಸಿನಿಮಾಗಳು ಸಾಲು ಸಾಲಾಗಿ ನಿರ್ಮಾಣವಾಗುತ್ತಿವೆ.

ಪ್ರಸ್ತುತ‌ ಪ್ರಿಯದರ್ಶನ್ ನಿರ್ದೇಶನದಡಿ ಮೂಡಿಬರುತ್ತಿರುವ ಮೋಹನ್‌ಲಾಲ್‌ ಅಭಿನಯದ ‘ಮರಕ್ಕಾರ್: ಅರಬಿ ಕಡಲಿಂಡೆ ಸಿಂಹಂ’, ಪೃಥ್ವಿರಾಜ್ ಅಭಿನಯದ ‘ಕಾಳಿಯನ್’, ಮಮ್ಮುಟ್ಟಿ ಅಭಿನಯದ ‘ಮಾಮಾಂಕಂ’, ವಿನಾಯಕನ್ ಅಭಿನಯದ ‘ಕರಿಂತಂಡನ್’ ಸಿನಿಮಾಗಳು ನಿರ್ಮಾಣ ಹಂತದಲ್ಲಿದ್ದು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವುದು ಸುಳ್ಳೇನಲ್ಲ. ‘ಮರಕ್ಕಾರ್’ ಸಿನಿಮಾ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಹಡಗಿನ ಕ್ಯಾಪ್ಟನ್ ಕುಂಞಾಲಿ ಮರಕ್ಕರ್‌ನ ಕಥೆಯನ್ನು ಒಳಗೊಂಡಿದೆ.

ಎಸ್. ಮಹೇಶ್ ನಿರ್ದೇಶನದ ‘ಕಾಳಿಯನ್’ ಕೂಡ ವೀರ ಯೋಧ ಕಾಳಿಯನ್‌ನ ಜೀವನ ಕಥೆ ಆಧರಿತವಾಗಿದೆ. ವಯನಾಡ್‌ನಿಂದ ಕೋಯಿಕ್ಕೋಡ್‌ಗೆ ಕಾಡಿನ ಮೂಲಕ ಹತ್ತಿರದ ದಾರಿ ಕಂಡುಹಿಡಿದ ಬುಡಕಟ್ಟು ನಾಯಕ ಕರಿಂತಂಡನ್‌ ಕಥೆಯನ್ನು ‘ಕರಿಂತಂಡನ್’ ಹೆಸರಿನಲ್ಲಿ ದೃಶ್ಯರೂಪಕ್ಕಿಳಿಸುತ್ತಿದ್ದಾರೆ ನಿರ್ದೇಶಕ ಲೀಲಾ ಸಂತೋಷ್. ಕಯ್ಯೂರು ಸ್ವಾಂತಂತ್ರ್ಯ ಹೋರಾಟಗಾರರ ಕಥೆ ಒಳಗೊಂಡ ಗೋಪಿ ಕುತ್ತಿಕೋಲ್ ನಿರ್ದೇಶನದ ‘ಆರಯಾ ಕಡವಿಲ್’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಐತಿಹಾಸಿಕ ಕಥಾವಸ್ತು ಹೊಂದಿರುವ ಸಿನಿಮಾಗಳು ಮಲಯಾಳ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡಲು ಸಾಲು ಸಾಲಾಗಿ ಸಜ್ಜಾಗಿರುವುದು ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.