ADVERTISEMENT

ಪರಭಾಷೆಯಲ್ಲಿ ಮಮ್ಮುಟ್ಟಿ ‘ಮಿಂಚು’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:49 IST
Last Updated 18 ಏಪ್ರಿಲ್ 2019, 19:49 IST
ಯಾತ್ರಾ 
ಯಾತ್ರಾ    

ಮಲಯಾಳದ ಮೇರು ನಟ ಮಮ್ಮುಟ್ಟಿ, ತಮ್ಮ ಅಭಿನಯ ಕೌಶಲದಿಂದ ಭಾರತೀಯ ಚಿತ್ರರಂಗದಲ್ಲೇ ಚಿರಪರಿಚಿತರಾದವರು. ರಾಷ್ಟ್ರೀಯ ಮಟ್ಟದಲ್ಲೂ ಹಲವು ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

ಮಲಯಾಳ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿರುವ ‘ಒರು ವಡಕ್ಕನ್ ವೀರಗಾಥಾ’, ‘ವಿಧೇಯನ್’, ‘ಮೃಗಯಾ’ ಮೊದಲಾದ ಸಿನಿಮಾಗಳ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಛಾಪೊತ್ತಿರುವ ಮಮ್ಮುಟ್ಟಿ, ಪರಭಾಷಾ ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದ್ದಾರೆ.

ಈಚೆಗೆ ಬಿಡುಗಡೆಗೊಂಡಿದ್ದ ತಮಿಳು ಚಿತ್ರ ‘ಪೇರನ್ಬು’ ಮತ್ತು ತೆಲುಗಿನ ‘ಯಾತ್ರಾ’ ಸಿನಿಮಾಗಳ ಅಭಿನಯ ಈ ಎರಡು ಭಾಷೆಗಳಲ್ಲೂ ಮಮ್ಮುಟ್ಟಿ ಅಭಿಮಾನಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. 67ನೇ ವಯಸ್ಸಲ್ಲೂ ಲವಲವಿಕೆಯ ನಟನೆಯ ಮೂಲಕ ಅಭಿನಯಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ.

ADVERTISEMENT

ಮಲಯಾಳ ಅಲ್ಲದೆ ಇತರ ಭಾಷೆಯ ಚಿತ್ರಗಳಲ್ಲಿ ಮಮ್ಮುಟ್ಟಿ ಅಭಿನಯಿಸುತ್ತಿರುವುದು ಇದು ಮೊದಲೇನಲ್ಲ. 1993ರಲ್ಲಿ ಬಿಡುಗಡೆಗೊಂಡಿದ್ದ ಇಕ್ಬಾಲ್ ದುರಾನಿ ನಿರ್ದೇಶನದ ‘ಧರ್ತಿಪುತ್ರ’ ಹಿಂದಿ ಚಿತ್ರದಲ್ಲೂ ಮಮ್ಮುಟ್ಟಿ ಮಿಂಚಿದ್ದರು. 1991ರಲ್ಲಿ ರಜನಿಕಾಂತ್ ಜೊತೆ ಮಣಿರತ್ನಂ ನಿರ್ದೇಶನದ ‘ದಳಪತಿ’ ತಮಿಳು ಚಿತ್ರದಲ್ಲೂ ನಟಿಸಿದ್ದರು.

2000ದಲ್ಲಿ ಬಿಡುಗಡೆಯಾಗಿದ್ದ ಜಬ್ಬರ್ ಪಟೇಲ್ ನಿರ್ದೇಶನದ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್’ ಇಂಗ್ಲಿಷ್ ಸಿನಿಮಾದಲ್ಲಿ ಅಂಬೇಡ್ಕರ್ ಪಾತ್ರದಲ್ಲಿ ಮಮ್ಮುಟ್ಟಿ ಅಭಿನಯಿಸಿದ್ದರು. ಈ ಸಿನಿಮಾದ ಅಭಿನಯಕ್ಕೆ ಶ್ರೇಷ್ಠ ನಟ ರಾಷ್ಟ್ರೀಯ ಪ್ರಶಸ್ತಿಗೂ ಪಾತ್ರರಾಗಿದ್ದರು.

2012 ರಲ್ಲಿ ಅಭಯ ಸಿಂಹ ನಿರ್ದೇಶನದ ಕನ್ನಡ ಸಿನಿಮಾ ‘ಶಿಕಾರಿ’ ಸಿನಿಮಾದಲ್ಲೂ ನಾಯಕನ ಪಾತ್ರದಲ್ಲಿ ಮಿಂಚಿದ್ದ ಮಮ್ಮುಟ್ಟಿ ಕನ್ನಡದ ಪ್ರೇಕ್ಷಕರಿಗೂ ಪರಿಚಿತರಾಗಿದ್ದರು. ಈ ಸಿನಿಮಾ ಮಲಯಾಳದಲ್ಲೂ ತೆರೆಕಂಡಿತ್ತು. ಈಚೆಗೆ ಬಿಡುಗಡೆಯಾಗಿದ್ದ ರಾಮ್ ನಿರ್ದೇಶನದ ‘ಪೇರನ್ಬು’ ತಮಿಳು ಚಿತ್ರ ಭಾರಿ ಸದ್ದು ಮಾಡಿದೆ. ತಮ್ಮ ಮನೋಜ್ಞ ಅಭಿನಯದ ಮೂಲಕ ಮಮ್ಮುಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಚಿತ್ರದಲ್ಲಿ ಮಿದುಳಿನ ಸಮಸ್ಯೆಗೆ ಒಳಗಾಗಿರುವ ಹೆಣ್ಣು ಮಗುವಿನ ತಂದೆಯ ಪಾತ್ರದಲ್ಲಿ ನಟಿಸಿರುವ ಮಮ್ಮುಟ್ಟಿ ತಮ್ಮ ಅಭಿನಯ ಕೌಶಲದಿಂದ ಪ್ರೇಕ್ಷಕರ ಹೃದಯವನ್ನು ಆರ್ದ್ರಗೊಳಿಸುತ್ತಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗಳನ್ನು ಇನ್ನು ನನ್ನಿಂದ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಆಕೆಯ ತಾಯಿ ಬಿಟ್ಟು ಹೋಗಿರುತ್ತಾಳೆ. ಆಗ ವಿದೇಶದಲ್ಲಿದ್ದ ತಂದೆಗೆ ಅನಿವಾರ್ಯವಾಗಿ ಮಗಳ ಜವಾಬ್ದಾರಿ ಹೊರಬೇಕಾಗುತ್ತದೆ. ವಿದೇಶದಿಂದ ಮರಳಿ ಬಂದ ತಂದೆ ತನ್ನ ರೋಗಪೀಡಿತ ಮಗಳ ಆರೈಕೆಗಾಗಿ ಪಡುವ ಕಷ್ಟಗಳನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಇಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದ ಮಮ್ಮುಟ್ಟಿ ಮೋಡಿ ಮಾಡಿದ್ದಾರೆ.

ಇನ್ನು ಮಹಿ ವಿ.ರಾಘವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ತೆಲುಗು ಸಿನಿಮಾ ‘ಯಾತ್ರಾ’ದಲ್ಲಿ ಮಮ್ಮುಟ್ಟಿ ಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ಕಥೆಯನ್ನಾಧರಿಸಿ ನಿರ್ಮಿಸಿರುವ ಈ ಸಿನಿಮಾದಲ್ಲಿ ಮಮ್ಮುಟ್ಟಿ ರಾಜಶೇಖರ ರೆಡ್ಡಿ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಾದಯಾತ್ರೆಗಳ ಮೂಲಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದವರು ರಾಜಶೇಖರ ರೆಡ್ಡಿ. ಇದೇ ಎಳೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಈ ಮೂಲಕ ತೆಲುಗು ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದ್ದಾರೆ. ಈ ಎರಡು ಸಿನಿಮಾಗಳ ಯಶಸ್ಸು ಮಮ್ಮುಟ್ಟಿ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.