ADVERTISEMENT

ಮತ್ತೆ ಮತ್ತೆ ಮಮ್ಮೂಟ್ಟಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:00 IST
Last Updated 11 ಫೆಬ್ರುವರಿ 2019, 20:00 IST
ಮಮ್ಮೂಟ್ಟಿ
ಮಮ್ಮೂಟ್ಟಿ   

ಮಲಯಾಳಂ ಚಿತ್ರರಂಗದ ‘ಎವರ್‌ಗ್ರೀನ್‌ ಹೀರೊ’ಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸೂಪರ್ ಸ್ಟಾರ್‌ ಮಮ್ಮೂಟ್ಟಿ. 38 ವರ್ಷಗಳಿಂದಲೂ ಚಾರ್ಮ್‌ ಮತ್ತು ಫಾರ್ಮ್‌ ಕಳೆದುಕೊಳ್ಳದೆ ಯುವಕರನ್ನೂ ನಾಚಿಸುವಂತೆ ಲವಲವಿಕೆಯಿಂದ ನಟಿಸುವ ಹಿರಿಯ ನಟ. ಅವರಿಗೆ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.

ಚಿತ್ರಕತೆ, ನಿರ್ದೇಶಕರ ದೃಷ್ಟಿಕೋನ, ಚಿತ್ರ ತಂಡವನ್ನು ಅಳೆದು ತೂಗಿ ಕಾಲ್‌ಶೀಟ್‌ ನೀಡುವುದು ಮಮ್ಮೂಟ್ಟಿ ಜಾಯಮಾನ.ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಅವರ ಜೀವನಕತೆಯನ್ನು ಆಧರಿಸಿದ ಚಿತ್ರ ‘ಯಾತ್ರಾ’ದ ಮೂಲಕ ತೆಲುಗು ಚಿತ್ರರಂಗಕ್ಕೆ ಎರಡನೇ ಎಂಟ್ರಿ ಕೊಟ್ಟಿದ್ದಾರೆ.

‘ಯಾತ್ರಾ’ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಹಿ ವಿ.ರಾಘವ್‌ ನಿರ್ದೇಶನದ ಈ ಚಿತ್ರ, ವೈಎಸ್‌ಆರ್‌ ಜೀವನದ ಬಿಡಿಚಿತ್ರಗಳ ದೃಶ್ಯರೂಪ ಎಂಬುದು ಮಮ್ಮೂಟ್ಟಿ ವಿಶ್ಲೇಷಣೆ. ವೈಎಸ್‌ಆರ್‌ ಚುನಾವಣೆ ಸಂದರ್ಭದಲ್ಲಿ ಕೈಗೊಂಡಿದ್ದ 900 ಮೈಲಿ ದೂರದ ಪಾದಯಾತ್ರೆಯೇ ಚಿತ್ರದ ಪ್ರಧಾನ ವಸ್ತು. ಅವರ ಜೀವನಕತೆಯನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮೆಚ್ಚಿ ಈ ಚಿತ್ರಕ್ಕೆ ಒಪ್ಪಿಗೆ ನೀಡಿದರಂತೆ.

ADVERTISEMENT

ಮಮ್ಮೂಟ್ಟಿ ಅವರಿಗೆ ಈಗವಯಸ್ಸು 67. ಆದರೆ ಕ್ಯಾಮೆರಾ ಮುಂದೆ ನಿಂತಾಗ 17ರ ಹುಮ್ಮಸ್ಸು. ಯುವ ನಿರ್ದೇಶಕರನ್ನು ಬೆನ್ನುತಟ್ಟಿ ಇನ್ನಷ್ಟು ಉಮೇದು ತುಂಬುವುದು ಈ ನಟನಿಗೆ ಅಚ್ಚುಮೆಚ್ಚು. 38 ವರ್ಷಗಳ ಚಿತ್ರರಂಗದ ಅನುಭವದಲ್ಲಿ ಅವರು ಬರೋಬ್ಬರಿ 70 ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

ನಟನಾಗಿ ರಾಜಕಾರಣಿಯ ಪಾತ್ರ ಮಾಡುವುದು ಓಕೆ. ಆದರೆ 38 ವರ್ಷ ಬೆಳೆಸಿದ ಕ್ಷೇತ್ರಕ್ಕೆ ಬೆನ್ನುಹಾಕಿ ಹೊಸ ಕ್ಷೇತ್ರಕ್ಕೆ ಯಾಕೆ ಹೋಗಬೇಕು ಎಂಬುದು, ರಾಜಕೀಯ ಪ್ರವೇಶ ಕುರಿತು ಅವರ ನಿಲುವು.

ತಮ್ಮ ಪಾತ್ರಗಳಿಗೆ ತಾವೇ ಡಬ್ಬಿಂಗ್‌ ಮಾಡುವುದುಮಮ್ಮೂಟ್ಟಿಗೆ ಖುಷಿ. ‘ಯಾತ್ರಾ’ದಲ್ಲಿನ ಸಂಭಾಷಣೆಗಳು ಅವರದೇ ಕಂಠದಲ್ಲಿವೆ. ಅದರಲ್ಲೂ ಮಲಯಾಳಂ ಮತ್ತು ತೆಲುಗು ಉಚ್ಚಾರಣೆಗಳು ಬಹುತೇಕ ಒಂದೇ ರೀತಿ ಇರುವ ಕಾರಣ ಡಬ್ಬಿಂಗ್‌ ಕಷ್ಟವಾಗಲಿಲ್ಲವಂತೆ.

‘ಪೆರಂಬು’ ತಮಿಳು ಚಿತ್ರದಲ್ಲಿ ಮಮ್ಮೂಟ್ಟಿ, ಸಾಧನಾ ವೆಂಕಟೇಶ್‌

ಬಿಡುವೇ ಇಲ್ಲ
ಮಮ್ಮೂಟ್ಟಿ ಇಂದಿಗೂ ಎಲ್ಲಾ ನಿರ್ದೇಶಕರ ಮೊದಲ ಆಯ್ಕೆಯ ನಟ. ಈ ವಯಸ್ಸಿನಲ್ಲಿಯೂ ನಾಯಕನಟನ ಪಾತ್ರಕ್ಕೆ ಅವರಿಗೆ ಬರುತ್ತಿರುವ ಕಾಲ್‌ಶೀಟ್‌ಗಳೇ ಇದಕ್ಕೆ ಸಾಕ್ಷಿ. ಈಗಾಗಲೇ ಸಹಿ ಹಾಕಿರುವ ಚಿತ್ರಗಳೇ ಸಾಕಷ್ಟಿವೆ.

ಖಾಲಿದ್‌ ರೆಹಮಾನ್‌ ನಿರ್ದೇಶನದ ‘ಉಂಡಾ’ ಚಿತ್ರೀಕರಣೋತ್ತರ ಕೆಲಸಗಳು ನಡೆದಿವೆ.‘ಮಧುರರಾಜ’ ಅಂತಿಮ ಹಂತದಲ್ಲಿದೆ. ಮಾದಕ ಸುಂದರಿ ಸನ್ನಿ ಲಿಯೋನ್‌ ಕೆಲದಿನಗಳ ಹಿಂದೆಯಷ್ಟೇ ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ. ನಿರ್ದೇಶಕ ಶಂಕರ್‌ ರಾಮಕೃಷ್ಣನ್‌ ಅವರ ‘ಪದಿನೆಟ್ಟಂ ಪಡಿ’ ಮತ್ತು ಮುಂದಿನ ವರ್ಷ ತೆರೆಕಾಣಬೇಕಿರುವ ‘ಮಾಮಾನ್‌ಕಂ’ದ ಚಿತ್ರೀಕರಣವೂ ಭರದಿಂದ ಸಾಗಿದೆ.

ತಮಿಳಿನಲ್ಲಿ ಮಮ್ಮೂಟ್ಟಿ ನಟಿಸಿದ ಇತ್ತೀಚಿನ ಚಿತ್ರ ‘ಪೆರಂಬು’ ಬಗ್ಗೆ ಜಗತ್ತಿನೆಲ್ಲೆಡೆ ಚರ್ಚೆಯಾಗುತ್ತಿದೆ. 10 ವರ್ಷಗಳ ಬಳಿಕ ತಮಿಳಿಗೆ ಮರಳಿದ್ದಾರೆ ಈ ಸೂಪರ್‌ ಸ್ಟಾರ್‌. ‘ಪೆರಂಬು’ಗೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮುಕ್ತಕಂಠದ ಮೆಚ್ಚುಗೆ ಗಳಿಸಿದೆ.

‘ಸೂಪರ್‌ ಸ್ಟಾರ್‌’ ಮಮ್ಮೂಟ್ಟಿ ಅಭಿನಯವೆಂದರೆ ನವರಸಗಳ ಸಮಪಾಕ. ಹಾಗಾಗಿ ಅಭಿಮಾನಿಗಳು ಇಂದಿಗೂ ಅವರ ಚಿತ್ರಗಳಿಗೆ ಕಾತರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.