‘ಮಾನ್ಸೂನ್ ರಾಗ’ ಸಿನಿಮಾ ಮೂಲಕ ನಟ ‘ಡಾಲಿ’ ಧನಂಜಯ್ ಮತ್ತು ನಟಿ ರಚಿತಾ ರಾಮ್ ಮೊದಲ ಬಾರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಆ.19ಕ್ಕೆ ರಿಲೀಸ್ ಆಗುತ್ತಿದೆ.ಎಸ್.ರವೀಂದ್ರನಾಥ್ ನಿರ್ದೇಶನದ ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ಅವರು ನಟಿಸಿದ್ದು, ತೆರೆ ಮೇಲೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಧನಂಜಯ್ ಜೊತೆಗಿನ ನಟನೆಯ ಅನುಭವವನ್ನು ಬಿಚ್ಚಿಟ್ಟ ರಚಿತಾ, ‘ಧನಂಜಯ್ ಜೊತೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೇನೆ. ಧನಂಜಯ್ ನಿಜವಾಗಲೂ ‘ನಟ ರಾಕ್ಷಸ’. ಅವರೊಂದಿಗೆ ನಟನೆ ಮಾಡುವುದು ದೊಡ್ಡ ಸವಾಲು’ ಎಂದಿದ್ದಾರೆ.
‘ಈ ತಂಡದ ಜೊತೆ ನಾನು ಮೊದಲು ‘ಪುಷ್ಪಕ ವಿಮಾನ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ನನಗೆ ಈ ತಂಡ ಇಷ್ಟ. ತಂಡಕ್ಕೆ ಸಿನಿಮಾದ ಮೇಲಿರುವ ಬದ್ಧತೆ ನನ್ನನ್ನು ಸೆಳೆಯಿತು. ‘ಮಾನ್ಸೂನ್ ರಾಗ’ ಮುಂಗಾರಿನ ಸಂದರ್ಭದಲ್ಲೇ ಬಿಡುಗಡೆಯಾಗುತ್ತಿರುವುದು ವಿಶೇಷ. ಪಾತ್ರದ ಬಗ್ಗೆ ಹೇಳಿದ ಸಂದರ್ಭದಲ್ಲಿ ನಾನು ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ನಾನು ಸೆಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿನ ಪ್ರತಿ ಪಾತ್ರಕ್ಕೂ ಜೀವವಿದೆ. ಹಿಂದಿಯ ‘ಗಂಗೂಭಾಯಿ’ ಸಿನಿಮಾ ಬಿಡುಗಡೆ ಆಗುವುದಕ್ಕೆ ಮೊದಲೇ ಮಾಡಿದ ಸಿನಿಮಾ ಇದು. ಆದರೆ ಬಿಡುಗಡೆ ತಡವಾಯಿತು’ ಎಂದರು ರಚಿತಾ.
ಚಿತ್ರದ ಕುರಿತು ಮಾತನಾಡಿದ ಧನಂಜಯ್, ‘ರಚಿತಾ ಅವರ ಪಾತ್ರವನ್ನು ನೋಡಿದ ನಂತರ ಇದು ಯಾವ ರೀತಿಯ ಸಿನಿಮಾ ಎನ್ನುವ ಪ್ರಶ್ನೆ ಖಂಡಿತಾ ಇರುತ್ತದೆ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ಇದು ಕುಟುಂಬ ಸಹಿತ ನೋಡಬಹುದಾದ ಚಿತ್ರ. ಇದೊಂದು ಪ್ರೇಮಕಥೆ. ನಿರ್ದೇಶಕರು ಅದ್ಭುತವಾಗಿ ಕಥೆ ಕಟ್ಟಿ ಪ್ರೇಕ್ಷಕರ ಎದುರಿಗೆ ಸಿನಿಮಾವನ್ನು ತಂದಿದ್ದಾರೆ. ಭಾವನಾತ್ಮಕವಾದ ಪಯಣವಿದು’ ಎಂದಿದ್ದಾರೆ.
ಚಿತ್ರದ ರಾಗಸುಧಾ ಥೀಮ್ ಹಾಡು ಸದ್ಯ ವೈರಲ್ ಆಗಿದ್ದು, ಅನೂಪ್ ಸಿಳೀನ್ ಸಂಗೀತ ನೀಡಿರುವ ಈ ಹಾಡಿನಲ್ಲಿ ಬೈರಾಗಿ ಖ್ಯಾತಿಯ ಯಶಾ ಹಾಕಿರುವ ಹೆಜ್ಜೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.