ADVERTISEMENT

ಸೆಟ್ಟೇರಿದ ಮಂಸೋರೆ ನಿರ್ದೇಶನದ ‘19.20.21’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 12:31 IST
Last Updated 7 ಫೆಬ್ರುವರಿ 2022, 12:31 IST
‘19.20.21’ ಚಿತ್ರತಂಡ
‘19.20.21’ ಚಿತ್ರತಂಡ   

‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್‌–1978’ ಸಿನಿಮಾಗಳ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ಹೊಸ ಪ್ರೊಜೆಕ್ಟ್‌ ಸೆಟ್ಟೇರಿದೆ. ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ, ವಿಭಿನ್ನ ಶೀರ್ಷಿಕೆಯ ‘19.20.21’ ಸಿನಿಮಾದ ಮುಹೂರ್ತ ಸೋಮವಾರಜಯನಗರದ ನಾಲ್ಕನೇ ಹಂತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ನಡೆಯಿತು.

ಈ ಹಿಂದೆ ಮಂಸೋರೆ ನಿರ್ದೇಶನದ ‘ಆ್ಯಕ್ಟ್-1978’ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕ ದೇವರಾಜ್ ಆರ್. ಅವರು, ತಮ್ಮ ‘ಡಿ ಕ್ರಿಯೇಷನ್ಸ್’ ಬ್ಯಾನರಿನಡಿಯಲ್ಲಿ ಈ ಹೊಸ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ.

‘ಸಿನಿಮಾದ ಪ್ರಮುಖ ಪಾತ್ರದಲ್ಲಿ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಕಾಣಿಸಿಕೊಳ್ಳಲಿದ್ದು, ಸಿನಿಮಾ ಹಾಗೂ ರಂಗಭೂಮಿಯ ಹಲವು ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ಧಾರವಾಡ, ಯಲ್ಲಾಪುರ, ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಮಾಡಲು ಸಿದ್ಧತೆ ಆರಂಭಿಸಿದ್ದು, ಚಿತ್ರೀಕರಣ ಪೂರ್ವದ ತಯಾರಿ ಪೂರ್ಣಗೊಳಿಸಿ ಶೀಘ್ರದಲ್ಲೇ ಚಿತ್ರೀಕರಣವನ್ನು ಆರಂಭಿಸಲಿದ್ದೇವೆ’ ಎಂದಿದ್ದಾರೆ ಮಂಸೋರೆ.

ADVERTISEMENT

ಈ ಸಿನಿಮಾಗೂ ಮೊದಲು ‘ಅಬ್ಬಕ್ಕ’ ಹೆಸರಿನ ಚಿತ್ರವನ್ನು ಮಂಸೋರೆ ಕೈಗೆತ್ತಿಕೊಂಡಿದ್ದರು. ‘ಅಬ್ಬಕ್ಕ ಸಿನಿಮಾ ಮಾಡುವ ಯೋಜನೆಯನ್ನು ಕೊರೋನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ‘ಅಬ್ಬಕ್ಕ’ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಇತ್ತೀಚೆಗಷ್ಟೇ ಮಂಸೋರೆ ಅವರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.