ADVERTISEMENT

ಮಾಂಟೊ ‘ಅಂಗಿ’ಯೊಳಗೆ ನವಾಜುದ್ದೀನ್‌

ಸಂದರ್ಶನ

ರೋಹಿಣಿ ಮುಂಡಾಜೆ
Published 20 ಸೆಪ್ಟೆಂಬರ್ 2018, 19:30 IST
Last Updated 20 ಸೆಪ್ಟೆಂಬರ್ 2018, 19:30 IST
ನವಾಜುದ್ದೀನ್‌ ಸಿದ್ದಿಕಿ ಚಿತ್ರ: ಎಸ್.ಕೆ. ದಿನೇಶ್‌
ನವಾಜುದ್ದೀನ್‌ ಸಿದ್ದಿಕಿ ಚಿತ್ರ: ಎಸ್.ಕೆ. ದಿನೇಶ್‌   

* ಜೀವನ ಕತೆಯನ್ನಾಧರಿಸಿದ ಮತ್ತೊಂದು ಚಿತ್ರದಲ್ಲಿ ನಟಿಸಿದ್ದೀರಿ. ಮಾಂಟೊ ಆಗುವುದು ಕಷ್ಟವಾಯಿತೇ?
ನಿಜಕ್ಕೂ ಸಾದತ್‌ ಹಸನ್‌ ಮಾಂಟೊ ಆಗುವುದು ಸುಲಭದ ಮಾತಾಗಿರಲಿಲ್ಲ. ನಾನು ಮಾಂಟೊ ಅಭಿಮಾನಿ. ಅವರ ಹತ್ತಾರು ಪುಸ್ತಕಗಳನ್ನು ಓದಿದ್ದೇನೆ. ಅವರ ಚಿಂತನೆ, ಸಾಮಾಜಿಕ ಚಿಂತನೆಯುಳ್ಳ ವಸ್ತು ಕಾಲೇಜು ದಿನಗಳಿಂದಲೂ ನನ್ನನ್ನು ಸೆಳೆದಿದ್ದವು. ಒಂದು ದಿನ ಮುಂಬೈನಲ್ಲಿ ಭೇಟಿ ಮಾಡಿದ ನಂದಿತಾ (‘ಮಾಂಟೊ’ದ ನಿರ್ದೇಶಕಿ ಮತ್ತು ನಿರ್ಮಾಪಕರಲ್ಲಿ ಒಬ್ಬರು) ‘ನಾನು ಮಾಂಟೊ ಬಗ್ಗೆ ಸಿನಿಮಾ ಮಾಡುತ್ತಿದ್ದೇನೆ’ ಅಂದರು. ಕುಣಿದಾಡುವಷ್ಟು ಖುಷಿಯಾಯಿತು. ‘ನಂದಿತಾ, ನಾನು ಎಷ್ಟು ವರ್ಷ ಬೇಕಾದರೂ ಕಾಯುತ್ತೇನೆ. ‘ಮಾಂಟೊ’ ಪಾತ್ರ ಮಾಡಲು ನನ್ನ ಕಾಲ್‌ಶೀಟ್‌ ಸದಾ ಸಿದ್ಧವಿರುತ್ತದೆ’ ಎಂದೆ.

* ಈಗಿನ ಕಾಲಘಟ್ಟಕ್ಕೆ ‘ಮಾಂಟೊ’ ಎಷ್ಟು ಪ್ರಸ್ತುತ?
ಮಾಂಟೊ ಹೆಚ್ಚು ಪ್ರಸ್ತುತವಾಗುವುದೇ ಈಗಿನ ಕಾಲಘಟ್ಟಕ್ಕೆ. ಜಾತಿ, ಧರ್ಮ, ಸಾಮಾಜಿಕ ಬಹಿಷ್ಕಾರ, ತಾರತಮ್ಯ, ವರ್ಗಭೇದಗಳು, ಕೆಟ್ಟ ರಾಜಕೀಯ ಸನ್ನಿವೇಶಗಳು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಭಾರತದ ಯುವಜನರು, ರಾಜಕಾರಣಿಗಳು ಮತ್ತು ಇಡೀ ಸಮಾಜ ಮಾಂಟೊನನ್ನು ಓದಿ ಅರ್ಥೈಸಿಕೊಳ್ಳಬೇಕಿದೆ. ನಿಮಗೆ ಓದುವಷ್ಟು ಪುರುಸೊತ್ತು ಅಥವಾ ವ್ಯವಧಾನ ಇಲ್ಲದಿದ್ದರೆ ನಮ್ಮ ಸಿನಿಮಾ ನೋಡಿ ಸಾಕು. ಮಾಂಟೊ ನಿಮ್ಮನ್ನು ಆವರಿಸಿಕೊಂಡುಬಿಡುತ್ತಾನೆ.

* ಬಿ ಟೌನ್‌ನ ಹೀರೊಗಳಲ್ಲಿ ವಿಭಿನ್ನ ಅಭಿರುಚಿ ಇರುವವರು ನೀವು. ನಟನಿಗೆ ಓದು ಎಷ್ಟು ಮುಖ್ಯ?
ಓದುವ ಹುಚ್ಚು ನನಗೆ ಹಿಡಿಯದೇ ಇದ್ದಿದ್ದರೆ ನನ್ನ ವ್ಯಕ್ತಿತ್ವ ಹೀಗಿರುತ್ತಿರಲಿಲ್ಲ. ಓದುವಿಕೆ ನನ್ನನ್ನು ಹೊಸ ವ್ಯಕ್ತಿಯನ್ನಾಗಿ ರೂಪಿಸಿದೆ; ಜೀವಪರ ಚಿಂತನೆಗೆ ಹಚ್ಚುತ್ತದೆ. ನಾನು ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗಲೇ ಓದಲು ಶುರು ಮಾಡಿದೆ. ಜಾರ್ಜ್‌ ಬರ್ನಾಡ್‌ ಶಾ, ಮ್ಯಾಕ್ಸಿಂ ಗೋರ್ಕಿ, ವಿಲಿಯಂ ಷೇಕ್ಸ್‌ಪಿಯರ್‌, ವಿಲಿಯಂ ವರ್ಡ್ಸ್‌ವರ್ತ್‌, ಟಾಲ್‌ಸ್ಟಾಯ್‌ ನನ್ನ ನೆಚ್ಚಿನ ಲೇಖಕರು. ನಟನಿಗೆ ಅಂತ ಅಲ್ಲ. ಓದು ಪ್ರತಿಯೊಬ್ಬ ಸಾಕ್ಷರನಿಗೂ ಬಹಳ ಮುಖ್ಯ.

ADVERTISEMENT

* ನಾಯಕ ನಟರು ನೋಡಲು ಸುಂದರವಾಗಿರಬೇಕು ಎಂದು ಚಿತ್ರರಂಗ ಬಯಸುತ್ತದೆ. ನಿಮಗೂ ಇಂತಹ ಅನುಭವಗಳಾಗಿವೆ. ಅಲ್ವೇ?
ಅಯ್ಯೋ ಸಾಕಷ್ಟು ಅನುಭವಗಳಾಗಿವೆ. ತೋಳಿನ ಮಾಂಸಖಂಡಗಳ ಅಳತೆ ಏನು, ಬೆನ್ನು ಮತ್ತು ಎದೆ ಎಷ್ಟು ಅಗಲವಾಗಿದೆ, ಮುಖ ಎಷ್ಟು ನುಣುಪಾಗಿದೆ, ಎಷ್ಟು ಎತ್ತರ ಇದ್ದೀಯಾ ಎಂಬ ಅಂಶಗಳು ಬಾಲಿವುಡ್‌ನಲ್ಲಿ ನಾಯಕಪಟ್ಟವನ್ನು ನಿರ್ಧರಿಸುತ್ತವೆ. ಇದು ಇಂದು, ನಿನ್ನೆಯ ಬೆಳವಣಿಗೆಯಲ್ಲ. ಹಿಂದಿನಿಂದಲೂ ನಡೆದುಬಂದಿರುವ ಅಭ್ಯಾಸ. ಆ ಅಷ್ಟೂ ‘ಪಾಸಿಟಿವ್‌ ಅಂಶ’ಗಳನ್ನು ಹೊಂದಿರುವ ನಾಯಕರ ಸಿನಿಮಾಗಳೆಲ್ಲವೂ ಗೆದ್ದಿವೆಯೇ? ಇಲ್ಲ ಎಂದಾದರೆ ಸಿನಿಮಾಗಳು ಹೀರೊ ಅಥವಾ ಹೀರೋಯಿನ್‌ನ ಅಂದಚಂದವನ್ನು ಅವಲಂಬಿಸಿಲ್ಲ ಎಂದಾಯ್ತಲ್ಲ? ಹೌದಪ್ಪ ನಾನು ನೋಡಲು ಸುಂದರವಾಗಿಲ್ಲ, ಹೆಚ್ಚು ಎತ್ತ‌ರವೂ ಇಲ್ಲ, ನನ್ನ ತೋಳುಗಳು ಬಲಿಷ್ಠವಾಗಿಯೂ ಇಲ್ಲ. ಹಾಗಿದ್ದರೂ ನವಾಜುದ್ದೀನ್‌ ಸಿದ್ದಿಕಿಯೇ ತಮ್ಮ ಚಿತ್ರಕ್ಕೆ ನಾಯಕನಾಗಬೇಕು ಎಂದು ಆಸೆಪಡುವ ನಿರ್ದೇಶಕರು, ನಿರ್ಮಾಪಕರೂ ಇದ್ದಾರಲ್ಲ. ವ್ಯಕ್ತಿಯ ಬಾಹ್ಯ ಸೌಂದರ್ಯದಿಂದ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ಅಳೆಯುವುದುದು ಕೆಟ್ಟ ಚಾಳಿ.

*‘ಮಾಂಟೊ’ ಗೆಲ್ಲುವ ನಿರೀಕ್ಷೆ ಇದೆಯೇ?
ನೂರಕ್ಕೆ ನೂರು ವಿಶ್ವಾಸವಿದೆ. ಬೇರೆ ನಗರಗಳಲ್ಲಿ ಬಿಡಿ, ನಿಮ್ಮ ಈ ಬೆಂಗಳೂರಿನಲ್ಲಿಯೇ ‘ಮಾಂಟೊ’ ಗೆಲ್ಲುತ್ತಾನೆ ನೋಡುತ್ತಿರಿ. ಅಂದ ಹಾಗೆ, ನೀವೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಹೇಗಿದೆ ಅಂತ ನನಗೆ ಹೇಳಿ ಓಕೆನಾ?

ಸ್ವಾತಂತ್ರ್ಯ ಚಳವಳಿ ಕಾಲದ ಮುಂಬೈ, ಲಾಹೋರ್‌ ಮತ್ತು ಮಾಂಟೊ:ಭಾರತ ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಅಕ್ಷರಲೋಕದ ಅನೇಕರು ತಮ್ಮ ಒಡಲಾಳದ ಭಾವಗಳನ್ನು ಕತೆ, ಪದ್ಯ, ನಾಟಕಗಳ ರೂಪ ಕೊಡುತ್ತಿದ್ದರು. ಹಿಂದಿ ಚಿತ್ರರಂಗ ಮತ್ತು ಕಥಾಸಾಹಿತ್ಯ ಕ್ಷೇತ್ರದಲ್ಲಿ ಅಸಾಮಾನ್ಯ ಕತೆಗಾರನಾಗಿ ಪ್ರಸಿದ್ಧಿ ಪಡೆದಿದ್ದಸಣ್ಣ ಕತೆಗಾರ ಸಾದತ್‌ ಹಸನ್‌ ಮಾಂಟೊ ಅಂತಹವರಲ್ಲಿ ಒಬ್ಬರು.

1946ರಲ್ಲಿ ಮುಂಬೈನಲ್ಲಿ ಮಾಂಟೊ ಕಳೆದ ದಿನಗಳು, ಹಿಂದಿ ಚಿತ್ರರಂಗದಲ್ಲಿ ಅವರು ಮೂಡಿಸಿದ್ದ ಛಾಪು ಮತ್ತು 1948ರಲ್ಲಿ ಲಾಹೋರ್‌ಗೆ ವಲಸೆ ಹೋಗಿ ಅಲ್ಲಿಯೇ ನೆಲೆನಿಂತ ಬಳಿಕ ಅವರ ಸ್ಥಿತಿಗತಿ, ಎರಡೂ ದೇಶಗಳ ನಡುವಿನ ತಲ್ಲಣಗಳು, ಪತ್ನಿ ಸಫಿಯಾ ನಡೆಸುವ ಹೋರಾಟಗಳನ್ನು ‘ಮಾಂಟೊ’ ಸಿನಿಮಾ ಅನಾವರಣ ಮಾಡುತ್ತದೆ. ಸಾಹಿತ್ಯ ಜಗತ್ತಿಗೆ ಸದಾ ಕಾಡುವ ಪ್ರಶ್ನೆಯೆಂದರೆ, ಮಾಂಟೊ ಪಾಕಿಸ್ತಾನದಲ್ಲಿ ನೆಲೆಸುವ ನಿರ್ಧಾರ ಕೈಗೊಂಡದ್ದು ಯಾಕೆ ಎಂಬುದು. ಮಾಂಟೊ ಪಾತ್ರ ಮಾಡಿರುವ ನವಾಜುದ್ದೀನ್‌ ಸಿದ್ದಿಕಿ ಕೂಡಾ ಮಾತಿನ ಮಧ್ಯೆ ಈ ಪ್ರಶ್ನೆಯನ್ನು ಪ್ರಸ್ತಾಪ ಮಾಡಿದರು. ಆದರೆ, ‘ಉತ್ತರ ಬೇಕೆಂದರೆ ಸಿನಿಮಾ ನೋಡಿ’ ಎಂದು ನಕ್ಕರು.

1940ರ ದಶಕದ ಮುಂಬೈ ನಗರವನ್ನು ತೋರಿಸುವುದು ನಿಜಕ್ಕೂ ದೊಡ್ಡ ಸವಾಲು. ಈಗಿನ ಮುಂಬೈಯಲ್ಲಿ ಅಷ್ಟು ಹಳೆಯ ಮುಂಬೈಯನ್ನು ಚಿತ್ರಿಸುವುದು ಸಾಧ್ಯವೇ? ಆದರೆ ನಂದಿತಾ ಅದನ್ನು ಸಾಧ್ಯವಾಗಿಸಿದ್ದಾರೆ. ಚಿತ್ರದ ಪಾಸಿಟಿವ್‌ ಅಂಶಗಳಲ್ಲಿ ಅದೂ ಒಂದು ಎನ್ನುತ್ತಾರೆ ನವಾಜುದ್ದೀನ್‌. ಚಿತ್ರದ ನಿರ್ದೇಶಕಿ ಮತ್ತು ನಿರ್ಮಾಪಕರಲ್ಲಿ ಒಬ್ಬರಾದ ನಂದಿತಾ ದಾಸ್‌ ಕೂಡಾ ಈ ಮಾತನ್ನು ಒಪ್ಪುತ್ತಾರೆ. ನಿಜಕ್ಕೂ ನಾನು ಈ ಸಿನಿಮಾದಲ್ಲಿ ಇಂತಹುದೆಲ್ಲ ಕರಾಮತ್ತು ಮಾಡಿದ್ದೇವಾ ಎಂದು ನನಗೇ ಅಚ್ಚರಿಯಾಯಿತು ಎಂದು ನಂದಿತಾ ಹೇಳುತ್ತಾರೆ.

ತಾಹಿರ್‌ ರಾಜ್‌ ಭಾಸಿನ್‌, ರಸಿಕಾ ದುಗಾಲ್‌, ರಾಜಶ್ರೀ ದೇಶಪಾಂಡೆ, ರಿಶಿ ಕಪೂರ್‌,‍ಪರೇಶ್‌ ರಾವಲ್‌ ಮತ್ತು ಜಾವೇದ್‌ ಅಖ್ತರ್‌ ಪಾತ್ರವರ್ಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.