ADVERTISEMENT

ವರ್ಷದ ದ್ವಿತೀಯಾರ್ಧ ತೆರೆಯಲ್ಲಿ ಸಿನಿಹಬ್ಬ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 0:22 IST
Last Updated 21 ಜುಲೈ 2023, 0:22 IST
   

2023ರ ದ್ವಿತೀಯಾರ್ಧದಲ್ಲಿ ಬೆಳ್ಳಿತೆರೆಯಲ್ಲಿ ಸಾಲು ಸಾಲು ಸಿನಿಮಾಗಳ ಹಬ್ಬ ಆರಂಭವಾಗಲಿದೆ. ಇದಕ್ಕೆ ಈ ಶುಕ್ರವಾರವೇ(ಜುಲೈ 21) ಮುನ್ನುಡಿ. ಒಟ್ಟು ಎಂಟು ಸಿನಿಮಾಗಳು ಇಂದು ರಿಲೀಸ್‌ ಆಗಿದ್ದು, ಹೊಸಬರ ತಂಡವೇ ತೆರೆ ಆಳಲಿದೆ.      

‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’: ಕಿರಿಕ್‌ ಮಾಡುವ ಹಾಸ್ಟೆಲ್‌ ವಾರ್ಡನ್‌ ಕಾಟದಿಂದ ತಪ್ಪಿಸಿಕೊಳ್ಳಲು ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎನ್ನುವ ಕಥಾಹಂದರದೊಂದಿಗೆ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ತೆರೆಗೆ ಬಂದಿದ್ದಾರೆ. ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ, ದಿಗಂತ್‌, ಪವನ್‌ ಕುಮಾರ್‌ ಮುಂತಾದ ಖ್ಯಾತ ನಟರ ಸಾಥ್‌ ಸಿಕ್ಕಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. 

‘ಇದು ನನ್ನ ಶಿಷ್ಯಂದಿರೇ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ‘ಲೂಸಿಯಾ’ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ತಂತ್ರಜ್ಞರು. ಒಂದು ಸಿನಿಮಾದ ಕಥೆ ಇದೆ ಅತಿಥಿ ಪಾತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದರು. ಕಥೆಯನ್ನೇ ಕೇಳಲಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್, ಶೈನ್ ಶೆಟ್ಟಿ ಇದ್ದರು. ಬಹಳ ಅದ್ಭುತವಾದ ಶೂಟಿಂಗ್ ಅನುಭವ. 500 ಜನ ಕಲಾವಿದರನ್ನು ಒಂದು ನೈಟ್‌ ಸೀಕ್ವೆಲ್‌ನಲ್ಲಿ ಚಿತ್ರೀಕರಣ ಮಾಡುವುದು ಸವಾಲು. ಜನರು ಖಂಡಿತವಾಗಿಯೂ ಸಿನಿಮಾವನ್ನು ಮೆಚ್ಚುತ್ತಾರೆ’ ಎನ್ನುವುದು ರಿಷಬ್‌ ಮಾತು. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮ ‘ಪರಂವಃ ಪಿಕ್ಚರ್ಸ್’ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲಂಸ್‌ ಬ್ಯಾನರ್‌ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ. ಕಶ್ಯಪ್ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

ADVERTISEMENT

‘ಅಂಬುಜ’: ನೈಜ ಘಟನೆ ಆಧಾರಿತ ‘ಅಂಬುಜ’ ಸಿನಿಮಾ ಮಹಿಳಾ ಪ್ರಧಾನ ಚಿತ್ರ. ಶುಭಾ ಪೂಂಜಾ, ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶ್ರೀನಿ ಹನುಮಂತರಾಜು ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಅಪರಾಧ ವರದಿಗಾರ್ತಿಯಾಗಿ ಶುಭಾ ಪೂಂಜಾ ನಟಿಸಿದ್ದಾರೆ. ‘ನನ್ನ ಪಾತ್ರಕ್ಕೆ ಹಲವು ಶೇಡ್ಸ್‌ ಇವೆ. ಇದು ಶ್ರೀನಿ ಜೊತೆಗೆ ನನ್ನ ಎರಡನೇ ಸಿನಿಮಾ. ಕ್ರೈಮ್, ಹಾರರ್, ಸಸ್ಪೆನ್ಸ್, ಹಾಸ್ಯ ಸೇರಿದಂತೆ ಭಾವನಾತ್ಮಕ ಅಂಶಗಳನ್ನೂ ಸಿನಿಮಾ ಒಳಗೊಂಡಿದೆ’ ಎನ್ನುತ್ತಾರೆ ಶುಭಾ. ರಜಿನಿ ಅವರಿಗೆ ಇದು ಚೊಚ್ಚಲ ಸಿನಿಮಾ. ದೀಪಕ್‌ ಸುಬ್ರಹ್ಮಣ್ಯ ನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಕಾಶಿನಾಥ್ ಡಿ ಮಡಿವಾಳರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಡೇವಿಡ್‌’: ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ಇದು. ಧನರಾಜ ಬಾಬು ಜಿ. ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ‘ಇದು ಒಂದು ರೊಮ್ಯಾಂಟಿಕ್ ಮರ್ಡರ್ ಮಿಸ್ಟರಿ ಜಾನರ್‌ ಸಿನಿಮಾವಾಗಿದ್ದು, ತಂತ್ರಜ್ಞರ ಕೈಚಳಕ ಸಿನಿಮಾದಲ್ಲಿ ಹೆಚ್ಚು ಇದೆ’ ಎಂದಿದ್ದಾರೆ ಶ್ರೇಯಸ್ ಚಿಂಗಾ. ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಸಾರಾ ಹರೀಶ್ ಬಣ್ಣಹಚ್ಚಿದ್ದಾರೆ. ಈ ಚಿತ್ರವನ್ನು ಚಂದನ್ ಫಿಲಂಸ್ ವಿತರಣೆ ಮಾಡುತ್ತಿದೆ. ಬುಲೆಟ್ ಪ್ರಕಾಶ್ ಅವರು ನಟಿಸಿರುವ ಕೊನೆಯ ಚಿತ್ರ ಇದಾಗಿದೆ. 

‘ಪರಂವಃ’: ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ 200 ಜನ ಸ್ನೇಹಿತರು ಸೇರಿ ನಿರ್ಮಿಸಿರುವ ಸಿನಿಮಾ ಇದು. ಪ್ರೇಮ್ ಸಿಡೇಗಲ್, ಮೈತ್ರಿ ಜೆ. ಕಶ್ಯಪ್, ಗಣೇಶ್ ಹೆಗ್ಗೋಡು ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಮಣ್ಣಿನ ಕಲೆಯಾದ ವೀರಗಾಸೆಯ ಕುರಿತಾದ ಜೊತೆಗೆ ತಂದೆ ಮಗನ ನಡುವಿನ ಭಾವನಾತ್ಮಕ ಪಯಣದ ಕುರಿತು ಚಿತ್ರದ ಕಥಾಹಂದರವಿದೆ. ಸಂತೋಷ್ ಕೈದಾಳ ಚಿತ್ರದ ನಿರ್ದೇಶಕರು. 

‘ದೇವರ ಕನಸು’: ಪ್ರತಿಷ್ಠಿತ ಕಾನ್ಸ್ ಸೇರಿದಂತೆ ಮೂವತ್ತಕ್ಕೂ ಅಧಿಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ ಈ ಮಕ್ಕಳ ಚಿತ್ರ ಇಂದು ತೆರೆಕಂಡಿದೆ. ಸುರೇಶ್ ಲಕ್ಕೂರ್ ನಿರ್ದೇಶಿಸಿರುವ ಈ ಚಿತ್ರದ ಹಾಡುಗಳು, ಪಿಆರ್‌ಕೆ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ. ‘ನನ್ನ ನಿರ್ದೇಶನದ ಮೊದಲ ಚಿತ್ರವಿದು. ‘ದೇವ’ ಎನ್ನುವುದು ಈ ಚಿತ್ರದ ಮುಖ್ಯಪಾತ್ರಧಾರಿಯ ಹೆಸರು. ಈ ಪಾತ್ರದಲ್ಲಿ ಮಾಸ್ಟರ್ ದೀಪಕ್ ಅಭಿನಯಿಸಿದ್ದಾರೆ. ಈ ಹುಡುಗ ಕಾಣುವ ಕನಸು ಈಡೇರುವುದೇ ಇಲ್ಲವೇ? ಎಂಬುವುದು ಚಿತ್ರದ  ಕಥಾಹಂದರ. ‌ದೀಪಕ್, ಅಮೂಲ್ಯ, ಅಋಷಿ ವೇದಿಕ ಹಾಗೂ ಮಾಕ್ ಮಣಿ ಚಿತ್ರದ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದರು ನಿರ್ದೇಶಕ ಸುರೇಶ್‌ ಲಕ್ಕೂರ್‌. 

‘ಮಧುರಕಾವ್ಯ’: ನಾಟಿ ವೈದ್ಯ ಮಧುಸೂದನ್‌ ಕ್ಯಾತನಹಳ್ಳಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ. ಆಯುರ್ವೇದ ಮತ್ತು ಅಲೋಪಥಿ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ತೆರೆಮೇಲೆ ಹೇಳುತ್ತಿದ್ದಾರೆ ಮಧುಸೂದನ್. ಅವರೇ ಈ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.‌ ತಮ್ಮ ಅನುಭವಗಳಿಗೇ ಸಿನಿಮಾ ರೂಪ ನೀಡಿರುವ ಅವರು, ವಿಖ್ಯಾತ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

‘ನಿಮ್ಮೆಲ್ಲರ ಆಶೀರ್ವಾದ’: ಕನ್ನಡ ಚಿತ್ರರಂಗದಲ್ಲೀಗ ಹೊಸಬರ ಆಗಮನ ಹೆಚ್ಚುತ್ತಿದೆ. ‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾವೂ ಹೊಸಬರ ಪ್ರಯತ್ನ. ವರುಣ್ ಸಿನಿ ಕ್ರಿಯೇಷನ್ಸ್‌ನಡಿ ವರುಣ್ ಹೆಗ್ಡೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರವಿಕಿರಣ್‌ ಚಿತ್ರದ ನಿರ್ದೇಶಕರು. ಕೌಟುಂಬಿಕ ಕಥಾಹಂದರದ ‘ನಿಮ್ಮೆಲ್ಲರ ಆಶೀರ್ವಾದ’ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಮೂಲಕ ಪ್ರತೀಕ್‌ ಶೆಟ್ಟಿ ನಾಯಕನಾಗಿ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಪಾಯಲ್‌ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.