ADVERTISEMENT

’ಸಂಜನಾ ಪ್ರಚಾರ ತಂತ್ರ; ರವಿಶ್ರೀವತ್ಸ ಫ್ಲಾಪ್‌ ನಿರ್ದೇಶಕ’- ತಾರಕಕ್ಕೇರಿದ ಜಟಾಪಟಿ

ಮೀ ಟೂ: ಆರೋಪ ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 9:29 IST
Last Updated 24 ಅಕ್ಟೋಬರ್ 2018, 9:29 IST
   

ಬೆಂಗಳೂರು:‘ಗಂಡ ಹೆಂಡತಿ’ ಚಿತ್ರದಲ್ಲಿ ಒತ್ತಾಯಪೂರ್ವಕವಾಗಿ ಹೆಚ್ಚು ಚುಂಬನ ದೃಶ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ಸಂಜನಾ ‌ಗಲ್ರಾನಿ ನಡುವಿನ ಆರೋಪ‍ ಪ್ರತ್ಯಾರೋಪ ಜೋರಾಗಿದೆ. ಸಂಜನಾ ಆರೋಪಕ್ಕೆ ಉತ್ತರಿಸಿರುವ ರವಿ ಶ್ರೀವತ್ಸ, ‘ಅವರು ಮಾಡುತ್ತಿರುವ ಮೀ ಟೂ ಆರೋಪ ಪ್ರಚಾರದ ತಂತ್ರ ಅಷ್ಟೇ’ ಎಂದು ತಿರುಗೇಟು ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ನಾನು ಬರೀ ಚುಂಬನದ ದೃಶ್ಯಗಳಿಗಾಗಿ ಆ ಸಿನಿಮಾ ಮಾಡಿಲ್ಲ. ಅದರಲ್ಲಿತಿಲಕ್, ವಿಶಾಲ್, ರವಿ ಬೆಳಗೆರೆ, ಮಂಜು ಭಾಷಿಣಿಯಂಥ ಹಲವು ಕಲಾವಿದರಿದ್ದಾರೆ’ ಎಂದು ಹೇಳಿದ್ದಾರೆ.

‘ಗಂಡ ಹೆಂಡತಿ ಸಿನಿಮಾ ಮಾಡುವಾಗ ತನಗೆ ಹದಿನಾರು ವರ್ಷ ಎಂದು ಸಂಜನಾ ಹೇಳಿದ್ದಾರೆ. ಆದರೆ, ವಿಕಿಪಿಡಿಯಾ ಪ್ರಕಾರಗಂಡ ಹೆಂಡತಿ ಚಿತ್ರದ ಮುಹೂರ್ತವಾದಾಗ ಸಂಜನಾ ಅವರ ತಂಗಿ ನಿಖಿತಾ ಗಲ್ರಾನಿಗೆ ಹದಿನೇಳು ವರ್ಷ ಆಗಿತ್ತು. ಅವಳ ಅಕ್ಕ ಸಂಜನಾಗೆ ಹದಿನಾರು ವರ್ಷ ಆಗಿರಲು ಹೇಗೆ ಸಾಧ್ಯ?’ ಎಂದಿರುವ ಅವರು ‘ಗಂಡ ಹೆಂಡತಿಗೂ ಮುನ್ನ ಸಂಜನಾ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ಅವರಿಗೆ ಚಿತ್ರರಂಗದ ಆಳ ಅಗಲಗಳು ಗೊತ್ತಿರಲಿಲ್ಲವೇ?’ ಎಂದೂ ಕೇಳಿದ್ದಾರೆ.

ADVERTISEMENT

‘ಹಿಂದಿಯ ಮರ್ಡರ್ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಬೇಕು ಎಂದುಕೊಂಡಾಗ ಮಲ್ಲಿಕಾ ಶೆರಾವತ್ ನಿರ್ವಹಿಸಿದ್ದ ಪಾತ್ರದಲ್ಲಿ ನಟಿಸಲು ಬೋಲ್ಡ್‌ ಆಗಿರುವ ಹುಡುಗಿಯೇ ಬೇಕು ಎಂದು ನಮಗೆ ಗೊತ್ತಿತ್ತು. ಹೊಸಬರನ್ನೇ ಆಯ್ದುಕೊಳ್ಳೋಣ ಎಂಬ ಕಾರಣಕ್ಕೆ ಮೂವತ್ತಕ್ಕೂ ಹೆಚ್ಚು ಕಲಾವಿದೆಯರನ್ನು ಆಡಿಷನ್ ಮಾಡಿದೆವು. ಆದರೆ ಮರ್ಡರ್ ಚಿತ್ರದ ಹೆಸರು ಕೇಳಿದ ತಕ್ಷಣ ಯಾರೂ ಒಪ್ಪಿಕೊಳ್ಳುತ್ತಿರಲಿಲ್ಲ. ಸುಸಂಸ್ಕೃತ ಹೆಣ್ಣುಮಕ್ಕಳ್ಯಾರೂ ಒಪ್ಪಿಕೊಳ್ಳುವ ಪಾತ್ರವೂ ಅದಾಗಿರಲಿಲ್ಲ. ಕೊನೆಗೆ ಸಂಜನಾ ಒಬ್ಬರೇ ನಟಿಸಲು ಒಪ್ಪಿಕೊಂಡರು. ಅವರಿಗೆ ಚಿತ್ರದ ಪೂರ್ತಿ ಕಥೆ ಹೇಳಿದ್ದೆವು. ಮರ್ಡರ್ ಸಿನಿಮಾ ಡಿವಿಡಿಯನ್ನೂ ಕೊಟ್ಟಿದ್ದೆವು. ಎಲ್ಲವನ್ನೂತಿಳಿದು ಒಪ್ಪಿಕೊಂಡೇ ಅವರು ಈ ಸಿನಿಮಾದಲ್ಲಿ ನಟಿಸಿದ್ದು. ಆಗ ಅವಕಾಶಕ್ಕಾಗಿ ಒಪ್ಪಿಕೊಂಡು ಈಗ ಸುಮ್ಮನೇ ಆರೋಪ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮಾಡುವಾಗ ಸಂಜನಾ ಅವರ ತಾಯಿಯನ್ನೂ ಕರೆದುಕೊಂಡು ಹೋಗಿದ್ದೆವು. ಅವರ ಎದುರಿನಲ್ಲಿಯೇ ಚಿತ್ರೀಕರಣ ಮಾಡಿದ್ದೆವು. ನಾವು ಬಲವಂತವಾಗಿಯೇನೂ ಚಿತ್ರೀಕರಿಸಿಲ್ಲ’ ಎಂದೂ ಹೇಳಿದರು.

‘ಆಡಿಷನ್ ಸಮಯದಲ್ಲಿ ಸಂಜನಾ ತಂದೆ ಬಂದಿರಲಿಲ್ಲ. ಮುಹೂರ್ತಕ್ಕೂ ಬಂದಿರಲಿಲ್ಲ. ಆಡಿಯೊ ರಿಲೀಸ್‌ಗೂ ಬಂದಿರಲಿಲ್ಲ. ಆದರೆ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಮಾತ್ರ ಹಾಜರಿದ್ದರು. ಈಗ ನನ್ನ ತಂದೆ ಸಿನಿಮಾ ನೋಡಿ ಅರ್ಧಕ್ಕೆ ಎದ್ದುಬಂದರು ಎಂದು ಹೇಳುತ್ತಾರೆ. ಅಲ್ಲಿಯವರೆಗೆ ಅವರ ತಂದೆ ಏನು ಮಾಡುತ್ತಿದ್ದರು’ ಎಂದು ರವಿ ಶ್ರೀವತ್ಸ ಪ್ರಶ್ನಿಸಿದರು.

‘ಕನ್ನಡದಲ್ಲಿ ಮೂಲ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಸಂಪೂರ್ಣ ಬದಲಿಸಿದ್ದೆವು. ಹೆಣ್ಣಿಗೆ ಒಂದು ಘನತೆ ಇರುವಂತೆ ನೋಡಿಕೊಂಡಿದ್ದೆವು. ನಮಗೆ ಕಿಸ್ಸಿಂಗ್ ದೃಶ್ಯಗಳನ್ನೇ ತೋರಿಸುವುದು ಮುಖ್ಯವಾಗಿರಲಿಲ್ಲ’ ಎಂದಿರುವ ಅವರು, ‘ಗಂಡ ಹೆಂಡತಿ ಸಿನಿಮಾ ಹಿಟ್ ಆದ ಮೇಲೆ ಅವರಿಗೆ ಒಂದರ ಹಿಂದೆ ಇನ್ನೊಂದು ಅವಕಾಶಗಳು ಸಿಗುತ್ತ ಹೋದವು. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಲು ಸಾಧ್ಯವಾಯಿತು. ಚಿತ್ರರಂಗದಲ್ಲಿ ಬೆಳೆಯಲು ನಮ್ಮ ಚಿತ್ರ ಬೇಕಿತ್ತು. ಈಗ ಪ್ರಚಾರಕ್ಕಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಹರಿಹಾಯ್ದರು.

ರವಿಶ್ರೀವತ್ಸ ಫ್ಲಾಪ್ ನಿರ್ದೇಶಕ

ರವಿಶ್ರೀವತ್ಸ ಅವರ ಸ್ಪಷ್ಟನೆಗೆ ಪ್ರತಿಕ್ರಿಯಿಸಿರು ಸಂಜನಾ ಗಲ್ರಾನಿ, ‘ಕಳ್ಳತನ ಮಾಡಿದವರು ಎಂದಾದರೂ ತಾನು ಕಳ್ಳ ಎಂದು ಒಪ್ಪಿಕೊಳ್ಳುತ್ತಾರೆಯೇ?’ ಎಂದು ಕೇಳಿದ್ದಾರೆ.‘ರವಿ ಶ್ರೀವತ್ಸ ಫ್ಲಾಪ್ ನಿರ್ದೇಶಕ. ಬರೀ ಸುಳ್ಳು ಹೇಳುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ನಾನು ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದೇನೆ. 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಬಾಹುಬಲಿ ಚಿತ್ರದ ನಿರ್ದೇಶಕರ ಜತೆಗೂ ಕೆಲಸ ಮಾಡುತ್ತಿದ್ದೇನೆ. ನಾನುಸಾಮಾನ್ಯ ನಟಿ ಅಲ್ಲ. ಆರೇಳು ಸಿನಿಮಾ ಮಾಡಿ ಸೋತಿರುವ ಫ್ಲಾಪ್ ನಿರ್ದೇಶಕ ರವಿ ಶ್ರೀವತ್ಸ ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಸಂಜನಾ ಖಾರವಾಗಿ ಪ್ರತಿಕ್ರಿಯಿಸಿದರು.

‘ನಾನು ಹಲವು ನಿರ್ದೇಶಕರ ಜತೆಗೆ ನಟಿಸಿದ್ದೇನೆ. ಎಲ್ಲರ ಮೇಲೂ ನಾನು ಆರೋಪ ಮಾಡಿಲ್ಲ. ಆದರೆ ರವಿ ಶ್ರೀವತ್ಸ ಓರ್ವ ಸ್ಯಾಡಿಸ್ಟ್’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.