ADVERTISEMENT

Honeymoon in Shillong | ಹನಿಮೂನ್ ಹತ್ಯೆ: ಚಿತ್ರ ನಿರ್ಮಿಸಲು ಕುಟುಂಬ ಒಪ್ಪಿಗೆ

ಏಜೆನ್ಸೀಸ್
Published 31 ಜುಲೈ 2025, 14:15 IST
Last Updated 31 ಜುಲೈ 2025, 14:15 IST

ಸೋನಮ್‌ ಹಾಗೂ ರಾಜ ರಘುವಂಶಿ

ಸೋನಮ್‌ ಹಾಗೂ ರಾಜ ರಘುವಂಶಿ

ADVERTISEMENT

ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್‌ ಹತ್ಯೆ ಪ್ರಕರಣ ಕುರಿತ ಚಿತ್ರ ನಿರ್ಮಾಣಕ್ಕೆ ಮೃತ ರಾಜ ರಘುವಂಶಿ ಅವರ ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ.

ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.

ಮೇಘಾಲಯ ಹನಿಮೂನ್‌ ಹತ್ಯೆ ಪ್ರಕರಣದ ಕುರಿತ ಚಿತ್ರಕ್ಕೆ ನಾವು ನಮ್ಮ ಒಪ್ಪಿಗೆ ನೀಡಿದ್ದೇವೆ ಎಂದು ರಾಜ ರಘುವಂಶಿ ಅವರ ಹಿರಿಯ ಸಹೋದರ ಸಚಿನ್ ಹೇಳಿದ್ದಾರೆ.

'ನನ್ನ ಸಹೋದರನ ಹತ್ಯೆಯ ಕಥೆಯನ್ನು ನಾವು ದೊಡ್ಡ ಪರದೆಯ ಮೇಲೆ ತರದಿದ್ದರೆ, ಯಾರು ಸರಿ ಮತ್ತು ಯಾರು ತಪ್ಪು ಎಂದು ಜನರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ' ಎಂದು ಅವರು ಪ್ರತಿಪಾದಿಸಿದ್ದಾರೆ.

ಸದ್ಯ 'ಹನಿಮೂನ್ ಇನ್ ಶಿಲ್ಲಾಂಗ್' (Honeymoon in Shillong) ಎಂದು ಹೆಸರಿಸಲಾಗಿರುವ ಈ ಚಿತ್ರವನ್ನು ಎಸ್‌.ಪಿ ನಿಂಬಾವತ್ ನಿರ್ದೇಶಿಸುತ್ತಿದ್ದಾರೆ. ಇದು ಪೂರ್ವ-ನಿರ್ಮಾಣ ಹಂತದಲ್ಲಿದೆ ಎಂದು ಐಎಮ್‌ಡಿಬಿ ವೆಬ್‌ಸೈಟ್ ತಿಳಿಸಿದೆ.

ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ. ವಿವಾಹದ ಬಳಿಕ ರಘುವಂಶಿ ಅವರು ದ್ರೋಹಕ್ಕೆ ಒಳಗಾದರು. ಇಂತಹ ದ್ರೋಹದ ಘಟನೆಗಳನ್ನು ನಿಲ್ಲಿಸಬೇಕು ಎಂಬ ಸಂದೇಶವನ್ನು ನಾವು ಈ ಚಿತ್ರದ ಮೂಲಕ ಸಾರ್ವಜನಿಕರಿಗೆ ನೀಡಲು ಬಯಸುತ್ತೇವೆ ಎಂದು ನಿಂಬಾವತ್ ಹೇಳಿದ್ದಾರೆ.

ಚಿತ್ರದ ಪಾತ್ರವರ್ಗ ಇನ್ನೂ ಬಹಿರಂಗಗೊಂಡಿಲ್ಲ. ಸಿನಿಮಾದ ಶೇ 80ರಷ್ಟು ಚಿತ್ರೀಕರಣ ಇಂದೋರ್‌ನಲ್ಲಿ ನಡೆಯಲಿದ್ದು, ಉಳಿದ ಶೇ. 20 ರಷ್ಟು ಚಿತ್ರೀಕರಣ ಘಟನೆ ನಡೆದ ಮೇಘಾಲಯದ ವಿವಿಧ ಭಾಗಗಳಲ್ಲಿ ನಡೆಯಲಿದೆ ಎಂದು ನಿಂಬಾವತ್ ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ನಿಂಬಾವತ್, ಒಟ್ಟಾರೆ ಘಟನೆಯನ್ನು ವಾಸ್ತವಿಕವಾಗಿ ಚಿತ್ರಿಸಲಾಗುವುದು. ಜತೆಗೆ ಕೆಲವು ಕಾಲ್ಪನಿಕ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಇದು ಸಂಬಂಧ, ಮದುವೆ, ಕೊಲೆ ಮತ್ತು ಸಾಹಸದ ದೃಶ್ಯದ ಸಂಪೂರ್ಣ ಪ್ಯಾಕೇಜ್ ಆಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ಹಿನ್ನೆಲೆ

ಇಂದೋರ್‌ನ ಸಾರಿಗೆ ಉದ್ಯಮಿ ರಾಜ ರಘುವಂಶಿ, ಸೋನಮ್ ಅವರನ್ನು ಮೇ 11ರಂದು ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ದಂಪತಿ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ಇವರು ನಾಪತ್ತೆಯಾಗಿದ್ದರು. ಜೂನ್‌ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್‌ ಸಮೀಪದ ಜಲಪಾತದ ಕಮರಿಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರು ಸೋನಮ್‌ಗಾಗಿ ಶೋಧ ಮುಂದುವರಿಸಿದ್ದರು.

ಜೂನ್‌ 9ರಂದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್‌ ಠಾಣೆಯಲ್ಲಿ ಸೋನಮ್ ಪೊಲೀಸರಿಗೆ ಶರಣಾಗಿದ್ದರು.

ರಘುವಂಶಿ ಅವರ ಹತ್ಯೆಗೆ ಸಂಚು ನಡೆಸಿದ ಆರೋಪದ ಮೇಲೆ ಸೋನಮ್‌, ಆಕೆಯ ಪ್ರಿಯಕರ ರಾಜ್‌ ಕುಶ್ವಾಹ, ವಿಶಾಲ್‌, ಆಕಾಶ್‌, ಆನಂದ್‌ ಸೇರಿದಂತೆ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿದ್ದರು.

ಪತಿಯನ್ನು ಕೊಲ್ಲುವಂತೆ ಸೋನಮ್‌ ಸುಪಾರಿ ನೀಡಿದ್ದರು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೇಘಾಲಯದ ಪೊಲೀಸ್‌ ಮಹಾನಿರ್ದೇಶಕ ಐ. ನಾನ್ರಾಂಗ್‌ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.