ಧನುಶ್ ಗೌಡ ನಿರ್ದೇಶನದ, ಮೋಕ್ಷಿತಾ ಪೈ ಹಾಗೂ ವಿನು ಗೌಡ ನಟನೆಯ ‘ಮಿಡಲ್‌ಕ್ಲಾಸ್ ರಾಮಾಯಣ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಶೀರ್ಷಿಕೆಯೇ ಹೇಳುವಂತೆ ಇದೊಂದು ಮಧ್ಯಮ ವರ್ಗದ ಕುಟುಂಬದ ಕಥೆ. ಅಂಜನಾದ್ರಿ ಪ್ರೊಡಕ್ಷನ್ ಹಾಗೂ ವಾವ್ ಸ್ಟುಡಿಯೋಸ್ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಧಾರಾವಾಹಿಯಲ್ಲಿ ನಟಿಸಿರುವ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನನಗೆ ಸಿನಿಮಾ ಲೋಕ ಹೊಸದು. ಒಂದು ಸಿನಿಮಾ ಬಿಡುಗಡೆಯಾಗುವುದು ಬಹಳ ಮುಖ್ಯ. ಸದ್ಯದಲ್ಲೇ ನಮ್ಮ ‘ಮಿಡಲ್‌ಕ್ಲಾಸ್ ರಾಮಾಯಣ’ ಸಿನಿಮಾ ರಿಲೀಸ್ ಆಗಲಿದೆ. ಅಚ್ಚುಕಟ್ಟಾಗಿ ಸಿನಿಮಾವನ್ನು ಮಾಡಿದ್ದೇವೆ’ ಎನ್ನುತ್ತಾರೆ ಮೋಕ್ಷಿತಾ.
ಧನುಶ್ ಗೌಡ ಮಾತನಾಡಿ, ‘ಇದು ನನ್ನ ಎರಡನೇ ಸಿನಿಮಾ. ಮೊದಲು ‘ರೆಬೆಲ್ ಹುಡುಗರು’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ‘ಮಿಡಲ್‌ಕ್ಲಾಸ್’ ರಾಮಾಯಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಸಿದ್ಧವಾಗಿದೆ. ಮೊದಲು ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆ. ಸಿನಿಮಾದ ಕಥೆ ಸಿದ್ಧಸೂತ್ರದಲ್ಲಿ ಸಿದ್ಧವಾಗಿಲ್ಲ. ಕಮರ್ಷಿಯಲ್ ಹಾಡು, ಫೈಟ್ಸ್ ಸಿನಿಮಾದಲ್ಲಿ ಇಲ್ಲ. ಕಥೆ ತುಂಬಾ ಮನರಂಜನಾತ್ಮಕವಾಗಿದೆ’ ಎಂದರು.
ಅಲೆಕ್ಸ್ ಸಂಗೀತ ನಿರ್ದೇಶನ, ವಿನೋದ್ ಲೋಕಣ್ಣನವರ್ ಛಾಯಾಚಿತ್ರಗ್ರಹಣ, ಉದಯ್‌ಕುಮಾರ್ ಹಾಗೂ ಧನುಷ್ ಗೌಡ ಸಂಭಾಷಣೆ ಮತ್ತು ಚಿತ್ರಕಥೆ ಸಿನಿಮಾಗಿದೆ. ಎಸ್. ನಾರಾಯಣ್, ವೀಣಾ ಸುಂದರ್, ಮಜಾಭಾರತ ಜಗ್ಗಪ್ಪ, ಯುಕ್ತ ಪೆರ್ವಿ, ಬಲ ರಾಜವಾಡಿ, ವಿಜಯ್, ಶೋಭರಾಜ್, ತುಕಾಲಿ ಸಂತೋಷ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.