ADVERTISEMENT

ನಟನೆ ಮೂಲಕವೇ ಗುರುತಿಸಿಕೊಳ್ಳಬೇಕು; ಮಿಶಾ ನಾರಂಗ್‌

ವಿನಾಯಕ ಕೆ.ಎಸ್.
Published 13 ಫೆಬ್ರುವರಿ 2026, 1:30 IST
Last Updated 13 ಫೆಬ್ರುವರಿ 2026, 1:30 IST
<div class="paragraphs"><p>ಮಿಶಾ ನಾರಂಗ್‌</p></div>

ಮಿಶಾ ನಾರಂಗ್‌

   

ಅಜೇಯ್‌ ರಾವ್‌, ಮಿಶಾ ನಾರಂಗ್ ಜೋಡಿಯಾಗಿ ನಟಿಸಿರುವ ‘ಸರಳ ಸುಬ್ಬರಾವ್‌’ ಚಿತ್ರ ಮುಂದಿನ ವಾರ (ಫೆ.20) ತೆರೆ ಕಾಣುತ್ತಿದೆ. ಮುಂಬೈನಿಂದ ಬಂದು ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರುವ ಕನಸು ಕಾಣುತ್ತಿರುವ ನಟಿ ಮಿಶಾ ನಾರಂಗ್ ಚಿತ್ರ ಹಾಗೂ ತಮ್ಮ ಸಿನಿಪಯಣ ಕುರಿತು ಮಾತನಾಡಿದ್ದಾರೆ. 

‘ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಆದರೆ ಸಿನಿಮಾ ನಟನೆ ಪ್ರಾರಂಭಿಸಿದ್ದು ದಕ್ಷಿಣ ಭಾರತದಲ್ಲಿ. ತೆಲುಗು ಚಿತ್ರೋದ್ಯಮದಿಂದ ಸಿನಿಪಯಣ ಪ್ರಾರಂಭವಾಯಿತು. ‘ಸರಳ ಸುಬ್ಬರಾವ್‌’ ಚಿತ್ರದ ಮೂಲಕ ಕನ್ನಡ ನಾಡಿಗೆ ಬಂದು ನಿಂತಿದ್ದೇನೆ. ಒಂದಷ್ಟು ಒಳ್ಳೆಯ ಸಿನಿಮಾಗಳು ಸಿಕ್ಕರೆ ಬೆಂಗಳೂರಿನಲ್ಲಿಯೇ ನೆಲೆಯೂರುವ ಆಲೋಚನೆ ಇದೆ. ಇಲ್ಲಿನ ಜನ ಬಹಳ ಒಳ್ಳೆಯವರು. ಎಲ್ಲರನ್ನೂ ತುಂಬ ಗೌರವದಿಂದ ಕಾಣುತ್ತಾರೆ’ ಎಂದು ಮಾತು ಪ್ರಾರಂಭಿಸಿದರು ಮಿಶಾ.

ADVERTISEMENT

ಚಿತ್ರದಲ್ಲಿ ಸರಳ ಎಂಬ ಪಾತ್ರವನ್ನು ಮಾಡಿದ್ದಾರೆ. 70ರ ದಶಕದ ಕಥೆ ಹೊಂದಿರುವ ಚಿತ್ರದಲ್ಲಿಆ  ಕಾಲದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ‘ಆ ಕಾಲದ ಪ್ರೀತಿ, ಪ್ರೇಮ, ಗಂಡ–ಹೆಂಡತಿ ಬಾಂಧವ್ಯ, ಸಾಂಸಾರಿಕ ಸಂಗತಿಗಳು ಕಥೆಯಲ್ಲಿದೆ. ನಾಯಕನಷ್ಟೇ ನಾಯಕಿಗೂ ಪ್ರಾಮುಖ್ಯವಿರುವ ಪಾತ್ರ. ನಿರ್ದೇಶಕರು ನನ್ನ ತೆಲುಗು ಚಿತ್ರದಲ್ಲಿನ ನಟನೆ ನೋಡಿ ಈ ಪಾತ್ರದಲ್ಲಿ ಅವಕಾಶ ನೀಡಿದರು’ ಎನ್ನುತ್ತಾರೆ ಅವರು.

ಮುಂಬೈನಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಮಿಶಾ, ಕಾಲೇಜು ದಿನಗಳಲ್ಲಿಯೇ ರಂಗಭೂಮಿ, ಮಾಡೆಲಿಂಗ್‌ಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ತೆಲುಗಿನ ‘ತೆಲ್ಲವಾರಿತೆ ಗುರುವಾರಂ’ ಚಿತ್ರದ ಮೂಲಕ ಸಿನಿಮಾಲೋಕಕ್ಕೆ ಕಾಲಿಟ್ಟರು. ‘ನಮ್ಮ ತಂದೆ ಪ್ರಾಂಶುಪಾಲರು. ಪ್ರಾಧ್ಯಾಪಕರು, ಎಂಜಿನಿಯರ್‌ಗಳನ್ನು ಹೊಂದಿರುವ ಕುಟುಂಬ ನಮ್ಮದು. ಹೀಗಾಗಿ ನನಗೂ ಓದು ಮೊದಲ ಆದ್ಯತೆಯಾಗಿತ್ತು. ಸ್ನಾತಕೋತ್ತರ ಪದವಿ ಮುಗಿದ ನಂತರ ಪಿಎಚ್‌.ಡಿ ಮಾಡುವಂತೆ ಒತ್ತಡವಿತ್ತು. ಆದರೆ ನಾನು ನಟನೆ ಕಡೆ ಆಸಕ್ತಿ ಬೆಳೆಸಿಕೊಂಡೆ. ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಕುದುರೆ ಸವಾರಿ, ಯೋಗ, ಧಾನ್ಯ ಸೇರಿದಂತೆ ನಟನಾ ಕೌಶಲ್ಯ ಹೆಚ್ಚಿಸುವ ಸಂಗತಿಗಳನ್ನು ಕಲಿತೆ. ಈಗಲೂ ಒಂದಷ್ಟು ಹೊಸ ಸಂಗತಿಗಳನ್ನು ಕಲಿಯುತ್ತಿದ್ದೇನೆ. ನಟನೆಯಲ್ಲಿಯೇ ಆತ್ಮಸಂತೃಪ್ತಿ ಇದೆ ಎನ್ನಿಸಿತು. ಅದನ್ನು ವೃತ್ತಿಯಾಗಿ ತೆಗೆದುಕೊಂಡೆ. ಕಾಸ್ಟಿಂಗ್‌ ಏಜೆನ್ಸಿ ಕಡೆಯಿಂದ ತೆಲುಗು ಚಿತ್ರದಲ್ಲಿ ಅವಕಾಶ ಲಭಿಸಿತು. ಅದಾದ ಬಳಿಕ ತಮಿಳು ಸಿನಿಮಾದಲ್ಲಿಯೂ ನಟಿಸಿದೆ. ಇದು ನನ್ನ ಐದನೇ ಸಿನಿಮಾ’ ಎಂದು ಸಿನಿಪಯಣದ ಮೆಲುಕು ಹಾಕಿದರು. 

ಗಟ್ಟಿತನವಿಲ್ಲದ ಪಾತ್ರಗಳಲ್ಲಿ ನಟಿಸುವುದು ಅವರಿಗೆ ಇಷ್ಟವಿಲ್ಲ. ‘ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೂ ಸ್ವಲ್ಪ ಪ್ರಾಮುಖ್ಯವಿರಬೇಕು. ಪೂರ್ತಿ ಸಿನಿಮಾ ನಾನೇ ಕಾಣಿಸಿಕೊಳ್ಳಬೇಕೆಂದಿಲ್ಲ. ನಾಯಕನ ಅರ್ಧದಷ್ಟಾದರೂ ತೆರೆಯ ಸಮಯವಿರಬೇಕು. ಹಾಗಂತ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುವ ಕನಸಿಲ್ಲ. ಒಳ್ಳೆಯ ನಟ, ನಿರ್ಮಾಣ ಸಂಸ್ಥೆಯೊಂದಿಗೆ ಜನ ಗುರುತಿಸುವ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ’ ಎಂದರು. 

‘ನಾನು ವಿದ್ಯಾರ್ಥಿಯಾಗಿದ್ದಾಗ ‘ಕೆಜಿಎಫ್‌’ ಸಿನಿಮಾ ಬಹಳ ಜನಪ್ರಿಯವಾಗಿತ್ತು. ಆ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೆ. ಅದಾದ ಬಳಿಕ ‘ಕಾಂತಾರ’ ಕೂಡ ಸಾಕಷ್ಟು ಸದ್ದು ಮಾಡಿತು. ಕನ್ನಡ ಚಿತ್ರೋದ್ಯಮ ಪ್ರಬಲವಾಗಿದೆ. ಇಲ್ಲಿ ಅವಕಾಶ ಪಡೆಯಲು ಸವಾಲುಗಳೂ ಇವೆ. ಸಾಕಷ್ಟು ಪ್ರತಿಭಾನ್ವಿತ ನಟಿಯರಿದ್ದಾರೆ. ಹೀಗಾಗಿ ನಟನೆ ಮೂಲಕವೇ ನಾವು ಗುರುತಿಸಿಕೊಳ್ಳಬೇಕು. ಒಂದು ಸಿನಿಮಾದಲ್ಲಿ ನಟನೆ ನೋಡಿ ಮತ್ತೊಂದು ಸಿನಿಮಾದಲ್ಲಿ ಅವಕಾಶ ಸಿಗಬೇಕು. ಸದ್ಯ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಕೆಲವು ಮಾತುಕತೆ ಹಂತದಲ್ಲಿವೆ. ನಾನು ಕಥೆಯ ಆಯ್ಕೆಯಲ್ಲಿ ಬಹಳ ಮುತುವರ್ಜಿ ವಹಿಸುತ್ತೇನೆ. ಪ್ರಾಮುಖ್ಯವಿಲ್ಲದ ಪಾತ್ರಗಳನ್ನು ನಿರಾಕರಿಸುತ್ತೇನೆ. ಕೆಲಸ ಮಾಡುವ ತಂಡ ಕೂಡ ನನಗೆ ಬಹಳ ಮುಖ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.