ADVERTISEMENT

ಹನಿ ಹನಿ ಸಿನಿ ಕಹಾನಿ...

ಬಾಲಚಂದ್ರ ಎಚ್.
Published 21 ಜುಲೈ 2022, 19:30 IST
Last Updated 21 ಜುಲೈ 2022, 19:30 IST
ಸಿನಿ ಶೆಟ್ಟಿ, ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆ
ಸಿನಿ ಶೆಟ್ಟಿ, ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆ   

ಫಳ ಫಳ ಹೊಳೆಯುತ್ತಿದ್ದ ಗುಲಾಬಿ ಬಣ್ಣದ ವಸ್ತ್ರ ತೊಟ್ಟು ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡು ಉಡುಪಿಯ ರಸ್ತೆಯಲ್ಲಿ ಕರಾವಳಿ ಬೆಡಗಿ ಸಿನಿ ಶೆಟ್ಟಿ ಹೂ ನಗೆ ಚೆಲ್ಲುತ್ತಾ ಸಾಗಿದಾಗ ಅದೇನು ಸಂಭ್ರಮ. ಅಲಂಕೃತ ಸಾರೋಟಿನಲ್ಲಿ ಕುಳಿತು ಗಾಳಿಯಲ್ಲಿ ಕೈಬೀಸುತ್ತಾ ಸಾಗಿದ ಕುಡ್ಲದ ಸುಂದರಿಯ ನೋಟಕ್ಕೆ, ಸೌಂದರ್ಯಕ್ಕೆ ಎಲ್ಲರೂ ಮನಸೋತವರೇ.

ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಉಡುಪಿಗೆ ಬಂದ ಸಿನಿ ಶೆಟ್ಟಿಗೆ ಸಿಕ್ಕಿದ್ದು ಅದ್ಧೂರಿ ಸ್ವಾಗತ. ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್‌ನಲ್ಲಿ ಕರಾವಳಿಯ ಬಂಟರ ಯಾನೆ ನಾಡವರ ಮಾತೃ ಸಂಘ ಅವರನ್ನು ಸನ್ಮಾನಿಸಿ ಗೌರವಿಸಿತು.

ವೃತ್ತಿ ಜೀವನ ಹಾಗೂ ಭವಿಷ್ಯದ ಕನಸುಗಳನ್ನು ತೆರೆದಿಟ್ಟ ಸಿನಿ ಶೆಟ್ಟಿ ಕಂಗಳಲ್ಲಿ ಹೊಳಪು ಎದ್ದು ಕಾಣುತ್ತಿತ್ತು. ಮಾತೃಭಾಷೆ ತುಳುವಿನಲ್ಲಿ ಪಟಪಟನೆ ಮಾತನಾಡಿದ ಸಿನಿ, ‘ಮಿಸ್ ಇಂಡಿಯಾ ಕನಸು ನನಸಾಗಿದೆ. ಮಿಸ್‌ ವರ್ಲ್ಡ್‌ ಕಿರೀಟ ಮುಡಿಯುವ ಮಹದಾಸೆ ಇದೆ’ ಎಂದು ಕಣ್ಣರಳಿಸಿ ಆತ್ಮವಿಶ್ವಾಸದ ನಗೆ ಚೆಲ್ಲಿದರು.

ADVERTISEMENT

‘ದೈವ ದೇವರ ಹಾಗೂ ಜನರ ಆಶೀರ್ವಾದ ಇದ್ದರೆ ಖಂಡಿತ ವಿಶ್ವ ಸುಂದರಿ ಆಗುತ್ತೇನೆ. ಸಾಧನೆಯ ಹಾದಿ ಸುಲಭವಲ್ಲ ಎಂಬ ಅರಿವಿದೆ. ಸಾಧಿಸುವ ಛಲವೂ ನನ್ನೊಳಗಿದೆ. ಮಿಸ್ ವರ್ಲ್ಡ್‌ ಪ್ರಶಸ್ತಿ ಗೆಲ್ಲಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿರುವೆ’ ಎಂದರು ಸಿನಿ.

‘ಜೀವನ ಎಂಬುದು ನಿರಂತರ ಕಲಿಕೆ. ಪ್ರತಿಕ್ಷಣವೂ ಹೊಸತನ್ನು ಕಲಿಕೆಯಲು ಅವಕಾಶ ಹಾಗೂ ವೇದಿಕೆ ಸೃಷ್ಟಿಯಾಗುತ್ತದೆ. ಶಿಕ್ಷಣದ ಜ್ಞಾನ ಸಂಪಾದನೆಗೆ ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿದೆ. ಡ್ಯಾನ್ಸ್‌ ಕಲಿಯುತ್ತಲೇ ಸೃಜನಶೀಲತೆ ಮೈಗೂಡಿಸಿಕೊಂಡೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಜಗತ್ತಿನ ಮುಂದೆ ಸೌಂದರ್ಯ ಅನಾವರಣಗೊಳಿಸುವ ಕಲೆ ಸಿದ್ಧಿಸಿತು. ನೇರ ನಡೆ ನುಡಿ ವ್ಯಕ್ತಿತ್ವವನ್ನು ರೂಪಿಸಿತು. ವೆಬ್ ಸೀರಿಸ್‌ನಲ್ಲಿನ ಅಭಿನಯ ನನ್ನೊಳಗಿದ್ದ ನಟನೆಯ ಪ್ರತಿಭೆ ಅನಾವರಣಗೊಳಿಸಿತು. ಹೀಗೆ ಬದುಕಿನ ಪ್ರತಿಕ್ಷಣವನ್ನು ವಿದ್ಯಾರ್ಥಿಯಾಗಿ ಕಲಿಯುತ್ತಲೇ ಸಾಗಿದ್ದೇನೆ’ ಎಂದರು ಕುಡ್ಲದ ಸುಂದರಿ.

‘ಅಪ್ಪ ಅಮ್ಮ ಹೋಟೆಲ್ ಉದ್ಯಮದಲ್ಲಿರುವುದರಿಂದ ಅತಿಥಿ ಸತ್ಕಾರ ಬಳುವಳಿಯಾಗಿ ಬಂದಿದೆ. ಮನೆಗೆ ಬಂದವರ ಜತೆ ಪ್ರೀತಿಯಿಂದ ಮಾತನಾಡುವುದು, ಸತ್ಕರಿಸುವುದು, ಗೌರವ ನೀಡುವುದು ಹಾಗೂ ನಮ್ರತೆಯನ್ನು ಪೋಷಕರಿಂದ ಕಲಿತಿದ್ದೇನೆ. ಕರಾವಳಿಯ ದೈವ, ದೇವರ ಬಗ್ಗೆ ಅಪಾರವಾದ ನಂಬಿಕೆ ಇದೆ. ತುಳನಾಡಿನ ಸಂಸ್ಕೃತಿಯ ಬಗ್ಗೆ ಗೌರವ ಇದೆ. ಮಾತೃಭಾಷೆ ತುಳು ಬಗ್ಗೆ ಪ್ರೀತಿ ಇದೆ. ಮಿಸ್ ಇಂಡಿಯಾ ಕಿರೀಟ ಗೆಲ್ಲಲು ಈ ಎಲ್ಲ ಗುಣಗಳು ಪ್ರಮುಖ ಪಾತ್ರ ವಹಿಸಿವೆ’ ಎಂದೂ ಸಿನಿ ಹೇಳಿದರು.

ಮಿಸ್‌ ವರ್ಲ್ಡ್‌ ಪ್ರಶಸ್ತಿ ಗೆಲ್ಲಲು ಮಾಡಿಕೊಂಡಿರುವ ತಯಾರಿ ಬಗ್ಗೆ ಮಾತನಾಡಿದ ಸಿನಿ ‘ಏಕಾಂಗಿಯಾಗಿ ವಿಶ್ವ ಸುಂದರಿ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ. ಮಿಸ್ ಇಂಡಿಯಾ ತಂಡದ ಪ್ರತಿ ಸದಸ್ಯರ ಶ್ರಮವೂ ಅಗತ್ಯ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಡೆ, ನುಡಿ ಹೇಗಿರಬೇಕು. ಸೌಂದರ್ಯ ಅಭಿವ್ಯಕ್ತಿ, ರ‍್ಯಾಂಪ್ ವಾಕ್‌, ಭಾರತದ ಶ್ರೇಷ್ಠತೆಯನ್ನು ಹೇಗೆ ಜಗತ್ತಿನ ಮುಂದಿಡಬೇಕು ಎಂಬುದನ್ನು ಕಲಿಯುತ್ತಿದ್ದೇನೆ. ಮುಂದೆ, ತುಳು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ’ ಎಂದು ಅವರು ಮಾತಿಗೆ ಬ್ರೇಕ್ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.