ಹಾಸ್ಯ ನಟ, ನಿರ್ಮಾಪಕ ಮಿತ್ರ ಕೈಯಲ್ಲಿ ಸದ್ಯ ಸಾಲು, ಸಾಲು ಸಿನಿಮಾಗಳಿವೆ. ‘ಕರಳೆ’, ‘ಕರಾವಳಿ’ ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇವರು ತಮ್ಮ ಸಿನಿಪಯಣದ ಮೆಲುಕು ಹಾಕಿದ್ದಾರೆ.
2003ರಲ್ಲಿ ಶಿವರಾಜ್‌ಕುಮಾರ್ ನಟನೆಯ ‘ಶ್ರೀರಾಮ್’ ಚಿತ್ರದ ಸಣ್ಣ ಪಾತ್ರದೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಮಿತ್ರ ಜನಪ್ರಿಯರಾಗಿದ್ದು ‘ಸಿಲ್ಲಿ ಲಲ್ಲಿ’, ‘ಪಾಪ ಪಾಂಡು’ ಧಾರಾವಾಹಿಗಳಿಂದ. ಈತನಕ 147 ಸಿನಿಮಾಗಳಲ್ಲಿ ನಟಿಸಿರುವ ಇವರು ತಮ್ಮದೇ ಬ್ಯಾನರ್ ಪ್ರಾರಂಭಿಸಿ ‘ರಾಗಾ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಡಬ್ಬಿಂಗ್ ಹಂತದಲ್ಲಿದೆ. ಈ ಚಿತ್ರದಲ್ಲಿ ಮೊದಲ ಸಲ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ‘ಕರಳೆ’ ಚಿತ್ರೀಕರಣ ನಡೆಯುತ್ತಿದೆ. ಗುರುನಂದನ್ ಅವರ ‘ಮಿಸ್ಟರ್ ಜಾಕ್’ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ದುನಿಯಾ ವಿಜಯ್ ಅವರ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿಯೂ ನಟಿಸುತ್ತಿರುವೆ. ಪಿ.ಸಿ.ಶೇಖರ್ ನಿರ್ದೇಶನದ ‘ಮಹಾನ್’, ಎ.ಪಿ.ಅರ್ಜುನ್ ನಿರ್ಮಾಣದ ‘ಲಕ್ಷ್ಮಿದೇವಿ’ ಚಿತ್ರಗಳು ಕೈಯಲ್ಲಿವೆ. ಬಹಳ ಕಾಲ ಹಾಸ್ಯಪಾತ್ರಗಳಿಗೆ ಸೀಮಿತವಾಗಿದ್ದೆ. ‘ಪರಸಂಗ’, ‘ರಾಗಾ’ ಚಿತ್ರಗಳಲ್ಲಿ ಭಾವನಾತ್ಮಕ ಪಾತ್ರಗಳನ್ನು ಮಾಡಿದೆ. ‘ಕರಾವಳಿ’ ರಗಡ್ ಲುಕ್‌ನ ಪೋಸ್ಟರ್ ಬಿಡುಗಡೆ ಆದ ಬಳಿಕ ಖಳನಾಯಕನ ಪಾತ್ರಗಳು ಹೆಚ್ಚು ಅರಸಿ ಬರುತ್ತಿವೆ’ ಎಂದು ತಮ್ಮ ಸದ್ಯದ ಯೋಜನೆಗಳನ್ನು ವಿವರಿಸಿದರು ಮಿತ್ರ.
1998ರಿಂದ 2005ರವರೆಗೆ ಇವರು ಕೊಡಗಿನ ಪ್ರವಾಸಿಧಾಮದಲ್ಲಿ ಕಲಾವಿದನಾಗಿದ್ದರು. ಪ್ರತಿದಿನ ಸಂಜೆ ಅಲ್ಲಿ ‘ಮಿತ್ರ ಸೂತ್ರಧಾರ’, ‘ಮಿತ್ರ ಪಾತ್ರಧಾರ’ ಎಂಬ ಹಾಸ್ಯ ಕಾರ್ಯಕ್ರಮ ನಡೆಯುತ್ತಿತ್ತು. ಪ್ರವಾಸಿಗರು ಈ ಕಾರ್ಯಕ್ರಮ ನೋಡದಿದ್ದರೆ ಕೊಡಗಿನ ಪ್ರವಾಸವೇ ಅಪೂರ್ಣ ಎಂಬಷ್ಟರ ಮಟ್ಟಿಗೆ ಈ ಕಾರ್ಯಕ್ರಮ ಜನಪ್ರಿಯವಾಗಿತ್ತು.
‘ನನ್ನ ಹೆಸರು ಶಿನು ಜಾರ್ಜ್. ಕೊಡಗಿನಲ್ಲಿ ನಾವು ನಡೆಸುತ್ತಿದ್ದ ಹಾಸ್ಯಸಂಜೆಯಿಂದಾಗಿ ಸ್ನೇಹಿತರೆಲ್ಲ ಮಿತ್ರ ಎಂದು ಕರೆಯಲು ಪ್ರಾರಂಭಿಸಿದರು. ಅದೇ ಹೆಸರಿನಿಂದ ಜನಪ್ರಿಯನಾದೆ. ‘ಮನಸಾರೆ’, ‘ಪಂಚರಂಗಿ’ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟವು. ‘ಸಿಲ್ಲಿ ಲಲ್ಲಿ’ ಸೇರಿದಂತೆ ಧಾರಾವಾಹಿಗಳಲ್ಲಿ ಸಾವಿರಾರು ಎಪಿಸೋಡ್‌ಗಳಲ್ಲಿ ನಟಿಸಿ ಮನೆಮಾತಾದೆ’ ಎನ್ನುತ್ತಾರೆ.
‘ಸಾಮಾನ್ಯ ಕಲಾವಿದನಾಗಿದ್ದವನು. ಹೈಟು, ವೈಟಿಲ್ಲ. ನೋಡಲು ಚೆನ್ನಾಗಿಲ್ಲ. ಭಗವಂತನ ಆಶೀರ್ವಾದ ಮತ್ತು ನಟನೆಯ ಹುಚ್ಚು ಇಲ್ಲಿತನಕ ತಂದು ನಿಲ್ಲಿಸಿದೆ. ಚಿತ್ರರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ಎಲ್ಲ ಕಡೆ ಜನ ಗುರುತಿಸುತ್ತಾರೆ. ನಟನೆಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಸಾಕಷ್ಟು ಸನ್ಮಾನ, ಪುರಸ್ಕಾರಗಳು ಸಿಕ್ಕಿವೆ. ಇದಕ್ಕೆಲ್ಲ ನಾನು ಯೋಗ್ಯನಾ ಎಂದು ಬಹಳಷ್ಟು ಸಲ ಅನ್ನಿಸುತ್ತದೆ’ ಎಂದು ಅವರು ಸ್ವವಿಮರ್ಶೆಗೆ ಇಳಿದರು.
2026ರಲ್ಲಿ ಸ್ಟಾರ್ ನಟರೊಬ್ಬರಿಗೆ ಬೃಹತ್ ಬಜೆಟ್‌ನ ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆ. ‘ನನ್ನದ್ದು ಸುಮ್ಮನೆ ಕೂರುವ ಜಾಯಮಾನವಲ್ಲ. ಏನಾದರೂ ಮಾಡುತ್ತಿರುತ್ತೇನೆ. ನಟನೆ ಜತೆಗೆ ರೆಸಾರ್ಟ್, ಈವೆಂಟ್ ಬಿಸಿನೆಸ್ ಇದೆ. ನಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಒಂದು ಸಿನಿಮಾ ಮಾಡಿರುವೆ. ಇದೀಗ ಮತ್ತೊಂದು ಸಿನಿಮಾ ಕಾರ್ಯ ಪ್ರಗತಿಯಲ್ಲಿದೆ. ಕಥೆ ಸಿದ್ಧಗೊಂಡು ಸ್ಟಾರ್ ನಟರೊಬ್ಬರ ಡೇಟ್‌ಗಾಗಿ ಕಾಯುತ್ತಿರುವೆ’ ಎಂದು ತಮ್ಮ ಮುಂದಿನ ಯೋಜನೆಯನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.