ADVERTISEMENT

‘ಮೋಡ ಕವಿದ ವಾತಾವರಣ’ ಪ್ರಯೋಗಾತ್ಮಕ ಸಿನಿಮಾ: ನಟಿ ಮೋಕ್ಷ ಕುಶಾಲ್‌ ಸಂದರ್ಶನ

ಅಭಿಲಾಷ್ ಪಿ.ಎಸ್‌.
Published 10 ಸೆಪ್ಟೆಂಬರ್ 2025, 13:51 IST
Last Updated 10 ಸೆಪ್ಟೆಂಬರ್ 2025, 13:51 IST
   

ಕೊಡಗಿನ ಕುವರಿ ನಟಿ ಮೋಕ್ಷ ಕುಶಾಲ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಶೀರ್ಷಿಕೆಯಿಂದಲೇ ಗಮನ ಸೆಳೆದ ಸಿನಿಮಾ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ನವೆಂಬರ್‌ನಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದೆ. ಧನಂಜಯ ನಟನೆಯ ‘ಕೋಟಿ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಮೋಕ್ಷ ಈ ಸಿನಿಮಾವನ್ನು ಒಂದು ಪ್ರಯೋಗಾತ್ಮಕ ಸಿನಿಮಾವನ್ನಾಗಿ ಕಂಡಿದ್ದಾರೆ. ತಮ್ಮ ಸಿನಿಪಯಣದ ಬಗ್ಗೆ ಮೋಕ್ಷ ಮಾತಿಗಿಳಿದಾಗ...

‘ನನ್ನ ಸಿನಿ ಜರ್ನಿಯ ಮೊದಲ ಹೆಜ್ಜೆಯೇ ‘ಜಿಯೊ ಸ್ಟುಡಿಯೊಸ್‌’ನಂಥ ದೊಡ್ಡ ಪ್ರೊಡಕ್ಷನ್‌ ಹೌಸ್‌ ಮೂಲಕ ಆಗಿತ್ತು. ಕಿರುಚಿತ್ರಗಳಲ್ಲಿ ನಟಿಸಿದ್ದ ನಾನು ಧನಂಜಯ ಅವರ ಜೊತೆ ತೆರೆ ಹಂಚಿಕೊಂಡ ಬಳಿಕ ಕನ್ನಡಿಗರಿಗೆ ಹೆಚ್ಚು ಪರಿಚಿತಳಾದೆ. ಇದು ನನ್ನ ಮುಂದಿನ ಹೆಜ್ಜೆಗಳಿಗೂ ಸಹಕಾರಿಯಾಗಿದೆ. ನನಗೆ ‘ಕೋಟಿ’ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದೇ ಸುನಿ ಅವರ ‘ಮೋಡ ಕವಿದ ವಾತಾವರಣ’ ಸಿನಿಮಾದಿಂದ. ಆ ಸಂದರ್ಭದಲ್ಲಿ ಈ ಶೀರ್ಷಿಕೆ ಘೋಷಣೆಯಾಗಿರಲಿಲ್ಲ. ಸಿನಿಮಾಗೆ ಬೇರೊಂದು ಶೀರ್ಷಿಕೆ ಇತ್ತು. ಈ ಸಿನಿಮಾದ ಟಾಕಿ ಭಾಗ ಶೂಟಿಂಗ್‌ ಪೂರ್ಣಗೊಂಡ ಸಂದರ್ಭದಲ್ಲಿ ‘ಕೋಟಿ’ಯ ಆಡಿಷನ್‌ಗೆ ಕರೆದಿದ್ದರು’ ಎನ್ನುತ್ತಾ ಬಿಡುಗಡೆಗೆ ಸಿದ್ಧವಿರುವ ತಮ್ಮ ಪ್ರಾಜೆಕ್ಟ್‌ ಬಗ್ಗೆ ಮೋಕ್ಷ ಮಾತು ಹೊರಳಿಸಿದರು.  

‘ಸುನಿ ಅವರ ‘ಮೋಡ ಕವಿದ ವಾತಾವರಣ’ ಸಿನಿಮಾ ಬಗ್ಗೆ ನನಗೆ ಬಹಳ ನಿರೀಕ್ಷೆಯಿದೆ. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಕನಸು ಇತ್ತು. ಹೊಸಬರನ್ನು ಪರಿಚಯಿಸುವುದರಲ್ಲಿ ಅವರು ನಿಸ್ಸೀಮ. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಬಂದ ನನಗೆ ಮೊದಲ ಅವಕಾಶವಿತ್ತವರು. ಹೊಸ ಪ್ರತಿಭೆಗಳ ಸಿನಿಮಾಗಳಿಗೆ ನಿರ್ಮಾಪಕರು ಸಿಗುವುದು ವಿರಳ. ಇಂತಹ ಸಂದರ್ಭದಲ್ಲಿ ಕಡಿಮೆ ಬಜೆಟ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಿ, ಜನತೆಗೆ ತಲುಪಿಸುವ ಕಲೆ ಅವರಿಗಿದೆ. ಅವರ ಯೋಚನೆಯೇ ಭಿನ್ನ. ಚಿತ್ರೀಕರಣದ ಸಂದರ್ಭದಲ್ಲಿ ಸಿದ್ಧತೆ ಮಾಡಿಕೊಂಡು ಹೋದರೆ ಅದೆಲ್ಲಾ ವ್ಯರ್ಥ. ಶೂಟಿಂಗ್‌ ವೇಳೆಯೇ ಬದಲಾವಣೆಗಳನ್ನು ಮಾಡಿಕೊಂಡು ಮುಂದಡಿ ಇಡುವ ಜಾಣ್ಮೆ ಅವರಿಗಿದೆ. ಆರಂಭದಲ್ಲಿ ಇದ್ದ ಕಥೆ ಶೂಟಿಂಗ್‌ ನಡೆಯುತ್ತಲೇ ಬದಲಾಗುತ್ತಾ ಹೋಯಿತು. ಇದರಿಂದ ನಾನೂ ಕಲಿಯುತ್ತ ಬೆಳೆದೆ. ‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲೊಂದು ಒಳ್ಳೆಯ ಪಾತ್ರ ನನಗೆ ದೊರಕಿದೆ. ಸುನಿ ಅವರ ಇತರೆ ಸಿನಿಮಾಗಳಿಗಿಂತ ಈ ಸಿನಿಮಾ ಭಿನ್ನವಾಗಿದೆ. ಅವರಿಗೂ ಇದು ಒಂದು ಪ್ರಯೋಗಾತ್ಮಕ ಸಿನಿಮಾ. ಸಾಮಾನ್ಯ ಕಥೆ ಇದಲ್ಲ. ಹೊಸತನವನ್ನು ಬಯಸುತ್ತಿರುವ ಪ್ರೇಕ್ಷಕರಿಗೆ ಇದು ರುಚಿಸಲಿದೆ’ ಎಂದರು ಮೋಕ್ಷ. 

ADVERTISEMENT

‘ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕಥೆಗಳನ್ನು ಕೇಳುತ್ತಿದ್ದೇನೆ. ‘ಕೋಟಿ’ ಬಳಿಕ ಒಳ್ಳೆಯ ಕಥೆ, ಪಾತ್ರಕ್ಕೆ ಕಾಯುತ್ತಿದ್ದೇನೆ. ಸಿನಿಮಾ ಸಂಖ್ಯೆಗಳಿಗಿಂತ ನಟಿಯಾಗಿ ಬೆಳೆಯಬೇಕು ಎನ್ನುವ ಆಸೆ ಇದೆ’ ಎನ್ನುತ್ತಾರೆ ಮೋಕ್ಷ.             

‘ಗತವೈಭವ’ ಸಿನಿಮಾ ಶೂಟಿಂಗ್‌ ನಡೆಯುತ್ತಿದೆ. ‘ಮೋಡ ಕವಿದ ವಾತಾವರಣ’ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಿದೆ. ನವೆಂಬರ್‌ನಲ್ಲಿ ರಿಲೀಸ್‌ ಮಾಡುವ ಯೋಚನೆಯಿದೆ.
ಸಿಂಪಲ್‌ ಸುನಿ, ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.